ದೇವರ ಆಟ ಗೊತ್ತಿಲ್ಲ; ದೆವ್ವಗಳು ದೇಶ ಆಳುತ್ತಿವೆ: ದೇವನೂರು ಮಹಾದೇವ

ರಾಜ್ಯಗಳಿಗೆ ಸಿಗಬೇಕಿರುವ ಜಿಎಸ್‌ಟಿ ಪಾಲು ನೀಡಲು ಸಾಧ್ಯವಾಗದೇ ಇರುವುದಕ್ಕೆ ದೇವರ ಆಟವೇ ಕಾರಣವಾ ಗೊತ್ತಿಲ್ಲ, ಆದರೆ, ಆದರೆ, ದೆವ್ವ-ಭೂತಗಳು ಭಾರತವನ್ನು ಆಳುತ್ತಿವೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಹೇಳಿದ್ದಾರೆ.

ಕೊರೊನಾ ಕಾರಣದಿಂದಾಗಿ ಆರ್ಥಿಕತೆ ಕುಸಿದಿದೆ. ಆದ್ದರಿಂದ ರಾಜ್ಯಗಳಿಗೆ ಅವುಗಳ ಪಾಲು ನೀಡಲು ಸಾಧ್ಯವಿಲ್ಲ. ಎಲ್ಲವೂ ದೇವರ ಆಟ ಎಂದು ಹೇಳುವಂತಹ ವಿತ್ತ ಸಚಿವರನ್ನು ನಾವು ಪಡೆದಿದ್ದೇವೆ. ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ರಾಜ್ಯಗಳನ್ನು ದೈನೇಹಿ ಎನ್ನುವಂತಹ ಸ್ಥಿತಿಗೆ ಇಂದಿನ ಕೇಂದ್ರ ಸರ್ಕಾರ ತಂದು ನಿಲ್ಲಿಸಿದೆ. ರಾಜ್ಯಗಳ ಹಣಕಾಸು ಮೂಲವನ್ನೇ ಕಸಿದುಕೊಳ್ಳುವಂತಹ ಜಿಎಸ್‌ಟಿ ಜಾರಿಗೊಳಿಸಿ ದೆವ್ವದ ಆಟ ಆಡುತ್ತಿರುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ.

ಜನರ ಕಣ್ಣಿಗೆ ಮಣ್ಣೆರಚಿ, ಕಲ್ಪನೆಯ ಕನಸನ್ನು ಮುಂದಿಟ್ಟು, ನೋಟ್‌ ಬ್ಯಾನ್‌, ಜಿಎಸ್‌ಟಿಗಳನ್ನು ಜಾರಿ ಮಾಡಿ ಜನರ ಬದುಕನ್ನು ದುಸ್ವಪ್ನಗೊಳಿಸಿದ ಭೂತದ ಆಟ ಆಡಿದವರು ಯಾರು? ಇಡೀ ಪ್ರಪಂಚವೇ ಕೊರೊನಾ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅದೇ ಸಮಯವನ್ನು ಬಳಸಿಕೊಂಡು ಜನ ಸಮುದಾಯದ ಧ್ವನಿಯನ್ನು ಅಡಗಿಸಿ, ರೈತರು, ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡು, ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು, ದೇಶದ ಸರ್ವಸ್ವವನ್ನೂ ಬಂಡವಾಳ ಕೋರರಿಗೆ ಬಿಜೆಪಿ ಸರ್ಕಾರ ಧಾರೆ ಎರೆಯುತ್ತಿದೆ. ಅದಕ್ಕಾಗಿಯೇ, ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಇಂತಹ ಸಂಕಷ್ಟದ ನಡುವೆಯೂ ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ರೈತಸಂಘ, ಜನಾಂದೋಲನಗಳ ಮಹಾಮೈತ್ರಿ ಆಯೋಜಿಸಿದ್ದ ಭೂಸುಧಾರಣಾ ಕಾಯ್ದೆ ತಿದ್ದುಪಡಿ – ಖಾಸಗೀಕರಣ ನೀತಿಗಳ ಪರಿಣಾಮ ಮತ್ತು ಸವಾಲುಗಳು ಕುರಿತ ಸಂವಾದ ಕಾರ್ಯಕ್ರಮದ ಉದ್ಘಾಟಿಸಿದ ದೇವನೂರು ಮಹಾದೇವ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ವಾಗ್ಧಾಳಿ ನಡೆಸಿದರು.


ಇದನ್ನೂ ಓದಿ: ದೇಶದಲ್ಲಿ ಫ್ಯಾಸಿಸ್ಟ್‌ ಸರ್ವಾಧಿಕಾರ ಸ್ಥಾಪಿಸಲು ಮೋದಿ ಸರ್ಕಾರ ಯತ್ನಿಸುತ್ತಿದೆ: ಗೌರಿ ನೆನಪಿನ ಕಾರ್ಯಕ್ರಮದಲ್ಲಿ ಹೆಚ್‌ಎಸ್‌ ದೊರೆಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights