ಫ್ಯಾಕ್ಟ್‌ಚೆಕ್: ಹಿಂದೂಗಳ ಮೇಲೆ ಕರುಣೆ ತೋರಿ ಎಂದು ಪಾಕಿಸ್ತಾನದ ಹಿಂದೂ ಸಂಸದರು ಬೇಡಿಕೊಳ್ಳುತ್ತಿದ್ದಾರೆ ಎಂಬ ದೃಶ್ಯಗಳ ಹಿಂದಿರುವ ವಾಸ್ತವವೇನು?

ಪಾಕಿಸ್ತಾನದಲ್ಲಿ ಹಿಂದೂ ಹುಡುಗಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುವ ಕುರಿತು ಇತ್ತೀಚಿನ ಹಲವು ವರದಿಗಳ ಸಂದರ್ಭದಲ್ಲಿ, ಪಾಕಿಸ್ತಾನದ ಹಿಂದೂ ಸಂಸದರೊಬ್ಬರು ಹಿಂದೂಗಳ ಮೇಲೆ ಕರುಣೆ ತೋರಿಸಿ ಎಂದು ಬೇಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳ ವಾಸ್ತವವೇನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪಾಕಿಸ್ತಾನದ ಸಂಸತ್ತಿನಲ್ಲಿ ಸಂಸದರೊಬ್ಬರು ಹಿಂದೂಗಳ ಮೇಲೆ ಕರುಣೆ ತೋರಿ ಎಂದು ಬೇಡಿಕೊಂಡಿರುವುದು ನಿಜವೇ ಎಂದು ಪರಿಶೀಲಿಸಲು ಸರ್ಚ್ ಮಾಡಿದಾಗ, 11 ಆಗಸ್ಟ್ 2022 ರಂದು ‘PTV ಪಾರ್ಲಿಮೆಂಟ್’ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿದ ಪೂರ್ಣ ವಿಡಿಯೊಗೆ ಲಭ್ಯವಾಗಿದ್ದು, ಅದಿವೇಶನ ನಡೆಯುವ ಸಂದರ್ಭದಲ್ಲಿ ಸ್ಪೀಕರ್  ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಯನ್ನು ‘ತಾರಿಕ್ ಮಸಿಹ್ ಗಿಲ್’ ಎಂಬ ಹೆಸರಿನಿಂದ ಸಂಬೋಧಿಸುವುದನ್ನು ಕೇಳಬಹುದು.

ಇದನ್ನೆ ಆಧಾರವಾಗಿಟ್ಟುಕೊಂಡು  ಪಾಕಿಸ್ತಾನ ಸರ್ಕಾರದ ವೆಬ್‌ಸೈಟ್‌ಗಳಲ್ಲಿ ಸದಸ್ಯನ ವಿವರಗಳನ್ನು ಸರ್ಚ್ ಮಾಡಿದಾಗ. ‘ಪ್ರಾಂತೀಯ ಅಸೆಂಬ್ಲಿ ಆಫ್ ಪಂಜಾಬ್’ ನ ವೆಬ್‌ಸೈಟ್ ಪ್ರಕಾರ, ತಾರಿಕ್ ಮಸಿಹ್ ಗಿಲ್ ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪ್ರಾಂತೀಯ ಅಸೆಂಬ್ಲಿಯ (ಭಾರತದಲ್ಲಿ ಶಾಸಕರಿಗೆ ಸಮಾನ) ಸದಸ್ಯರಾಗಿದ್ದಾರೆ. ಅವರು ಕ್ರಿಶ್ಚಿಯನ್ ಧರ್ಮಿಯರಾಗಿದ್ದು. ಅವರು ಮುಸ್ಲಿಮೇತರರಿಗೆ ಮೀಸಲಾದ ಎಂಟು ಸ್ಥಾನಗಳ ಪೈಕಿ ಒಂದರಲ್ಲಿ 2018 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತ ಎರಡನೇ ಅವಧಿಗೆ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿ ಮರು ಆಯ್ಕೆಯಾಗಿದ್ದಾರೆ.

ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, 11 ಆಗಸ್ಟ್ 1947 ರಂದು ಅಂದಿನ ಸಂವಿಧಾನ ಸಭೆಯಲ್ಲಿ ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಸಮಾನತೆಯ ಕುರಿತು ಕ್ವೈದ್-ಐ-ಆಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಭಾಷಣವನ್ನು ಸ್ಮರಿಸಲು 11 ಆಗಸ್ಟ್ 2022 ರಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಾವೇಶವನ್ನು ರಾಷ್ಟ್ರೀಯ ಅಸೆಂಬ್ಲಿ ಹಾಲ್‌ನಲ್ಲಿ ನಡೆಸಲಾಯಿತು. ರಾಷ್ಟ್ರೀಯ ಮತ್ತು ಪ್ರಾಂತೀಯ ಅಲ್ಪಸಂಖ್ಯಾತ ಸಮುದಾಯಗಳ ಹಲವಾರು ಹಾಲಿ ಮತ್ತು ಮಾಜಿ ಸದಸ್ಯರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಗಿಲ್ ತನ್ನ ಭಾಷಣದಲ್ಲಿ, ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಇಸ್ಲಾಂಗೆ ಬಲವಂತದ ಮತಾಂತರದ ಘಟನೆ ಮತ್ತು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಹಿಂದೂ ಧರ್ಮದ ವ್ಯಕ್ತಿಯೂ ಅಲ್ಲ, ಪಾಕಿಸ್ತಾನದ ಸಂಸದರೂ ಅಲ್ಲ. ಅವರು ಕ್ರಿಶ್ಚಿಯನ್ ಮತ್ತು ಪಾಕಿಸ್ತಾನದ ಪಂಜಾಬ್‌ನ ಪ್ರಾಂತೀಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ, ಅವರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ದುಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ಸಂಸದನೊಬ್ಬ ಪಾಕಿಸ್ತಾನದ ಸಂಸತ್ತಿನಲ್ಲಿ ಹಿಂದೂಗಳ ಮೇಲೆ ಕರುಣೆ ತೋರಿ ಎಂದು ಬೇಡಿಕೊಳ್ಳುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನವ ಜೋಡಿಗಳಾದ ರಾಹುಲ್ ಮತ್ತು ಅಥಿಯಾ ಶೆಟ್ಟಿಗೆ ದೋನಿ ಮತ್ತು ಕೊಹ್ಲಿ ಕೋಟಿ ಮೌಲ್ಯದ ಉಡುಗೊರೆ ನೀಡಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights