ಫ್ಯಾಕ್ಟ್‌ಚೆಕ್: ಹಂಸಲೇಖ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ, ಸ್ಪಷ್ಟನೆ ನೀಡಿದ ತೇಜಸ್ವಿನಿ ಹಂಸಲೇಖ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಕನ್ನಡದ ಮುಖ್ಯ ವಾಹಿನಿ ಮಾಧ್ಯಮಗಳು ಎನ್ನಿಸಿಕೊಂಡಿರುವ ಪಬ್ಲಿಕ್ ಟಿವಿ, ಟವಿ 9 ಕನ್ನಡ ಮತ್ತು ಜೀ ನ್ಯೂಸ್ ಸುದ್ದಿಯನ್ನು ಬಿತ್ತರಿಸಿದ್ದವು.

ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ, ಅವರ ಅಭಿಮಾನಿಗಳು  ಹಂಸಲೇಖ ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಕೂಡ ಹಂಸಲೇಖ ಅವರು ಗುಣಮುಖರಾಗಿ ಬರಲಿ ಎಂದು ಆಶಿಸಿ ಟ್ವೀಟ್ ಮಾಡಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಆತ್ಮೀಯರಾಗಿರುವ ಹಂಸಲೇಖ ಅವರು ಶೀಘ್ರ ಗುಣಮುಖರಾಗಿ ಕಲಾಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ. ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಆದರೆ ಹಂಸಲೇಖ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಮತ್ತು ಅವರನ್ನು ಯಾವ ಆಸ್ಪತ್ರೆಗೂ ದಾಖಲು ಮಾಡಿಲ್ಲ, ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಹಂಸಲೇಖ ಅವರ ಪುತ್ರಿ ತೇಜಸ್ವಿನಿ ಹಂಸಲೇಖ ಮನವಿ ಮಾಡಿದ್ದಾರೆ.

ಹಂಸಲೇಖ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಸುಳ್ಳು ಸುದ್ದಿ

ಸಂಗೀತ ನಿರ್ದೇಶಕ ಹಂಸಲೇಖ ಅವರು ಎದೆನೋವಿನ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಅವರ ಪುತ್ರಿ ತೇಜಸ್ವಿನಿ ಹಂಸಲೇಖ ಸ್ಪಷ್ಟನೆ ನೀಡಿದ್ದಾರೆ. 

”ಇಂದು ಮುಂಜಾನೆಯಿಂದ ನಮ್ಮ ತಂದೆ, ಡಾ. ಹಂಸಲೇಖರವರ ಆರೋಗ್ಯದ ಬಗ್ಗೆ ಹಾಗೂ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಒಂದು ವದಂತಿ ವಾರ್ತಾ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಈ ವದಂತಿಯು ಸುಳ್ಳಾಗಿದ್ದು, ಇದರಿಂದ ಅಭಿಮಾನಿಗಳು ಆತಂಕ ಪಡಬಾರದು ಹಾಗೂ ಈ ವದಂತಿಯನ್ನು ಇನ್ನು ಹರಡದಂತೆ ನೋಡಿಕೊಳ್ಳಬೇಕು ಎಂದು ನಮ್ರತೆಯಿಂದ ಕೇಳಿಕೊಳ್ಳುತೇವೆ”. ಎಂದು ಹಂಸಲೇಖ ಅವರ ಪುತ್ರಿ ತೇಜಸ್ವಿನಿ ಹಂಸಲೇಖ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಶ್ಯಾಮ್‌ ಪ್ರಸಾದ್ ಎಂಬುವವರು ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ.

ಹಿಂದೆಯೂ ಹೀಗೆ ಹಂಸಲೇಖ ಅವರ ಆರೋಗ್ಯದ ಬಗ್ಗೆ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು, ಆಗ ಸ್ವತಃ ಹಂಸಲೇಖ ಅವರೇ ತಮ್ಮ ಆರೋಗ್ಯದ ಬಗ್ಗೆ, ಸ್ಪಷ್ಟನೆ ನೀಡಿದ್ದರು. ಅದನ್ನು ಇಲ್ಲಿ ನೋಡಬಹುದು. ಹಾಗಾಗಿ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾವೊಂದು ನಿಧಿ ಕಾಯುತ್ತಿರುವ ವಿಡಿಯೋದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights