ಫ್ಯಾಕ್ಟ್‌ಚೆಕ್ : ಗಾಂಧಿ ಚಿತ್ರಕ್ಕೆ ಗುಂಡು ಹಾರಿಸಿ ನಾಥುರಾಮ್ ಗೋಡ್ಸೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ವಿಡಿಯೋ ಇತ್ತೀಚಿನದಲ್ಲ

ಒಂದು ಕಡೆ ಇಡೀ ದೇಶಕ್ಕೆ ದೇಶವೇ “ಸ್ವಾತಂತ್ರದ ಅಮೃತ ಮಹೋತ್ಸವವನ್ನು” ಸಂಭ್ರಮ ಸಡಗರದಿಂದ ಆಚರಿಸುತ್ತ ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುತ್ತಿದ್ದರೆ ಮತ್ತೊಂದು ಕಡೆ ಈ ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದ ಮಹಾತ್ಮ ಗಾಂಧಿಯವರ ಪ್ರತಿಕೃತಿಗೆ ಬೆಂಕಿ ಇಡುವ ಕೃತ್ಯವನ್ನು ಮಾಡಲಾಗಿದೆ ಎಂದು ವಿಡಿಯೊ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.  ಗೋಡ್ಸೆ ಜಿಂದಾಬಾದ್ ಎಂಬ ಘೋಷಣೆ ಕೂಗಿ ಅಮೃತ ಮಹೋತ್ಸವ ಆಚರಿಸುತ್ತಿದ್ದಾರೆ, ಇದು ಅವರ ಅಸಲಿ ಮುಖ, ಅವರಿಗೆ ದೇಶದ್ರೋಹದ ಶಿಕ್ಷೆ ವಿಧಿಸಬೇಕಲ್ಲವೇ? ಎಂದು ಪ್ರತಿಪಾದಿಸಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್‌ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಘಟನೆಯು ಹಳೆಯದು ಮತ್ತು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದಿಲ್ಲ ಎಂದು ಸ್ಪಷ್ಟವಾಗಿದೆ. ವೈರಲ್ ವೀಡಿಯೊ ಮೂರು ವರ್ಷಗಳಿಗಿಂತ ಹಳೆಯದಾಗಿದ್ದು, ಜನವರಿ 30, 2019 ರಂದು ಮಹಾತ್ಮಾ ಗಾಂಧಿಯವರ 71 ನೇ ಪುಣ್ಯತಿಥಿಯ ದಿನದಂದು ಬಲಪಂಥೀಯ ಸಂಘಟನೆಯಾದ ಹಿಂದೂ ಮಹಾಸಭಾ ಉತ್ತರ ಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ಸಂದರ್ಭದಲ್ಲಿ ಗಾಂಧಿಯವರ ಪ್ರತಿಕೃತಿಯನ್ನು ಸುಡಲಾಯಿತು. ನಂತರ ಸಂಘಟನೆಯ ಕಾರ್ಯದರ್ಶಿ ಪೂಜಾ ಸುಕುನ್ ಪಾಂಡೆ ಮತ್ತು ಆಕೆಯ ಪತಿಯನ್ನು ಅಲಿಗಢ ಪೊಲೀಸರು ಬಂಧಿಸಿದ್ದರು ಎಂದು ವರದಿಯಾಗಿತ್ತು.

ಜನವರಿ 30, 2019 ರಂದು, “ಹಿಂದೂ ಮಹಾಸಭಾ “ಆಯೋಜಿದ್ದ ಈ ಕಾರ್ಯಕ್ರಮದಲ್ಲಿ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಮರುಸೃಷ್ಟಿ ಮಾಡಿದೆ” ಎಂದು NDTV ವಿಡಿಯೊವನ್ನು ಹಂಚಿಕೊಂಡಿತ್ತು.

ಜನವರಿ 30, 2019 ರಂದು ಉತ್ತರ ಪ್ರದೇಶದ ಎಬಿಎಚ್‌ಎಂ ಕಚೇರಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅಖಿಲ ಭಾರತಿಯ ಹಿಂದೂ ಮಹಾಸಭಾ (ABHM) ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಅವರು ಪಿಸ್ತೂಲ್‌ನಿಂದ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿ ನಂತರ ಅದಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿತ್ತು ಎನ್ನಲಾಗಿದೆ. ನಿಜವಾದ ಮಹಾತ್ಮ’ ಎಂದು ಶ್ಲಾಘಿಸಿದರು. ಸದಸ್ಯರು ಅದೇ ದಿನ ಶೌರ್ಯ ದಿವಸ್ ಆಚರಿಸಿ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿ ಸಿಹಿತಿಂಡಿಗಳನ್ನು ವಿತರಿಸಿ, ನಾಥುರಾಮ್ ಗೋಡ್ಸೆಯ ಫೋಟೋಗೆ ಹಾರ ಹಾಕಿದರು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿಯ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರು ಜನವರಿ 30, 2019 ರಂದು ಉತ್ತರ ಪ್ರದೇಶದಲ್ಲಿ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿ, ನಂತರ ಬೆಂಕಿ ಹಚ್ಚಿ ಸುಟ್ಟ ಹಳೆಯ ಘಟನೆಯನ್ನು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವೈರಲ್ ಮಾಡಲಾಗಿದೆ. ಈ ಬಲಪಂಥೀಯ ಸಂಘದ ಸದಸ್ಯರಿಗೆ ನಾಥುರಾಮ್ ಗೋಡ್ಸೆಯು ನಿಜವಾದ ಮಹಾತ್ಮ ಎನ್ನುವ ಮೂಲಕ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಂಡಿರುವುದನ್ನು ಕೆಲವರು ಸ್ವತಂತ್ರೋತ್ಸವದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: 1400 ವರ್ಷಗಳ ಹಿಂದೆಯೇ ಕಂಪ್ಯೂಟರ್ ಚಿತ್ರ ಕೆತ್ತನೆ ಮಾಡಲಾಗಿತ್ತೆ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights