ಫ್ಯಾಕ್ಟ್‌ಚೆಕ್ : ಭಾರತದ ಸ್ನೇಹಕ್ಕೆ, 8 ಜನರ ಮರಣದಂಡನೆಯನ್ನು ಕತಾರ್ ರದ್ದು ಪಡಿಸಿದೆಯೇ?

ಕಳೆದ ತಿಂಗಳು ಕತಾರ್‌ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಮರಣದಂಡನೆಗೆ ಗುರಿಯಾದ ಎಂಟೂ ಮಂದಿ ಅಲ್ ದಹ್ರಾ ಕಂಪನಿಯ ನೌಕರರಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಇವರನ್ನು ಶಂಕಿತ ಬೇಹುಗಾರಿಕೆ ಆರೋಪದ ಅಡಿಯಲ್ಲಿ ವಶಕ್ಕೆ ಪಡೆಯಲಾಗಿತ್ತು.

ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ-28)ರ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯ ವೇಳೆ ಕತಾರ್‌ ದೊರೆ ಶೇಖ್ ತಮೀಮ್‌ ಬಿನ್ ಹಮದ್ ಅಲ್ ಥಾನಿ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಈ ಭೇಟಿಯ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು  ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ರದ್ದು ಪಡಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

https://twitter.com/HarbirSinghSuri/status/1730121049289998407

” ನಮಗೆ ಭಾರತದ ಸ್ನೇಹವು ಹೆಚ್ಚು ಮುಖ್ಯವಾಗಿದೆ ಹಾಗಾಗಿ, 8 ಜನರ ಮರಣದಂಡನೆಯನ್ನು ರದ್ದುಗೊಳಿಸುವುದಾಗಿ ಕತಾರ್ ಘೋಷಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕತಾರ್ ಮರಣದಂಡನೆಯನ್ನು ರದ್ದುಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ ಮತ್ತು ವೈರಲ್ ಪೋಸ್ಟ್‌ನಲ್ಲಿ ಹೇಳಿಕೊಂಡಂತೆ “ಭಾರತದ ಸ್ನೇಹವು ಹೆಚ್ಚು ಮುಖ್ಯವಾಗಿದೆ” ಎಂದು ಹೇಳುವ ಯಾವುದೇ ಅಧಿಕೃತ ಹೇಳಿಕೆಗಳು ಕಂಡುಬಂದಿಲ್ಲ.

ದೈನಿಕ್ ಭಾಸ್ಕರ್ ಪತ್ರಕರ್ತ ಅಭಿನಂದನ್ ಮಿಶ್ರಾ ಅವರು X ನಲ್ಲಿ ಡಿಸೆಂಬರ್ 1, 2023 ರಂದು ಟ್ವೀಟ್ ಮಾಡಿದ್ದು, ಪ್ರಕರಣದ ವಿಚಾರಣೆಯನ್ನು ನವೆಂಬರ್ 30, 2023 ರಂದು ನಡೆಸಲಾಯಿತು ಮತ್ತು ಮೊದಲ ಬಾರಿಗೆ ನ್ಯಾಯಾಲಯವನ್ನು ಉದ್ದೇಶಿಸಿ ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮಾತನಾಡಲು ಅವಕಾಶ ನೀಡಲಾಯಿತು ಎಂದು ಬರೆದಿದ್ದಾರೆ.

ಡಿಸೆಂಬರ್ 1, 2023 ರಂದು ಹಿಂದೂಸ್ತಾನ್ ಟೈಮ್ಸ್‌ ಮಾಡಿರುವ ವರದಿಯ ಪ್ರಕಾರ, ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಮಾತನಾಡಿ, ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರವು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

“ಕತಾರ್‌ನಲ್ಲಿರುವ ಮಾಜಿ ನೌಕಾಪಡೆಯ ಅಧಿಕಾರಿಗಳು ಅನುಭವಿಗಳು. ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವಲ್ಲಿ ನಾವು ಜವಬ್ದಾರಿಯನ್ನು ಹೊಂದಿದ್ದೇವೆ. ಅವರನ್ನು ಮರಳಿ ಕರೆತರಲು ಭಾರತ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದರು.

ಏನಿದು ಪ್ರಕರಣ?

ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್‌ಗಾಗಿ ಕೆಲಸ ಮಾಡುತ್ತಿದ್ದ ಎಂಟು  ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಕತಾರ್‌ ಪೊಲೀಸರು ಬಂಧಿಸಿದ್ದರು. ಬಂಧಿತರ ಮೇಲೆ ಬೇಹುಗಾರಿಕೆಯ ಆರೋಪವನ್ನು ಹೊರಿಸಲಾಗಿದೆ. ಈ 8 ಮಾಜಿ ಅಧಿಕಾರಿಗಳ ಜಾಮೀನು ಅರ್ಜಿಗಳನ್ನು ಹಲವಾರು ಬಾರಿ ತಿರಸ್ಕರಿಸಲಾಗಿದೆ ಮತ್ತು ಅವರ ಬಂಧನವನ್ನು ಕತಾರ್ ಅಧಿಕಾರಿಗಳು ವಿಸ್ತರಿಸಿದ್ದರು. ಬಂಧಿತ ಭಾರತೀಯರಲ್ಲಿ ನಿವೃತ್ತ ಕಮಾಂಡರ್ ಪೂರ್ಣೇಂದು ತಿವಾರಿ ಅವರು ಅಲ್ ದಹ್ರಾ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ನಮಗೆ ಈ 8 ಜನರಿಗೆ ವಿಧಿಸಿರುವ ಶಿಕ್ಷೆಯ ವಿಚಾರವಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮರಣದಂಡನೆ ವಿಧಿಸಲಾಗಿದೆ ಎಂಬುದನ್ನು ತಿಳಿದು ತೀವ್ರ ಆಘಾತವಾಗಿದೆ. ಇವರ ಕುಟುಂಬದ ಸದಸ್ಯರ ಜೊತೆ ಮತ್ತು ಕಾನೂನು ತಂಡದ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಪ್ರಧಾನ ಮಂತ್ರಿಗಳ ಅಧಿಕೃತ ಖಾತೆಯಲ್ಲಿCOP ಶೃಂಗಸಭೆ ನಡೆದ ಸುಮಾರು 24 ಗಂಟೆಗಳ ನಂತರ  ಕತಾರ್ ದೊರೆಯ ಜೊತೆ ಮಾತುಕತೆಯ ಕುರಿತು ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯ ಸಾಧ್ಯತೆ ಮತ್ತು ಕತಾರ್‌ನಲ್ಲಿರುವ ಭಾರತೀಯರ ಯೋಗಕ್ಷೇಮದ ಕುರಿತು ಸಕಾರಾತ್ಮಕ ಚರ್ಚೆ ನಡೆಸಿರುವುದಾಗಿ ಮೋದಿ ತಿಳಿಸಿದ್ದಾರೆ. ಆದರೆ ಮೋದಿ ಅವರು ಕತಾರ್‌ ದೊರೆಯೊಂದಿಗೆ ಎಂಟು ಭಾರತೀಯರಿಗೆ ವಿಧಿಸಿರುವ ಮರಣದಂಡನೆಯ ರದ್ದು ವಿಚಾರವನ್ನು ಮಾಡಿದ್ದಾರೆ ಎಂಬುದಾಗಲಿ, ಮರಣದಂಡನೆಯನ್ನು  ಕತಾರ್ ರದ್ದು ಪಡಿಸಿದೆ ಎಂಬುದಾಗಲಿ ಅಧಿಕೃತವಾಗಿಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಆಸ್ಟ್ರೇಲಿಯಾ ವಿರುದ್ದ ಕ್ರಿಕೆಟ್‌ನಲ್ಲಿ ಹೋದ ಮಾನ ಹಾಕಿಯಲ್ಲಿ ಬಂತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights