ಫ್ಯಾಕ್ಟ್‌ಚೆಕ್: ಕಾಲುಂಗುರ ಧರಿಸಿದರೆ ರಕ್ತದೊತ್ತಡ ನಿಯಂತ್ರವಾಗುತ್ತದೆ ಎಂಬುದು ನಿಜವೆ?

ಕನ್ನಡದ ಸಾಮಾಜಿಕ ಮಾಧ್ಯಮಗಳಲ್ಲಿ Fake Factory ಎಂದೇ ಹೆಸರಾಗಿರುವ POST CARD ಕನ್ನಡದ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ರ್‌ವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಮಹಿಳೆಯರು ಕಾಲುಂಗರ ಧರಿಸುವುದರ ಮಹತ್ವ ಕುರಿತು ಬರೆಯಲಾಗಿದೆ.

ಪೋಸ್ಟ್‌ರ್‌ನಲ್ಲಿ 4 ರೀತಿಯ ಅನುಕೂಲಗಳ ಬಗ್ಗೆ ಹೇಳಲಾಗಿದ್ದು ಅವುಗಳೆಂದರೆ:

  • ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ
  • ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತೆ
  • ಒಂದು ನಿರ್ದಿಷ್ಟ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ, ಇದಕ್ಕೆ ಕಾಲುಂಗರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುfತದೆ.
  • ಬೆಳ್ಳಿ ಅತ್ಯುತ್ತಮ ವಾಹಕವಾಗಿದ್ದು ಇದು ಭೂಮಿಯ ಮೇಲಿನ ಧೃವೀಯ ಶಕ್ತಿಯನ್ನು ಸೆಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ.

ಹೀಗೆ ಕಾಲುಂಗುರ ಧರಿಸುವುದರಿಂದ ಈ ರೀತಿಯ ಅನುಕೂಲಗಳಿವೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ರ್‌ಅನ್ನು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್:

ವಾಸ್ತವವಾಗಿ ಸ್ತ್ರೀಯರು ಕಾಲುಂಗುರ ಧರಿಸಿದರೆ ಮೇಲಿನ ಪ್ರಯೋಜನಗಳಾಗುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಆದರೆ ಈ ಪೋಸ್ಟ್‌ ಕಾರ್ಡ್ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕಾಗಿ ಹರಿಯಬಿಟ್ಟಿದೆ.

1) ಕಾಲುಂಗುರ ಧರಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆಯೇ ?

ಮೊದಲಿಗೆ ರಕ್ತದೊತ್ತಡದ ಬಗ್ಗೆ ಹೇಳಲಾಗಿದ್ದು ಸಾಮಾನ್ಯವಾಗಿ ನಾವು BP ಎಂದು ಕರೆಯುತ್ತೇವೆ. ಇತ್ತೀಚೆಗೆ ಈ ರಕ್ತದೊತ್ತಡ ಸಾಮಾನ್ಯವಾಗಿದ್ದು ಮಹಿಳೆ ಮತ್ತು ಪುರಷ ಇಬ್ಬರಲ್ಲಿಯೂ ಕಂಡುಬರುವ ಲಕ್ಷಣವಾಗಿದೆ. ರಕ್ತದೊತ್ತಡಕ್ಕೆ ಕಾರಣಗಳು ಕೆಳಗಿನಂತಿವೆ,

  • ಸಿಗರೇಟು ಸೇವನೆ
  • ಅತಿಯಾದ ಉಪ್ಪುಯುಕ್ತ ಆಹಾರ (ಜಂಕ್ ಫುಡ್) ಸೇವನೆ.
  • ಅನುವಂಶೀಯ ಕಾರಣಗಳು
  • ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡದೇ ಇರುವುದು
  • ಅತಿಯಾದ ಎಣ್ಣೆಯುಕ್ತ ಆಹಾರ ಸೇವನೆ
  • ಅತಿಯಾದ ಕಾಫೀ- ಟೀ ಕುಡಿಯುವುದು
  • ನಾರಿನಂಶವಿರುವ ಆಹಾರವನ್ನು ಸೇವಿಸದಿರುವುದು
  • ವಯೋಸಹಜ ಸಮಸ್ಯೆಗಳು
  • ಒತ್ತಡದ ಜೀವನಶೈಲಿ

ಹೀಗೆ ಹಲವು ಕಾರಣಗಳಿಂದ ಪುರುಷ ಮತ್ತು ಮಹಿಳೆಯರಲ್ಲಿ ರಕ್ತದೊತ್ತಡ ಕಂಡುಬರುತ್ತದೆ. ಪ್ರಾರಂಭದಲ್ಲಿ ಇದು ಹೆಚ್ಚಿನ ಸಮಸ್ಯೆ ಮಾಡದಿದ್ದರೂ ಇದನ್ನು ನಿರ್ಲಕ್ಷಸಿದರೆ ಖಂಡಿತವಾಗಿಯೂ ಸಮಸ್ಯೆ ಎದುರಾಗುತ್ತದೆ. ಇದಕ್ಕೆ  ವೈದ್ಯಕೀಯ ಸಲಹೆಗಳನ್ನು ಪಡೆದು ಸೂಕ್ತ ರೀತಿಯಲ್ಲಿ ಆಹಾರ ಪದ್ದತಿ, ಜೀವನ ಶೈಲಿ ಮತ್ತು ಔಷದೋಪಚಾರಗಳನ್ನು ಮಾಡಿಕೊಂಡರೆ  ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಆದರೆ ಕಾಲುಂಗುರ ಧರಿಸಿದರೆ BP ಬರುವುದಿಲ್ಲ ಅಥವಾ ನಿಯಂತ್ರಣದಲ್ಲಿರುತ್ತದೆ ಎಂದು ಹೇಳುವ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಹಾಗಾಗಿ ಈ ವಾದ ಸುಳ್ಳು.

2) ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆಯೇ ?

ಋತುಚಕ್ರವು ಮಹಿಳೆಯರ ಜೀವನದ ಮಹತ್ವದ ಘಟ್ಟವಾಗಿದ್ದು, ಒಂದು ನೈಸರ್ಗಿಕ ಕ್ರಿಯೆಯಾಗಿದೆ. ವಯಸ್ಕ ಮಹಿಳೆಯರು ಪ್ರತಿ ತಿಂಗಳು ಮುಟ್ಟಾಗುವುದು ಸಹಜ. ಆರೋಗ್ಯವಂತ ಮಹಿಳೆಯ ಚಕ್ರವು 28 ದಿನಗಳಾಗಿದ್ದು ಸಹಜವಾಗಿ 3 ರಿಂದ 5 ದಿನಗಳವರೆಗೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಿಂದಾಗಿ ಋತುಚಕ್ರದ ಏರುಪೇರು ಕಂಡುಬರುತ್ತಿದೆ. ವಿಪರೀತ ರಕ್ತಸ್ರಾವ ಅಥವಾ ರಕ್ತಸ್ರಾವ ಇಲ್ಲದಿರುವಿಕೆಗೆ ಸಹ ಇನ್ಯಾವುದೋ ರೋಗಗಳ ಲಕ್ಷಣಗಳಾಗಿರುತ್ತವೆ.

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹಲವು ತೊಂದರೆಗಳಿಗೆ ಪರಿಹಾರ ಹುಡುಕುವುದು ಕಷ್ಟಸಾಧ್ಯವಾದಾಗ ಎಷ್ಟೋ ಮಹಿಳೆಯರು ಗುಳಿಗೆಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರು ಸುಲಭ ಮಾರ್ಗಗಳನ್ನು ಅನುಸರಿಸುವುದರಿಂದಲೂ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು. ಆದರೆ ಹೆಚ್ಚಿನ ಸಮಯ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆಗಳನ್ನು ಪಡೆಯುವುದರಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಆದರೆ ಕಾಲುಂಗುರ ಧರಿಸುವುದರಿಂದ ಮಹಿಳೆಯರಲ್ಲಿ ಋತು ಚಕ್ರ ಸಮಸ್ಯೆ ಪರಿಹಾರವಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ, ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕಾಲುಂಗುರ ಧರಿಸಿದರೆ ಕೆಲವು ಮಹಿಳೆಯರಲ್ಲಿ ಕಂಡುಬಂದ ಸಮಸ್ಯೆಗಳು

ಕಾಲುಂಗುರ ಧರಿಸಿದ ಮಹಿಳೆಯರಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿದ್ದು ಮುಖ್ಯವಾಗಿ ಕಾಲುಬೆರಳ ಸುತ್ತಲು ಅಲರ್ಜಿ ಉಂಟಾಗಿ ಕಡಿತ, ನವೆ ಮತ್ತು ತುರಿಕೆಗಳಿಂದ ಬೆರಳು ಸಂದುಗಳಲ್ಲಿ ಗಾಯ ಆಗುವುದು. ಕಾಲುಂಗುರ ಧರಿಸುವುದರಿಂದ ಅಕ್ಕ ಪಕ್ಕದ ಬೆರಳುಗಳಿಗೆ ಒತ್ತುವಂತಹ ಅನುಭವವಾಗಿ ಕಿರಿ ಕಿರಿ ಉಂಟಾಗುವುದು.

ಇತ್ತೀಚಿನ ದಿನಗಳಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮತ್ತು ಬೆಳ್ಳಗ್ಗೆ ಬೆಳ್ಳಗೆಯೇ ಪ್ರಸಾರವಾಗುವ ಜ್ಯೋತೀಷ್ಯ ಕಾರ್ಯಕ್ರಮಗಳಲ್ಲಿ ವೈಭವೀಕರಿಸುವುದರಿಂದ  ತಾಳಿ, ಕಾಲುಂಗುರ ಬೈತಲೆಗೆ ಕುಂಕುಮ ಹಚ್ಚುವ ಪ್ರಕ್ರಿಯೆಗಳು ಇನ್ನಿಲ್ಲದಂತೆ  ಮಹಿಳೆಯರ ಮೇಲೆ ಹೇರಲ್ಪಡುತ್ತದೆ. ಇವುಗಳನ್ನು ಧರಿಸುವುದು ಅವರವರ ಇಚ್ಚೆ ಮತ್ತು ಆಯ್ಕೆ. ಇದನ್ನ ಧರಿಸಿದರೆ ರಕ್ತ ಸಂಚಾರ ಜಾಸ್ತಿ ಆಗುತ್ತೆ, ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಕಡಿಮೆ ಅಗುತ್ತೆ ಎಂಬುದೆಲ್ಲಾ ಸುಳ್ಳು.

ಹಾಗಾಗಿ ಇವುಗಳು ಮೂಢನಂಬಿಕೆಯ ಭಾಗವಾಗಿ ಮತ್ತು ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರನ್ನು  ಹಿಡಿತದಲ್ಲಿಟ್ಟುಕೊಳ್ಳುವ ಭಾಗವಾಗಿದೆ ಇದೆಯೇ ಹೊರತು ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲ. ಬೇರೆ ಬೇರೆ ರೀತಿಯಾಗಿ ಎಲ್ಲಾ ಧರ್ಮದಲ್ಲಿಯೂ ಇಂತಹ ಪದ್ದತಿಗಳಿವೆ. ಹಾಗಾಗಿ ಪೋಸ್ಟ್‌ಕಾರ್ಡ್ ಕನ್ನಡದ ಪ್ರತಿಪಾದನೆ ಸುಳ್ಳು. ಯಾವುದೇ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ ಎಂಬುದು ಏನ್‌ಸುದ್ದಿ.ಕಾಂ ನ ಆಶಯ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪಾಕ್ ವಿಡಿಯೊವನ್ನು ಭಾರತದ ಮುಸ್ಲಿಮರು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights