ಫ್ಯಾಕ್ಟ್‌ಚೆಕ್: ಸಾಧುವೊಬ್ಬ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವುದು ನಿಜವೇ?

“ಕೇದಾರನಾಥ ದೇವಾಲಯವನ್ನು ಮುಚ್ಚಿದ 2 ವಾರಗಳ ನಂತರವೂ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವ ಈ ಯೋಗಿಪುಂಗನನ್ನು ನೋಡಿ. ಈ ಫೋಟೋವನ್ನು ಮಕ್ಕಳಿಗೆ ತೋರಿಸಿ ನಮ್ಮ ಸನಾತನ ಧರ್ಮ ಎಷ್ಟು ಶ್ರೇಷ್ಠವಾಗಿದೆ ಎಂಬುದನ್ನು ತಿಳಿಸಿ” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

 

ಪದ್ಮಾಸನ ಹಾಕಿಕೊಂಡು ಕೂತಿರುವ ವ್ಯಕ್ತಿಯೊಬ್ಬರ ದೇಹವು ಸಂಪೂರ್ಣವಾಗಿ ಮಂಜುಗಡ್ಡೆಯಲ್ಲಿ ಆವೃತ್ತವಾಗಿರುವಂತೆ ಕಾಣುತ್ತಿರುವ  ಕಪ್ಪುಬಿಳುಪಿನ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರದಲ್ಲಿ ಇರುವ ವ್ಯಕ್ತಿಯನ್ನು ‘ಹಿಮಾಲಯದಲ್ಲಿ ಇರುವ ಯೋಗಿ’ ಎಂದು ಪ್ರತಿಪಾದಿಸಲಾಗುತ್ತಿದೆ.

ಚಿತ್ರವು ಕೇವಲ ಟ್ವಿಟರ್‌ಪೇಸ್‌ಬುಕ್‌ ವಾಟ್ಸಾಪ್‌ನಲ್ಲೂ ಈ ಪೋಸ್ಟ್‌ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ, “ಇಂತಹ ತಪಸ್ಸು, ಹಠಮಾರಿತನ, ಸಾಧನೆ ಇರುವುದು ಸನಾತನದಲ್ಲಿ ಮಾತ್ರ, ಇಂದ್ರಿಯಗಳನ್ನು ಗೆದ್ದುಕೊಂಡ ಸಾವಿರಾರು ಉದಾಹರಣೆಗಳಿವೆ, ಇಂತಹ ಉದಾಹರಣೆ ಬೇರೆ ಯಾವ ಸಂಸ್ಕೃತಿಯಲ್ಲಾಗಲಿ, ಧರ್ಮದಲ್ಲಾಗಲಿ ಕಾಣುವುದಿಲ್ಲ” ಎಂದು ಚಿತ್ರದಲ್ಲಿರುವ ವ್ಯಕ್ತಿ ಅತಿಮಾನುಷವಾದುದನ್ನು ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ಪೋಸ್ಟ್‌ಅನ್ನು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಈ ಚಿತ್ರವು ‘ಬಾಬಾ ಸರ್‌ಬಂಗಿ I’ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಪತ್ತೆಯಾಗಿದೆ. ಈ ಚಿತ್ರವನ್ನು ಮೂರು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ. ಪೇಜ್‌ನಲ್ಲಿ ಇರುವ ಈ ಚಿತ್ರವನ್ನು ಬಳಸಿಕೊಂಡು ಚಿತ್ರವನ್ನು ಕಪ್ಪುಬಿಳುಪಾಗಿ ಎಡಿಟ್‌ ಮಾಡಿ ಅದನ್ನು ವೈರಲ್ ಮಾಡಲಾಗಿದೆ.

ಫೇಸ್‌ಬುಕ್ ಪೇಜ್‌ನಲ್ಲಿ ಈ ವ್ಯಕ್ತಿಯನ್ನು ‘ಬಾಬಾ ಭಲೇ ಗಿರಿ ಜಿ ಮಹಾರಾಜ್’ ಎಂದು ಹೇಳಿಕೊಂಡಿದೆ. ಪೇಜ್‌ನಲ್ಲಿ ಇರುವ ಫೇಸ್‌ಬುಕ್‌‌ ಚಿತ್ರದಲ್ಲಿ ಕಂದು ಬಣ್ಣದ ‘ಬೂದಿ’ ಅವರ ಮೈಮೇಲೆ ಇರುವಂತೆ ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಹಿನ್ನಲೆಯಲ್ಲಿ ‘ಸೆಗಣಿ ಬೆರಣಿ’ ಜೋಡಿಸಿರುವುದು ಕೂಡಾ ಕಾಣುತ್ತದೆ.

ಈ ಮಾಹಿತಿಯ ಆಧಾರದಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ, ಈ ವ್ಯಕ್ತಿಯನ್ನು ಜನರು ‘‘ಶ್ರೀಶ್ರೀ 1008 ಮಹಂತ್‌ ಬಾಬಾ ಭಲೇ ಗಿರಿ ಜಿ ಮಹಾರಾಜ್‌” ಎಂದು ಕರೆಯುತ್ತಾರೆ. ಇದು ಹರಿಯಾಣ ರಾಜ್ಯದ ರಿಂಧಾನದಲ್ಲಿರುವ ‘ಪರಾಶರ್‌ ತೀರ್ಥ’ದಲ್ಲಿ ಮಾಡಲಾಗಿರುವ ಧಾರ್ಮಿಕ ಆಚರಣೆಯೊಂದರ ಚಿತ್ರವಾಗಿದೆ.

ಈ ಆಚರಣೆಯಲ್ಲಿ ಸೆಗಣಿ ಬೆರಣಿಯನ್ನು ಹಲವು ದೊಡ್ಡ ದೊಡ್ಡ ಗುಂಪಾಗಿ ಜೋಡಿಸಿ ಅದರ ನಡುವೆ ಅವರು ಕುಳಿತುಕೊಳ್ಳುತ್ತಾರೆ. ಈ ವೇಳೆ ಅವರ ಮೈಮೇಲೆ ಬೆರಣಿಯ ಬೂದಿ ಅಂಟಿಕೊಂಡಿದೆ. ಪ್ರಸ್ತುತ ವೈರಲ್ ಆಗಿರುವ ಚಿತ್ರವು ಮೂರು ವರ್ಷಗಳಷ್ಟು ಹಳೆಯದಾದರೂ, ‘ಬಾಬಾ ಸರ್‌ಬಂಗಿ I‘ ಫೇಸ್‌ಬುಕ್ ಪೇಜ್‌ನಲ್ಲಿ ಈ ಆಚರಣೆಯ ಹಳೆಯ ಚಿತ್ರಗಳು ಮತ್ತು ಇತ್ತೀಚೆಗೆ ಕ್ಲಿಕ್ ಮಾಡಿರುವ ಚಿತ್ರಗಳು ಎಂಬಂತೆ ತೋರುವ ಹಲವಾರು ಚಿತ್ರಗಳು ಇವೆ.

ಬಾಬಾ ಸರ್ಬಂಗಿ ವ್ಲಾಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಆಚರಣೆಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ ಸಂತನೊಬ್ಬ ವೃತ್ತದ ಮಧ್ಯದಲ್ಲಿ ಕುಳಿತು, ತನ್ನ ದೇಹದ ಮೇಲೆ ಸೆಗಣಿ ಲೇಪಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ವೀಡಿಯೊವನ್ನು ಜೂನ್ 24, 2018 ರಂದು ಅಪ್‌ಲೋಡ್ ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಇದೇ ಪೋಸ್ಟ್‌ಅನ್ನು ಇದೇ ಹೇಳಿಕೆಯೊಂದಿಗೆ ಹಂಚಿಕೊಂಡಾಗ ನಾನುಗೌರಿ.ಕಾಂ ಇದನ್ನು ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಎಂದು ವರದಿ ಮಾಡಿತ್ತು. ಅದನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋ ಕೇದಾರನಾಥ ದೇವಾಲಯದ ಆವರಣದಲ್ಲಿ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವ ಚಿತ್ರ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಸನಾತನ ಶ್ರೇಷ್ಠ ಧರ್ಮ ಎಂದು ತಪ್ಪಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಅದು ಸೆಗಣಿಯಾಗಿದ್ದು, ಚಿತ್ರವನ್ನು ಎಡಿಟ್ ಮಾಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights