ಫ್ಯಾಕ್ಟ್‌ಚೆಕ್: ಬಿಹಾರದ ವಲಸೆ ಕಾರ್ಮಿಕರ ಮೇಲೆ ತಮಿಳಿಗರು ದಾಳಿ ನಡೆಸಿದ್ದು ನಿಜವೇ?

ಬಿಹಾರಿಗಳ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬಿಹಾರದಿಂದ ಕೆಲಸ ಹುಡುಕಿಕೊಂಡು ತಮಿಳುನಾಡಿಗೆ ಬಂದಿರುವ ಹಿಂದಿ ಭಾಷಿಕ ಬಿಹಾರಿಗಳ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಯುತ್ತಿದೆ ಎಂದು ಹೇಳಲಾಗುವ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವ್ಯಕ್ತಿಯೊಬ್ಬರ ಮೇಲೆ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಬಿಹಾರದಿಂದ ಬಂದ ಕಾರ್ಮಿಕರು ರಾಜ್ಯದಲ್ಲಿ ತಮಿಳು ಭಾಷಿಕರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಇದು ಸುಳ್ಳು ಎಂದು ಆಲ್ಟ್‌ನ್ಯೂಸ್‌ ಮಾಡಿರುವ ವರದಿ ಲಭ್ಯವಾಗಿದೆ. ತಮಿಳುನಾಡಿನಲ್ಲಿ ಹಿಂದಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಸುಳ್ಳು ಹಬ್ಬಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ತಮಿಳುನಾಡು ಡಿಜಿಪಿ ಸ್ಪಷ್ಟಪಡಿಸಿದ್ದಾರೆ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೊಗಳಿಗೂ, ಈ ಘಟನೆಗೂ ಸಂಬಂಧವಿಲ್ಲ. ತಮಿಳುನಾಡಿನಲ್ಲಿ ಮೊದಲಿನಿಂದಲೂ ಹಿಂದಿ ಹೇರಿಕೆಯ ವಿರುದ್ದ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಹಿಂದಿ ಭಾಷಿಕರ ವಿರುದ್ದ ಅಥವಾ ವಲಸೆ ಕಾರ್ಮಿಕರ ವಿರುದ್ದ ಯಾವುದೇ ದಾಳಿಗೆ ಮುಂದಾಗಿಲ್ಲ. ಇದೊಂದು ತಮಿಳುನಾಡು ಮತ್ತು ಉತ್ತರ ಭಾರತದ ಜನರನ್ನು ಎತ್ತಿಕಟ್ಟುವ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಸ್ಟಾಲಿನ್ ಅವರು ದೂರವಾಣಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಹಾರ ಪ್ರಜೆಗಳ ರಕ್ಷಣೆಯ ಭರವಸೆ ನೀಡಿದ್ದಾರೆ. ಬಿಹಾರದ ಸರ್ಕಾರದ ತಂಡವೊಂದು ತಮಿಳುನಾಡಿಗೆ ಭೇಟಿ ನೀಡಿ, ರಾಜ್ಯದ ಕಾರ್ಮಿಕರ ಸುರಕ್ಷತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ತಮಿಳುನಾಡಿನಲ್ಲಿ ಬಿಹಾರಿಗಳನ್ನು ಗುರಿಯಾಗಿಸಿ ದಾಳಿ ನಡೆಲಾಗುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು PTI ವರದಿ ಮಾಡಿದೆ. ಹಾಗಾಗಿ ಸೋಶಿಯಲ್ ಮೀಡಿಯಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ :ತಮಿಳುನಾಡಿನ BJP ನಾಯಕರು ಮದ್ಯ ಮತ್ತು ಮಾಂಸದೊಂದಿಗೆ ಇರುವ ಫೋಟೊ ವೈರಲ್! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights