ಫ್ಯಾಕ್ಟ್‌ಚೆಕ್ : ನರೇಂದ್ರ ಮೋದಿ ವಿಶ್ವದ 2ನೇ ಭ್ರಷ್ಟ ಪ್ರಧಾನಿಯೇ?

ಫಾಕ್ಸ್ ನ್ಯೂಸ್ ವೆಬ್‌ಸೈಟ್ ಬಿಡುಗಡೆ ಮಾಡಿದ ಟಾಪ್ 10 ಭ್ರಷ್ಟ ಪ್ರಧಾನ ಮಂತ್ರಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ ಎಂದು ಹೇಳುವ ಸುದ್ದಿ ಕ್ಲಿಪ್ಪಿಂಗ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಜಗತ್ತಿನ 10 ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 2ನೇ ಸ್ಥಾನ  ಪಡೆದಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಪಟ್ಟಿಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮೊದಲನೇ ಸ್ಥಾನದಲ್ಲಿದ್ದರೆ, ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಫಾಕ್ಸ್ ನ್ಯೂಸ್ ಎಂಬ ಹೆಸರಿನ ವೆಬ್ ಸೈಟ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನಂತರ ಈ ಪಟ್ಟಿ ವೈರಲ್ ಆಗಿದೆ. ಆ ಪಟ್ಟಿಯ ಕೆಳಗೆ ‘ಭಾರತದ 14ನೇ ಪ್ರಧಾನಿ ಮೋದಿ ಜಗತ್ತಿನ ಅತಿ ಭ್ರಷ್ಟ ಪ್ರಧಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕಪ್ಪುಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ, ಚುನಾವಣಾ ಪ್ರಚಾರಕ್ಕಾಗಿ ಸಹರಾ ಗ್ರೂಪ್‌ನ ಶ್ರೀಮಂತ ಉದ್ಯಮಿಗಳ ಬಳಿ ಹಣ ತೆಗೆದುಕೊಳ್ಳುತ್ತಿದ್ದಾರೆ.

ಆ ಹಣವನ್ನು ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡಿ ಮತ್ತಷ್ಟು ಹಣ ಸಂಪಾದಿಸುತ್ತಿದ್ದಾರೆ. ಅಲ್ಲದೆ ಅತಿ ಹೆಚ್ಚು ವೇತನ ಪಡೆಯುವ ಪ್ರಥಮ ಪ್ರಧಾನಿಯೂ ಹೌದು’ ಎಂದು ಒಕ್ಕಣೆಯನ್ನೂ ಬರೆಯಲಾಗಿದೆ. ಆದರೆ ನಿಜಕ್ಕೂ ಅಮೆರಿಕದ ಸುದ್ದಿ ಸಂಸ್ಥೆ ‘ಫಾಕ್ಸ್ ನ್ಯೂಸ್’ ಭ್ರಷ್ಟ ಪ್ರಧಾನಿಗಳ ಪಟ್ಟಿಯನ್ನು ಸಿದ್ಧಪಡಿಸಿರುವುದು ನಿಜವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ವರದಿ ಎಂದು ‘ಫ್ಯಾಕ್ಟ್‌ಲಿ’ ವರದಿ ಮಾಡಿದೆ.

ವಿಶ್ವದ ಅತ್ಯಂತ ಭ್ರಷ್ಟ ಪ್ರಧಾನ ಮಂತ್ರಿಗಳ ಬಗ್ಗೆ ಫಾಕ್ಸ್ ನ್ಯೂಸ್ ಅಂತಹ ಯಾವುದೇ ವರದಿಯನ್ನು ಪ್ರಕಟಿಸಲಿಲ್ಲ. ಯುಎಸ್ ಮೂಲದ ಫಾಕ್ಸ್ ನ್ಯೂಸ್ ಮಾಧ್ಯಮ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲದ ಅಜ್ಞಾತ ನಕಲಿ ವೆಬ್‌ಸೈಟ್ ‘ಫಾಕ್ಸ್ ನ್ಯೂಸ್ ಪಾಯಿಂಟ್’ ಈ ವರದಿಯನ್ನು ಬಿಡುಗಡೆ ಮಾಡಿದೆ. ‘ಫಾಕ್ಸ್ ನ್ಯೂಸ್ ಪಾಯಿಂಟ್’ ವೆಬ್‌ಸೈಟ್ ಈಗ ಅಂತರ್ಜಾಲದಲ್ಲಿ ಲಭ್ಯವಿಲ್ಲ.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಮತ್ತು ಇತರ ಸಂಸ್ಥೆಗಳು ಪ್ರಕಟಿಸಿದ ವರದಿಗಳ ಆಧಾರದ ಮೇಲೆ ಫಾಕ್ಸ್ ನ್ಯೂಸ್ ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಕುರಿತು ಲೇಖನಗಳನ್ನು ಪ್ರಕಟಿಸಿತು. ಆದರೆ ಅತ್ಯಂತ ಭ್ರಷ್ಟ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿರುವ ವರದಿಯನ್ನು ಫಾಕ್ಸ್ ನ್ಯೂಸ್ ಪ್ರಕಟಿಸಿಲ್ಲ. ಸಮೀಕ್ಷೆಯನ್ನು ನಕಲಿ ವೆಬ್‌ಸೈಟ್ ಪ್ರಕಟಿಸಿದೆ ಎಂದು ವರದಿ ಮಾಡಿ, ಹಲವಾರು ಸುದ್ದಿ ವೆಬ್‌ಸೈಟ್‌ಗಳು 2018 ರಲ್ಲಿ ಲೇಖನಗಳನ್ನು ಪ್ರಕಟಿಸಿದವು.

ಒಟ್ಟಾರೆಯಾಗಿ ಹೇಳುವುದಾದರೆ, ಫಾಕ್ಸ್ ನ್ಯೂಸ್ ಈ ರೀತಿಯ ಯಾವುದೇ ಸಮೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡಿಲ್ಲ. ಇದೊಂದು ನಕಲಿ ಪಟ್ಟಿ. ರಾಜಕೀಯ ದುರುದ್ದೇಶದಿಂದ ಈ ರೀತಿ ನಕಲಿ ಪಟ್ಟಿ ಸೃಷ್ಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರ ಎಂದು BJP ನಾಯಕಿಯ ಚಿತ್ರ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights