ಫ್ಯಾಕ್ಟ್‌ಚೆಕ್ : ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿ ಅಗೌರವ ತೋರುತ್ತಿರುವ ವಿಡಿಯೋ ಕೇರಳದಲ್ಲ

ರಸ್ತೆಯ ಮೇಲೆ ಚಿತ್ರಿಸಲಾದ ತ್ರಿವರ್ಣ ಧ್ವಜದ ಮೇಲೆ ವಾಹನಗಳು ಚಲಿಸುತ್ತಿರುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈಯಲ್ಲಿ ಪಾಕಿಸ್ತಾನದ ಧ್ವಜ ಹಿಡಿದಿರುವ ಹಲವರು ಘೋಷಣೆ ಕೂಗುವ ಚಿತ್ರಣ 3.8 ನಿಮಿಷದ ವಿಡಿಯೊದಲ್ಲಿ ದಾಖಲಾಗಿದೆ. ತಮಿಳುನಾಡಿನ ತಂಜಾವೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳುವ ಪೋಸ್ಟ್‌ನಲ್ಲಿ ಜನರು ಪಾಕಿಸ್ತಾನದ ಧ್ವಜವನ್ನು ಹಿಡಿದುಕೊಂಡು ಹರ್ಷೋದ್ಗಾರ ಮಾಡುತ್ತಿದ್ದಾರೆ.

ಇನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಕೇರಳದಲ್ಲಿ ನಡೆದ ಘಟನೆಯಿಂದ ಬಂದಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಾಡಿರುವ ಪ್ರತಿಪಾದನೆ ನಿಜವೆ ತಿಳಿಸಿ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಅನ್ನು ವಿನಂತಿಸಿದ್ದಾರೆ. ಹಾಗಿದ್ದರೆ ವೈರಲ್ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ತಮಿಳುನಾಡಿನ ತಂಜಾವೂರಿನಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಅವಮಾನಿಸಿದ ಯಾವುದೇ ವರದಿಗಳಿಲ್ಲ. ಅಂತಹ ಯಾವುದೇ ಘಟನೆ ನಿಜವಾಗಿಯೂ ನಡೆದಿದ್ದರೆ, ಮಾಧ್ಯಮಗಳು ಅದನ್ನು ವರದಿ ಮಾಡುತ್ತವೆ, ಆದರೆ, ಅಂತಹ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಇದಲ್ಲದೆ,  ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಘಟನೆಯ ದೃಶ್ಯಾವಳಿಗಳು ನಡೆದಿರುವುದು ತಂಜಾವೂರಿನಿಂದ ಅಲ್ಲ ಎಂದು ತಿಳಿದುಬಂದಿದೆ,

ಕೀವರ್ಡ್ ಮೂಲಕ ಮತ್ತಷ್ಟು ಸರ್ಚ್ ಮಾಡಿದಾಗ, ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇದೇ ವಿಡಿಯೋ 2022 ಜೂನ್‌ನಲ್ಲಿ ತಮಿಳುನಾಡಿನಲ್ಲಿ ನಡೆದ ಘಟನೆ ಎಂದು ವೈರಲ್ ಆಗಿತ್ತು.

ಇದು ಪಾಕಿಸ್ತಾನದ ಕರಾಚಿಗೆ ಸಂಬಂಧಿಸಿದ ವಿಡಿಯೊ ಎಂದು ಇಂಡಿಯಾಟುಡೇ ವರದಿ ಮಾಡಿದೆ. ವಾಹನವೊಂದರ ಮೇಲೆ ಬರೆಯಲಾಗಿರುವ ಹುನಾರ್ ಫೌಂಡೇಷನ್ ಹೆಸರು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗೆ ಸಂಬಂಧಿಸಿದ್ದಾಗಿದೆ. ವಿಡಿಯೊದಲ್ಲಿ ಕಾಣಿಸುವ ರಿಕ್ಷಾಗಳು ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೊದಲ್ಲಿ ಕಾಣಿಸುವ ಬೀದಿಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುದು ದೃಢಪಟ್ಟಿದೆ ಎಂದು ಇಂಡಿಯಾಟುಡೇ ಹೇಳಿದೆ.

ವೈರಲ್ ವೀಡಿಯೊದ 3:38 ಅವಧಿಯ ತುಣುಕಿನಲ್ಲಿ, ‘ದಿ ಹುನಾರ್ ಫೌಂಡೇಶನ್‘ ಎಂದು ಬರೆದಿರುವ ಬಿಳಿ ವ್ಯಾನ್ ಹಾದುಹೋಗುವುದನ್ನು ಕಾಣಬಹುದು. ದಿ ಹುನಾರ್ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಸಂಸ್ಥೆಯು ಕರಾಚಿಯಲ್ಲಿದೆ ಮತ್ತು ಇದು ಪಾಕಿಸ್ತಾನದ ಯುವಕರಿಗೆ ಕೌಶಲ್ಯ ಅಭಿವೃದ್ಧಿ/ತಾಂತ್ರಿಕ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಇದು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶದಲ್ಲಿ ತನ್ನ ಮೊದಲ ಬ್ಯಾಚ್ ಅನ್ನು ಪ್ರಾರಂಭಿಸಿತು. ಕರಾಚಿ ಮೂಲದ ಪ್ರಿಂಟಿಂಗ್ ಅಂಗಡಿಯ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ವಾಹನಗಳ ಚಿತ್ರಗಳನ್ನು ಕಾಣಬಹುದು.

3:44 ಸೆಕೆಂಡುಗಳಲ್ಲಿ ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಗುರುತಿಸಬಹುದು, ಅದರ ಮೇಲೆ ‘BFK-625’ ಎಂದು ಬರೆಯಲಾಗಿದೆ. Google ಸರ್ಚ್ ಮೂಲಕ, ಅಂತಹ ನಂಬರ್ ಪ್ಲೇಟ್‌ಗಳು ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸಂಬಂಧಿಸಿವೆ ಎಂದು ಮಾಹಿತಿ ಲಭ್ಯವಾಗವೆ, ಅದರ ರಾಜಧಾನಿ ಕರಾಚಿಯಾಗಿದೆ. ವೈರಲ್ ವೀಡಿಯೊದಲ್ಲಿರುವಂತೆಯೇ ವಾಹನದ ನಂಬರ್ ಪ್ಲೇಟ್‌ಗಳ ಚಿತ್ರಗಳನ್ನು ಪ್ರಕಟಿಸಿದ ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಧ್ವಜವನ್ನು ಅವಮಾನಿಸುವ ಪಾಕಿಸ್ತಾನದ ದೃಶ್ಯಗಳನ್ನು ತಮಿಳುನಾಡಿನಂತೆ ಹಂಚಿಕೊಳ್ಳಲಾಗುತ್ತಿದೆ. ವಿಡಿಯೊದಲ್ಲಿ ಕಾಣಿಸುವ ರಿಕ್ಷಾಗಳು ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೊದಲ್ಲಿ ಕಾಣಿಸುವ ಬೀದಿಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹಾರ್ದಿಕ್ ಪಟೇಲ್ ಕಾಂಗ್ರೆಸ್ ತೊರೆದು BJP ಸೇರಿದಕ್ಕೆ ಕಪಾಳಕ್ಕೆ ಹೊಡೆಯಲಾಯಿತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights