ಫ್ಯಾಕ್ಟ್‌ಚೆಕ್: ರಷ್ಯಾ ಅಧ್ಯಕ್ಷ ಪುಟಿನ್ ಕಚೇರಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಫೋಟೊ ಹಾಕಲಾಗಿದೆಯೇ?

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಫೋಟೊವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಛೇರಿಯಲ್ಲಿ ಹಾಕಿಕೊಂಡಿದ್ದಾರೆ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂಬೇಡ್ಕರ್ ಅವರ ಫೋಟೊವನ್ನು ಪುಟಿನ್ ತನ್ನ ಕಚೇರಿಯಲ್ಲಿ ಹಾಕಿಕೊಳ್ಳುವ ಮೂಲಕ ಗೌರವ ಸೂಚಿಸಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ನಿಜವಾಗಿಯೂ ಪುಟಿನ್ ಅವರ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೊವನ್ನು ಹಾಕುವ ಮೂಲಕ ಗೌರವ ಸೂಚಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  ರಷ್ಯಾದ ಅಧ್ಯಕ್ಷರ ಅಧಿಕೃತ ವೆಬ್‌ಸೈಟ್‌ನಲ್ಲಿನ ಲೇಖನದಲ್ಲಿ ಇದೇ ರೀತಿಯ ಚಿತ್ರವು ಕಂಡುಬಂದಿದೆ. 27 ನವೆಂಬರ್ 2001 ರ ಲೇಖನದ ಚಿತ್ರದ ಶೀರ್ಷಿಕೆಯ ಪ್ರಕಾರ, ರಷ್ಯಾದ ಅಧ್ಯಕ್ಷರು ಭದ್ರತಾ ಮಂಡಳಿಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯ ಚಿತ್ರದ ಹಿಂಭಾಗದಲ್ಲಿ ಅಂಬೇಡ್ಕರ್ ಅವರ ಚಿತ್ರ ಕಾಣುವುದಿಲ್ಲ.


ರಷ್ಯಾದ ಅಧ್ಯಕ್ಷರ ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಡುಬರುವ ಇದೇ ರೀತಿಯ ಚಿತ್ರಗಳೊಂದಿಗೆ ವೈರಲ್ ಚಿತ್ರವನ್ನು ಹೋಲಿಸಿದಾಗ, ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ. ವೈರಲ್ ಆದ ಫೋಟೋವನ್ನು ಮಾರ್ಫ್ ಮಾಡಲಾಗಿದೆ. ಈ ಎಲ್ಲಾ ಚಿತ್ರಗಳಲ್ಲಿ ಕಂಡುಬರುವ ಬ್ಯಾಕ್ ಗ್ರೌಂಡ್ ಚಿತ್ರ ವಾಸ್ತವವಾಗಿ ಸೋವಿಯತ್ ಒಕ್ಕೂಟದ (ಲಾಂಛನ) ಮುದ್ರೆಯಾಗಿದೆ.


ಫೋಟೋಗಳಲ್ಲಿ ಕಂಡುಬರುವ ಕಚೇರಿಯು ಮಾಸ್ಕೋ ಕ್ರೆಮ್ಲಿನ್‌ನ ಸೆನೆಟ್ ಕಟ್ಟಡದಲ್ಲಿ ಭದ್ರತಾ ಮಂಡಳಿಯ ಸಭೆಯ ಸ್ಥಳವಾಗಿದೆ. ರಷ್ಯಾದಲ್ಲಿ, ಭದ್ರತಾ ಮಂಡಳಿಯನ್ನು 1992 ರಲ್ಲಿ ರಚಿಸಲಾಯಿತು ಮತ್ತು ಭದ್ರತಾ ಮಂಡಳಿಯ ಕಚೇರಿಯು ಅಧ್ಯಕ್ಷೀಯ ಕಾರ್ಯನಿರ್ವಾಹಕ ಕಚೇರಿಯ ಪ್ರತ್ಯೇಕ ವಿಭಾಗವಾಗಿದೆ. ಅಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇರಿಸಲಾಗಿದೆ ಎಂದು ತೀರ್ಮಾನಿಸಲು ಯಾವುದೇ ಪುರಾವೆಗಳಿಲ್ಲ.

ಅದೇ ಚಿತ್ರವು ಈ ಹಿಂದೆ ವೈರಲ್ ಆಗಿತ್ತು,  ಇಲ್ಲಿ ಮತ್ತು ಇಲ್ಲಿ ನಂತರ ಅದನ್ನು ಫ್ಯಾಕ್ಟ್‌ಚೆಕ್ ಮೂಲಕ ಸುಳ್ಳು ಎಂದು ನಿರೂಪಿಸಲಾಗಿತ್ತು. ಆದರೂ ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೇ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿ US 100 ಡಾಲರ್ ಮುಖಬೆಲೆಯ ನೋಟಿನಲ್ಲಿ ಅಂಬೇಡ್ಕರ್ ಫೋಟೊವನ್ನು ಅಮೇರಿಕಾ ಸರ್ಕಾರ ಹಾಕಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೊಳ್ಳಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ,ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕಚೇರಿಯಲ್ಲಿ ಇರುವ ಸೋವಿಯತ್ ಒಕ್ಕೂಟದ ಲಾಂಛನವನ್ನು ಎಡಿಟ್ ಮಾಡುವ ಮೂಲಕ ಅಂಬೇಡ್ಕರ್ ಅವರ ಚಿತ್ರವನ್ನು ಇರಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ ಅಂಬೇಡ್ಕರ್ ಅವರ ಭಾವಚಿತ್ರ ಪುಟಿನ್ ಅವರ ಕಚೇರಿಯಲ್ಲಿ ಇರಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸೂರ್ಯನಿಂದ ಕಳಚಿ ಬಿತ್ತೆ ಬೃಹತ್ ಗಾತ್ರದ ತುಂಡು? ಇದು ಅಪಾಯದ ಮುನ್ಸೂಚನೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights