ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣ ಅರ್ಥವಾಗದೆ ಅನುವಾದ ಮಾಡುತ್ತಿದ್ದ ವ್ಯಕ್ತಿ ವೇದಿಕೆಯಿಂದ ಹೊರನಡೆದಿದ್ದು ನಿಜವೇ?

ಗುಜರಾತ್ ವಿಧಾನಸಭಾ ಚುನಾವಣೆಯು ಡಿಸೆಂಬರ್ 1 ರಿಂದ 5 ರವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲಿ, ರಾಹುಲ್ ಗಾಂಧಿ ರ್‍ಯಾಲಿಯನ್ನು ಉದ್ದೇಶಿಸಿ ಹಿಂದಿಯಲ್ಲಿ ಮಾತನಾಡುತ್ತಿದ್ದರೆ, ರಾಹುಲ್ ಅವರ ಭಾಷಣವನ್ನು ಗುಜರಾತಿಗೆ ಅನುವಾದ ಮಾಡಿ ಹೇಳುತ್ತಿದ್ದ ವ್ಯಕ್ತಿ ವೇದಿಕೆಯಿಂದ ಅರ್ಧಕ್ಕೆ ನಿರ್ಗಮಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

BJP ಹಲವು ನಾಯಕರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ರಾಹುಲ್ ಗಾಂಧಿಯವರ ಭಾಷಣವನ್ನು ಅರ್ಥಮಾಡಿಕೊಂಡು ಅನುವಾದ ಮಾಡಲು ಸಾಧ್ಯವಾಗದೆ ವೇದಿಕೆಯಿಂದ ನಿರ್ಗಮಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರನ್ನು ಬಿಡಿ, ರಾಹುಲ್ ಗಾಂಧಿ ಅವರ ಭಾಷಣವನ್ನು ಅನುವಾದ ಮಾಡುವವರು ಕೂಡ ತಮ್ಮ ಭಾಷಣದ ಸಮಯದಲ್ಲಿ ವೇದಿಕೆಯಿಂದ ಓಡಿಹೋಗುತ್ತಿದ್ದಾರೆ. #ಗುಜರಾತ್ ಚುನಾವಣೆ 2022 ಎಂದು ದುಭೆ ಎಂಬುವವರು ಟ್ವೀಟ್ ಮಾಡಿದ್ದಾರೆ.

BJP ಮತ್ತು BJP ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ನವೆಂಬರ್ 22 ರ ದಿನಾಂಕದ INC ಯ ಅಧಿಕೃತ YouTube ಚಾನಲ್‌ನಲ್ಲಿ ವೈರಲ್ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡಿದ್ದೇವೆ.

ರಾಹುಲ್ ಗಾಂಧಿ ಗುಜರಾತಿನ ಸೂರತ್‌ನಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾಡುತ್ತಿರುವ ಭಾಷಣವನ್ನು ಅನುವಾದ ಮಾಡುತ್ತಿರುವ ವ್ಯಕ್ತಿಯನ್ನು ಭರತ್ ಸಿಂಗ್ ಸೋಲಂಕಿ ಎಂದು ಗುರುತಿಸಲಾಗಿದೆ. ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ  ಟೈಮ್‌ಸ್ಟ್ಯಾಂಪ್‌ನ 26:08 ರಿಂದ 37:41 ರವರೆಗೆ, ಸೋಲಂಕಿ ಅವರು ರಾಹುಲ್ ಗಾಂಧಿಯವರ ಭಾಷಣವನ್ನು ಅನುವಾದಿಸುವುದನ್ನು ಕಾಣಬಹುದು. ರ್‍ಯಾಲಿಯನ್ನುದ್ದೇಶಿಸಿ ಮಾತನಾಡುವಾಗ, ರಾಹುಲ್ ಗಾಂಧಿಯವರು ತಮ್ಮ ಅಜ್ಜಿಯ ಕಥೆಯನ್ನು ಹೇಳಲು ಪ್ರಾರಂಭಿಸಿದರು, ಸೋಲಂಕಿ ಕಥೆಯ ಆರಂಭಿಕ ಭಾಗವನ್ನು ಗುಜರಾತಿಯಲ್ಲಿ ಜನರಿಗೆ ವಿವರಿಸಿದರು.

ಆದರೆ, ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರು “ನೀವು ಹಿಂದಿಯಲ್ಲಿ ಮಾತನಾಡಿ, ನಮಗೆ ಅರ್ಥವಾಗುತ್ತದೆ. ನಮಗೆ ಅನುವಾದ ಅಗತ್ಯವಿಲ್ಲ” ಎಂದು ಹೇಳುವುದನ್ನು ಕೇಳಬಹುದು. ಟೈಮ್‌ಸ್ಟ್ಯಾಂಪ್‌ನ 38:07 ಕ್ಕೆ, ಗುಂಪಿನಲ್ಲಿದ್ದ ಜನರು ತಮ್ಮ ಭಾಷಣವನ್ನು ಹಿಂದಿಯಲ್ಲಿ ಮುಂದುವರಿಸಲು ರಾಹುಲ್ ಗಾಂಧಿಯನ್ನು ಕೇಳುತ್ತಿದ್ದಾರೆ.  ಈ ಮನವಿಗೆ ಪ್ರತಿಕ್ರಿಯಿಸಿದ ಅನುವಾದಕರು ರಾಹುಲ್ ಗಾಂಧಿಯವರಿಗೆ ಹಿಂದಿ ಭಾಷೆಯಲ್ಲಿ ಭಾಷಣ ಮುಂದುವರಿಸುವಂತೆ ಹೇಳಿದರು. ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಹಿಂದಿ ಕೆಲಸ ಮಾಡುತ್ತದೆಯೇ ಎಂದು ಪ್ರಶ್ನಿಸಿದರು. ಭರತ್ ಸಿಂಗ್ ಸೋಲಂಕಿ ಪ್ರತಿಕ್ರಿಯಿಸಿ ನಿಮ್ಮ ಹಿಂದಿ ಭಾಷಣ ಅವರಿಗೆ ಅರ್ಥವಾಗುತ್ತಿದೆ. ಹಾಗಾಗಿ ಅನುವಾದ ಅಗತ್ಯವಿಲ್ಲ ನೀವು ಮುಂದುವರೆಸಿ ಎಂದು ಸೋಲಂಕಿ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಮತ್ತು ಎನ್‌ಡಿಟಿವಿಯಂತಹ ಮಾಧ್ಯಮಗಳು ಕೂಡ ಇದನ್ನೇ ವರದಿ ಮಾಡಿವೆ.

ರಾಹುಲ್ ಗಾಂಧಿಯವರ ಭಾ‍ಷಣ ಮತ್ತು ಅನುವಾದದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ BJP ಮತ್ತು ಅದರ ಬೆಂಬಲಿಗರು ಮಾಡುತ್ತಿದ್ದ ಸುಳ್ಳು ಪ್ರತಿಪಾದನೆಯ ಬಗ್ಗೆ ಸ್ವತಃ ಭರತ್ ಸೋಲಂಕಿ ಸ್ವಪಷ್ಟನೆ ನೀಡಿದ್ದು, ನವೆಂಬರ್ 21 ರಂದು ಭಾರತ್ ಸೋಲಂಕಿ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು  ಕಂಡುಕೊಂಡಿದ್ದೇವೆ, ಅದರಲ್ಲಿ ಅವರು ವೈರಲ್ ಘಟನೆಯ ಬಗ್ಗೆ ವಿವರಣೆ  ನೀಡಿದ್ದಾರೆ.

ರಾಹುಲ್ ಗಾಂಧಿ ಭಾಷಣವನ್ನು ಗುಜರಾತಿ ಭಾಷೆಗೆ ಭಾಷಾಂತರಿಸುವುದನ್ನು ನಿಲ್ಲಿಸಿದ್ದೇನೆ ಏಕೆಂದರೆ ಅಲ್ಲಿನ ಪ್ರೇಕ್ಷಕರು ಅವರ ಭಾಷಣವನ್ನು ಹಿಂದಿಯಲ್ಲಿ ಕೇಳಲು ಬಯಸುತ್ತಾರೆ. ಅಲ್ಲದೆ, ತಪ್ಪುದಾರಿಗೆಳೆಯುವ ಸನ್ನಿವೇಶದಲ್ಲಿ ಬಿಜೆಪಿ ಈ ವಿಡಿಯೋವನ್ನು ಪ್ರಸ್ತುತಪಡಿಸಿದೆ ಎಂದು ಟೀಕಿಸಿದರು. ಟ್ವೀಟ್‌ನ ಶೀರ್ಷಿಕೆ ಹೀಗಿದೆ, “ಪ್ರಧಾನಿ ಸಭೆಗೆ ಸಾರ್ವಜನಿಕರು ಬರುತ್ತಿಲ್ಲ ಮತ್ತು ಕೋಪಗೊಂಡ ಬಿಜೆಪಿ ಈಗ ಕ್ಷುಲ್ಲಕ ವಿಷಯಗಳಿಗೆ ಅಳಲು ತೋಡಿಕೊಳ್ಳುತ್ತಿದೆ. ಗುಜರಾತ್ ಜನರು ಈ ಬಾರಿ 2022 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ನಿರ್ಧರಿಸಿದ್ದಾರೆ. #CongressAaveChe ” ಎಂದು ವಿಡಿಯೊ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ, ಗುಜರಾತಿನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾಡಿದ ಭಾ‍ಷಣವನ್ನು ಅನುವಾದ ಮಾಡಲಾಗದೆ ಅರ್ಧಕ್ಕೆ ನಿಲ್ಲಿಸಿ ಹೊರಬಂದಿದ್ದಾರೆ ಎಂದು ಪ್ರತಿಪಾದಿಸಿ ಸುಳ್ಳು ಪೋಸ್ಟ್‌ಅನ್ನು BJP ಮತ್ತು ಅದರ ಬೆಂಬಲಿಗರು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights