ಫ್ಯಾಕ್ಟ್‌ಚೆಕ್: ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಾಬಾ ಸಾಹೇಬರು ಹೇಳಿಲ್ಲ

ದೇಶದಲ್ಲಿ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ದೇಶ ವಿಭಜನೆಯ ವೇಳೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ ಅಂಬೇಡ್ಕರ್ ಹೇಳಿದ್ದರು ಎಂದು ಕಾರ್ಯಕ್ರಮವೊಂದರಲ್ಲಿ ಎಸ್‌.ಎಲ್‌ ಭೈರಪ್ಪ ಹೇಳಿದ್ದಾರೆ. ವಿಕಿ ಬುಕ್ಸ್‌–ಸ್ಮಾರ್ಟ್‌ಕೀ ಹಾಗೂ ವಿಶ್ವವಾಣಿ ಪುಸ್ತಕ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಿರಣ್ ಉಪಾಧ್ಯಾಯ ಅವರ ‘ವಿಶ್ವತೋಮುಖ’ ಹಾಗೂ ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ ಭಟ್ ಅವರ ‘ಸುದ್ದಿಮನೆ’, ‘ಇದೇ ಅಂತರಂಗ ಸುದ್ದಿ’ ಹಾಗೂ ‘ನೂರೆಂಟು ವಿಶ್ವ’ ಪುಸ್ತಕಗಳನ್ನು ಬಿಡುಗಡೆಮಾಡುವ ವೇಳೆ ಈ ಹೇಳಿಕೆಯನ್ನು ನೀಡಿದ್ದಾರೆ.

ಮುಂದುವರೆದು ಮುಸ್ಲಿಮರ ದೇಶವಾದ ಟರ್ಕಿಯಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಲಿಪಿಗಳಿಲ್ಲ. ಎಲ್ಲವೂ ಇಂಗ್ಲಿಷ್‌ನಲ್ಲಿದೆ. ಇದಕ್ಕೆ ಆ ದೇಶವನ್ನು ಆಳಿದ ಕಮಲ್ ಪಾಷಾ ಕಾರಣ. ಮಹಾತ್ಮ ಗಾಂಧೀಜಿ ಕಾಲದಲ್ಲಿಯೇ ಅವರು ಆಳ್ವಿಕೆ ನಡೆಸಿದ್ದರು. ಅವರಷ್ಟು ಹೊಸ ರೀತಿಯ ಆಲೋಚನೆಗಳನ್ನು ಬೇರೆ ಯಾರೂ ಮಾಡಲಿಲ್ಲ. ಗಲಭೆ ತಡೆಯಲು ಹಾಗೂ ಪ‍ರಸ್ಪರ ಸೌಹಾರ್ದದ ವಾತಾವರಣ ನಿರ್ಮಿಸಲು ಟರ್ಕಿಯಲ್ಲಿನ ಗ್ರೀಕರನ್ನು ಗ್ರೀಸ್‌ ದೇಶಕ್ಕೆ, ಅಲ್ಲಿದ್ದ ಟರ್ಕಿಯ ಜನರನ್ನು ತಮ್ಮ ದೇಶಕ್ಕೆ ಸ್ಥಳಾಂತರ ಮಾಡಿಸಿದರು. ಜನರಿಗೆ ಆಸ್ತಿಯ ಮಾರುಕಟ್ಟೆ ದರವನ್ನೂ ನೀಡಲಾಯಿತು. ನಮ್ಮಲ್ಲಿಯೂ ಈ ರೀತಿ ಹಿಂದೂ–ಮುಸ್ಲಿಮರ ಸ್ಥಳಾಂತರದ ಬಗ್ಗೆ ಅಂಬೇಡ್ಕರ್‌ ಒಂದು ಹಂತದವರೆಗೆ ಪ್ರತಿಪಾದಿಸಿದ್ದರು’ ಎಂದು ಬೈರಪ್ಪ ಹೇಳಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಮುಸ್ಲಿಂ ಕುರಿತು ಈ ನಿಲುವುಗಳನ್ನು ಹೊಂದಿದ್ದರೆ ಎಂದು ಎಸ್‌ ಎಲ್ ಭೈರಪ್ಪ ಅವರ ಹೇಳಿಕೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಎಸ್‌ ಎಲ್‌ ಭೈರಪ್ಪ ಅವರು ಹೇಳಿರುವ ಹಿನ್ನಲೆಯನ್ನು ಒಮ್ಮೆ ಪರಿಶೀಲಿಸಿದರೆ ಅಂಬೇಡ್ಕರ್ ಅವರು ಮುಸ್ಲಿಮರನ್ನು ಬಗ್ಗೆ ಮೇಲಿನ ನಿಲುವುಗಳನ್ನು ಹೊಂದಿದ್ದರೆ ಇಲ್ಲವೆ ಅದಕ್ಕೆ ಆಧಾರಗಳೇನು, ಅದರಲ್ಲಿ ಎಷ್ಟು ಸತ್ಯವಿದೆ? ಎಷ್ಟು ಸುಳ್ಳಿದೆ ಎಂದು ತಿಳಿಯುತ್ತದೆ.

ಅಂಬೇಡ್ಕರ್ ಅವರ ನಿಲುವುಗಳು :

ಅಂಬೇಡ್ಕರ್ ಅವರ ‘ಪಾಕಿಸ್ತಾನ್ ಆರ್ ಪಾರ್ಟಿಶನ್ ಆಫ್ ಇಂಡಿಯಾ’ ಕೃತಿಯು ಹಿಂದೂ – ಮುಸ್ಲಿಂ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು, ಆ ಎರಡೂ ಧಾರ್ಮಿಕ ಸಮುದಾಯಗಳ ಸಣ್ಣತನಗಳು ಮತ್ತು ಸ್ವತಂತ್ರ ಪೂರ್ವದಲ್ಲಿ ಪಾಕಿಸ್ತಾನ ಬೇಡಿಕೆಯ ಬಗ್ಗೆ ಮಾಡಿರುವ ಸುದೀರ್ಘ ಪಾಂಡಿತ್ಯಪೂರ್ಣ ಅಧ್ಯಯನವಾಗಿದೆ. ಈ ಪುಸ್ತಕದ ಕೆಲವು ಅಧ್ಯಾಯಗಳ ಕೆಲ ಮಾತುಗಳನ್ನು ಮಾತ್ರ ಹೆಕ್ಕಿ ಜನರಿಗೆ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಅಂಬೇಡ್ಕರ್‌ರವರು ಪುಸ್ತಕಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರೆಹಗಳು ಮತ್ತು‌ ಭಾಷಣಗಳು.‌ ಸಂಪುಟ-6. ಪುಟ ಸಂಖ್ಯೆ: 748ಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಅದರಲ್ಲಿ ಅವರು ಜನತೆಯ ವರ್ಗಾವಣೆ ಕಡ್ಡಾಯವಾಗಿರಬೇಕೆ ಅಥವಾ ಇಚ್ಛಾಪೂರ್ವಕವಾಗಿರಬೇಕೆ? ಎಂಬುದನ್ನು ಈ ಕೆಳಗಿನಂತೆ ಉತ್ತರಿಸಿದ್ದಾರೆ.

“ಈ ಪ್ರಶ್ನೆಗೆ ಸಂಬಂಧಿಸಿದಂತೆ ಎರಡೂ ಸಾಧ್ಯ: ಎರಡೂ ಅನುಷ್ಠಾನಗೊಂಡ ದೃಷ್ಟಾಂತಗಳಿವೆ. ಗ್ರೀಸ್ ಮತ್ತು ಬಲ್ಗೇರಿಯಾ ದೇಶಗಳ ಮಧ್ಯೆ ಜನತೆಯ ವರ್ಗಾವಣೆ ಸ್ವಪ್ರೇರಣೆಯ ಆಧಾರದ ಮೇಲೆ ನಡೆಯಿತು. ಆದರೆ ಗ್ರೀಸ್ ಮತ್ತು ಟರ್ಕಿಗಳ ನಡುವೆ ಕಡ್ಡಾಯದ ಆಧಾರದ ಮೇಲೆ ನಡೆಯಿತು. ಕಡ್ಡಾಯ ವರ್ಗಾವಣೆ ಮೇಲುನೋಟಕ್ಕೆ ತಪ್ಪು ಎಂದು ಯಾರಿಗಾದರೂ ಅನ್ನಿಸುತ್ತದೆ. ಒಬ್ಬನಿಗೆ ಇಷ್ಟವಿಲ್ಲದಿದ್ದಾಗ ಅವನ ಅನುವಂಶೀಯ ನೆಲೆಯನ್ನು ಬದಲಾಯಿಸು ಎಂದು ಬಲಾತ್ಕರಿಸುವುದು ಸರಿಯಾದದ್ದಲ್ಲ. ಅಲ್ಲಿನ ಅವನ ವಾಸದ ಮುಂದುವರಿಕೆಯಿಂದಾಗಿ ದೇಶದ ಶಾಂತಿಸುಸ್ಥಿತಿಗಳು ವಿಪತ್ತಿಗೊಳಗಾಗುವ ಸಂಭವ ಇದ್ದ ಹೊರತು ಅಥವಾ ಅವನ ಹಿತದ ದೃಷ್ಟಿಯಿಂದಲೇ ವರ್ಗಾವಣೆ ಅಗತ್ಯ ಎನ್ನಿಸಿದ ಹೊರತು, ವರ್ಗಾವಣೆ ಮಾಡುವವರು ಅದನ್ನು ಅಡಚಣೆ ಮತ್ತು ನಷ್ಟಗಳು ಉಂಟಾಗದ ಹಾಗೆ ಮಾಡಬೇಕಾಗಿದೆ. ಆದ್ದರಿಂದ ವರ್ಗಾವಣೆಯನ್ನು ಬಲಾತ್ಕರಿಸಬಾರದು ಎಂಬುದು ನನ್ನ ಅಭಿಪ್ರಾಯ. ವರ್ಗಾವಣೆಗೆ ಇಚ್ಛೆ ವ್ಯಕ್ತಪಡಿಸಿದವರಿಗೂ ಅದು ಮುಕ್ತವಾಗಿರಬೇಕು”.

(ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಮಗ್ರ ಬರೆಹಗಳು ಮತ್ತು‌ ಭಾಷಣಗಳು.‌ಸಂಪುಟ-6. ಪುಟ ಸಂಖ್ಯೆ: 748)

ಇದು ಅಂಬೇಡ್ಕರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಅಂಬೇಡ್ಕರರವರ ನೈಜ ವಿಚಾರಗಳ ಬಗ್ಗೆ ಇದುವರೆಗೆ ಇರುವ ಅಧಿಕೃತ ಮಾಹಿತಿ ಎಂದರೆ ಅಂಬೇಡ್ಕರರ ಪರಿನಿಬ್ಬಾಣದ ನಂತರ ಅವರ ಕುಟುಂಬ 1991 ರಲ್ಲಿ ನೀಡಿದ್ದ ಬರಹಗಳು ಮತ್ತು ಭಾಷಣಗಳಾಗಿವೆ ಹಾಗೂ ಅಂಬೇಡ್ಕರ್ ಅವರು ಸ್ಥಾಪಿಸಿದ ಪತ್ರಿಕೆಗಳಾಗಿವೆ. ಈಗ ಅವೆಲ್ಲವೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಎಂಬ ಶೀರ್ಷಿಕೆಯಲ್ಲಿ 22 ಸಂಪುಟ ಗಳಲ್ಲಿ ಲಭ್ಯವಿದೆ. ಕರ್ನಾಟಕ ಸರ್ಕಾರವೂ ಸಹ ಆ ಎಲ್ಲಾ ಸಂಪುಟಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ 22 ಸಂಪುಟಗಳಲ್ಲಿಯೂ ಸಹ ನಮಗೆ ಅಂಬೇಡ್ಕರ್ ಅವರು “ದೇಶದಲ್ಲಿ ಗಲಭೆ, ಘರ್ಷಣೆಗಳು ನಡೆಯಬಾರದು ಎಂಬ ಕಾರಣಕ್ಕೆ ದೇಶ ವಿಭಜನೆಯ ವೇಳೆ ಭಾರತದಲ್ಲಿದ್ದ ಮುಸ್ಲಿಮರನ್ನು ಪಾಕಿಸ್ತಾನಕ್ಕೆ, ಅಲ್ಲಿದ್ದ ಹಿಂದೂಗಳನ್ನು ಭಾರತಕ್ಕೆ ಸ್ಥಳಾಂತರಿಸುವಂತೆ” ಹೇಳಿರುವ ಯಾವುದೇ ಆಧಾರಗಳಾಗಲಿ ಪುರಾವೆಗಳಾಗಲಿ ಇಲ್ಲ.

ಬದಲಿಗೆ ಅವರು ಹಿಂದೂ ಮಹಾಸಭಾ, ಆರ್ ಎಸ್ ಎಸ್, ಹಿಂದೂ ರಾಷ್ಟ್ರವಾದಿಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿರುವುದು ಕಂಡುಬರುತ್ತದೆ ಹಾಗಾಗಿ ಅಂಬೇಡ್ಕರ್ ಅವರು ಆರ್ ಎಸ್ ಎಸ್ ಕ್ಯಾಂಪಿಗೆ ಭೇಟಿ ನೀಡಿದ್ದರು ಎಂಬ ವಾದವಾಗಲಿ ಅಥವಾ ಮುಸ್ಲಿಮರು ಪಾಕಿಸ್ತಾನಕ್ಕೆ ಹೊಗಲಿ ಎಂದಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಇದೆಲ್ಲ ಆರ್.ಎಸ್.ಎಸ್ ನ ಕಪೋಲಕಲ್ಪಿತ ಕಟ್ಟುಕತೆಯಾಗಿದೆ.

RSS ಶಿಬಿರದಲ್ಲಿ ಅಂಬೇಡ್ಕರ್ ಭಾಷಣ ಎಂಬ ಕಾಲ್ಪನಿಕ ಚಿತ್ರ
RSS ಶಿಬಿರದಲ್ಲಿ ಅಂಬೇಡ್ಕರ್ ಭಾಷಣ ಎಂಬ ಕಾಲ್ಪನಿಕ ಚಿತ್ರ

ಇಂತಹುದೇ ಕಟ್ಟು ಕತೆಗಳನ್ನು ಅಂಬೇಡ್ಕರರ ಬಗ್ಗೆ ಆರ್ ಎಸ್ ಎಸ್ ಹೆಣೆದಿದೆ. ಅವುಗಳನ್ನು ಬಲಪಂಥೀಯ ಸಾಹಿತಿಗಳಾದ ಭೈರಪ್ಪನಂತವರಿಂದ ಹೇಳಿಸುತ್ತದೆ. ಅವರೂ ಸಹ ಇಂತಹ ಸುಳ್ಳುಗಳನ್ನು ಹೇಳಲು ಎಲ್ಲಾ ವೇದಿಕೆಗಳನ್ನು ಬಳಸಿಕೊಳ್ಳುತ್ತಾರೆ ಇದು ಕೂಡ ಅಂತಹದ್ದೆ ಹೇಳಿಕೆಯಾಗಿದೆ. ಇವುಗಳೊಂದಿಗೆ ಅಂಬೇಡ್ಕರ್ ಕುರಿತು ಹೇಳುವ ಬಲಪಂಥೀಯ ಸೂಳ್ಳುಗಳು :

  1. ಅಂಬೇಡ್ಕರ್ ಮುಸ್ಲೀಂ ವಿರೋಧಿಯಾಗಿದ್ದರು.
  2. ಅಂಬೇಡ್ಕರ್ ಕಮ್ಯುನಿಸ್ಟ್ ವಿರೋಧಿಯಾಗಿದ್ದರು.
  3. ಅಂಬೇಡ್ಕರ್ ಎಲ್ಲಾ ಮುಸ್ಲೀಮರನ್ನು ಪಾಕಿಸ್ತಾನಕ್ಕೆ ಹೋಗಲು ತಿಳಿಸಿದ್ದರು.
  4. ಅಂಬೇಡ್ಕರ್ ಆರ್ಟಿಕಲ್ 370 ರದ್ದಾಗಬೇಕೆಂದು ಹೇಳಿದ್ದರು.
  5. ಅಂಬೇಡ್ಕರ್ ನೋಟು ರದ್ಧತಿಯ ಪರವಾಗಿದ್ದರು.
  6. ಅಂಬೇಡ್ಕರ್ ಆರ್ಯರು ಹೊರಗಿನಿಂದ ಬಂದವರಲ್ಲ ಎಂದು ತಿಳಿಸಿದ್ದರು
  7. ಅಂಬೇಡ್ಕರ್ ಗೋಡ್ಸೆ ಪರ ವಕೀಲರಿಗೆ ಸಹಾಯ ಮಾಡಿದ್ದರು.

ಇತ್ಯಾದಿ ಇತ್ಯಾದಿ ಇತ್ಯಾದಿ…

ಈ ಬಲಪಂಥೀಯ ಪ್ರತಿಪಾದಕರು ಎಷ್ಟು ಅಪಾಯ ಎಂದರೆ ಅವರಿಗೆ ಬೇಕೆಂದಾಗೆಲ್ಲಾ ಇತಿಹಾಸವನ್ನು ತಿರುಚಿ ಅವರಿಬೆ ಬೇಕಾದ ಹಾಗೆ ಬರೆಯುವ ವಿಕಾರ ಪ್ರವೃತ್ತಿಯನ್ನು ಬೆಳಸಿಕೊಂಡಿದ್ದಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದರೆ ಇತ್ತೀಚೆಗೆ ಭಾರಿ ಚರ್ಚೆ ಹುಟ್ಟುಹಾಕಿರುವ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ. ಶಿಕ್ಷಣದ ಮೂಲಕ ತಮ್ಮ ಭೌದ್ಧಿಕ ಮಟ್ಟವನ್ನು ಉತ್ತಮಪಡಿಸಿಕೊಂಡು  ಭವಿಷ್ಯವನ್ನು ರೂಪಿಸಿಕೊಳ್ಳಲು ಬರುವ ಪುಟ್ಟ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಹುನ್ನಾರವನ್ನು ನಡೆಸಿದವರಿಗೆ, ಅಂಬೇಡ್ಕರ್ ಕುರಿತು ಸುಳ್ಳು ಹೇಳಿಕೆಗಳನ್ನು ನೀಡುವುದು ಕಷ್ಟವೇನಲ್ಲ ಅದರಲ್ಲಿ ಎಸ್‌ ಎಲ್‌ ಭೈರಪ್ಪ ಅವರು ನಿಸ್ಸೀಮರು ಎನ್ನುತ್ತಾರೆ ಅಂಬೇಡ್ಕರ್‌ವಾದಿ ಬರಹಗಾರರಾದ ವಿಕಾಸ್‌ ಆರ್‌ ಮೌರ್ಯ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚರಂಡಿಗೆ ಬಿದ್ದು ವ್ಯಕ್ತಿ ನಾಪತ್ತೆ! ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights