ಫ್ಯಾಕ್ಟ್‌ಚೆಕ್: ಫೆಬ್ರವರಿ 14 ಪ್ರೇಮಿಗಳ ದಿನದಂದೇ ‘ಭಗತ್ ಸಿಂಗ್ ಮತ್ತು ಸಂಗಡಿಗರನ್ನು’ ಗಲ್ಲಿಗೇರಿಸಲಾಗಿತ್ತೆ?

ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಜಗತ್ತಿನಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಫೆಬ್ರವರಿ 14 ರಂದು ಪ್ರೇಮಿಗಳ ದಿನಗಳ ಬದಲಿಗೆ ದೇಶಪ್ರೇಮಿ ದಿನವನ್ನಾಗಿ ಆಚರಿಸಬೇಕು ಎಂಬ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14, 1931 ರಂದು ಗಲ್ಲಿಗೇರಿಸಲಾಯಿತು ಅವರನ್ನು ಗಲ್ಲಿಗೇರಿಸಿದ ದಿನವನ್ನು, ‘ಶಹೀದ್ ದಿವಸ್'(ಹುತಾತ್ಮರ ದಿನ) ಎಂದು ಆಚರಿಸಿ ಎನ್ನುವ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಫೆಬ್ರವರಿ 14ರಂದು ಯುವ ಚೇತನ ಕ್ರಾಂತಿಕಾರಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ನಿಜವಾಗಿಯೂ ಗಲ್ಲಿಗೇರಿಸಲಾಗಿತ್ತೆ. ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಫೆಬ್ರವರಿ 14 , 1931 ರಂದು ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಗಲ್ಲಿಗೇರಿಸಲಾಗಿತ್ತು ಎಂದು ಸುಳ್ಳು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಫೆಬ್ರವರಿ 14 ರಂದು ಇಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗುತ್ತಿದೆ.

ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಬಗ್ಗೆ ಇಡೀ ದೇಶಕ್ಕೇ ಹೆಮ್ಮೆ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ‘ಲಾಹೋರ್ ಪಿತೂರಿ ಪ್ರಕರಣ’ದಲ್ಲಿ ಭಗತ್ ಸಿಂಗ್ ಅವರನ್ನು ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿ 1930ರ ಅಕ್ಟೋಬರ್ 07ರಂದು ಕೋರ್ಟ್ ಮರಣದಂಡನೆ ತೀರ್ಪು ಪ್ರಕಟಿಸಿತು. 1931ರ ಮಾರ್ಚ್ 23ರಂದು ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರ್ ಅವರನ್ನು ಗಲ್ಲಿಗೇರಿಸಲಾಯಿತು.

ಅವರ ಮರಣದಂಡನೆಗೆ ಸಂಬಂಧಿಸಿದಂತೆ ಮಾರ್ಚ್ 25, 1931 ರಂದು ‘ದಿ ಟ್ರಿಬ್ಯೂನ್’ ಪ್ರಕಟಿಸಿದ ಲೇಖನವನ್ನು ‘ಪ್ರಸಾರ್ ಭಾರತಿ’ ಟ್ವೀಟ್‌ ಅನ್ನು ಇಲ್ಲಿ ನೋಡಬಹುದು. 24 ಮಾರ್ಚ್ 1931 ರಂದು ಪ್ರಕಟವಾದ ‘ದಿ ಹಿಂದೂ’ ಪತ್ರಿಕೆಯ ಲೇಖನವನ್ನು ಇಲ್ಲಿ ಓದಬಹುದು.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

ಬ್ರಿಟಿಷರ ವಿರುದ್ಧ ಹೋರಾಡಿ ಕೇವಲ 23ನೇ ವಯಸ್ಸಿಗೆ ಬಲಿದಾನ ಮಾಡಿಕೊಂಡ ಮಹಾನ್ ದೇಶಪ್ರೇಮಿ ಭಗತ್ ಸಿಂಗ್ ಸುಖ್‌ದೇವ್ ಹಾಗೂ ರಾಜ್‌ಗುರು ಇಂದಿನ ಯುವಕರ ‘ಐಕಾನ್’. ಆದರೆ ಪ್ರೇಮಿಗಳ ದಿನಾಚರಣೆಯನ್ನು ಸುಖಾಸುಮ್ಮನೆ ವಿರೋಧಿಸುವ ಭರದಲ್ಲಿ, ಈ ದಿನವನ್ನು ದೇಶದ ಮಹಾನ್ ಹುತಾತ್ಮರ ಪುಣ್ಯ ದಿನವೆಂದು ಕರೆಯುವುದು ಎಷ್ಟು ಸರಿ? ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಗಿದೆ ಹೊರತು, ಪ್ರೇಮಿಗಳ ದಿನದಂದು ಅಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇದೇ ಫೆಬ್ರುವರಿ 14 ಪ್ರೇಮಿಗಳ ದಿನದಂದು  “ಹಸು ತಬ್ಬಿಕೊಳ್ಳುವ ದಿನ” ಆಚರಿಸಲು ಕೇಂದ್ರೀಯ ಪಶು ಕಲ್ಯಾಣ ಮಂಡಳಿ ಮನವಿ ಮಾಡಿತ್ತು. ಇದಕ್ಕೆ ವ್ಯಾಪಕ ವಿರೋಧ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಪಶು ಕಲ್ಯಾಣ ಮಂಡಳಿ ಪ್ರಕಟಣೆಯನ್ನು ಹಿಂಪಡೆಯಿತು.

ಒಟ್ಟಾರೆಯಾಗಿ ಹೇಳುವುದಾದರೆ,ಪ್ರತಿ ಬಾರಿ ಫೆಬ್ರವರಿ 14 ಬಂತೆಂದರೆ ಅದಕ್ಕೆ ಕೌಂಟರ್ ಎಂಬಂತೆ ಇಂತಹ ಸುಳ್ಳು ಮತ್ತು ಅಸಂಬದ್ದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ವಿಕೃತಿಯನ್ನು ಹೊರಹಾಕುತ್ತಿರುತ್ತಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಯನ್ನು ಫೇಸ್‌ಬುಕ್, ವಾಟ್ಸಾಪ್‌ ಗಳಲ್ಲಿ ಹಂಚಿಕೊಂಡು ಸುಳ್ಳನ್ನೇ ಸತ್ಯವೆಂದು ಪ್ರಸಾರ ಮಾಡುವ ಮುನ್ನು ಪರಿಶೀಲಿಸಿ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಗರ್ಭಿಣಿಯರು ಪರಂಗಿ ಹಣ್ಣು ತಿಂದರೆ ಗರ್ಭಪಾತವಾಗುತ್ತದೆಯೇ? ತಜ್ಞರು ಏನೇಳುತ್ತಾರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights