FACT CHECK | ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ನಿಜವೇ?

“ನಾನು ರಾಹುಲ್ ಗಾಂಧಿ, ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಚುನಾವಣೆಗೋಸ್ಕರ ಹಿಂದೂ ಆಗಿ ಸುಸ್ಸತಾಗಿದ್ದೇನೆ. ನಾನು ಅನ್ಯಾಯ ಯಾತ್ರೆ ಮಾಡಿದೆ. ಪಕ್ಷದ ಪ್ರಣಾಳಿಕೆ ಕೂಡಾ ಬಿಡುಗಡೆ ಮಾಡಿದೆ. ಆದರೆ, ಮೋದಿ ಅವರು ಭ್ರಷ್ಟರನ್ನು ಜೈಲಿಗೆ ಕಳಿಸೋದ್ರಲ್ಲಿ ನಿರತರಾಗಿದ್ದಾರೆ’  ‘ಮೋದಿ ಅವರ ನಾಯಕತ್ವದಲ್ಲಿ ಭ್ರಷ್ಟರನ್ನು ನಿರಂತರವಾಗಿ ಜೈಲಿಗೆ ಕಳಿಸುತ್ತಿದ್ದಾರೆ. ಹೀಗಾಗಿ, ನಾನು ಇಟಲಿಯಲ್ಲಿ ಇರುವ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೇನೆ’ ಎಂದು ರಾಹುಲ್ ಗಾಂಧಿ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಅಮಿತ್ @mithilaWalla ಎಂಬ ಎಕ್ಸ್‌ ಕಾತೆ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಾ, ಈ ವಿಡಿಯೋ ಅಸಲಿಯೇ ಅಥವಾ ತಿರುಚಿದ್ದೇ ಎಂಬುದು ತಿಳಿಯುತ್ತಿಲ್ಲ ಎಂಬ ಹೇಳಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ದಾಖಲೆಗಳಿಗೆ ಸಹಿ ಹಾಕುವ ದೃಶ್ಯಗಳನ್ನು ನೋಡಬುದಾಗಿದೆ.

ಇತ್ತೀಚೆಗೆ ರಾಹುಲ್ ಗಾಂಧಿ ವಯನಾಡು ಲೋಕಸಭಾ ಕ್ಷೇತ್ರದಿಂದ  ನಾಮಪತ್ರ ಸಲ್ಲಿಸಿದ್ದು, ಎಲ್‌ಡಿಎಫ್‌ನ ಅಭ್ಯರ್ಥಿ ಅನ್ನೆ ರಾಜಾ ಹಾಗೂ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ರಾಹುಲ್ ಗಾಂಧಿ ಅವರಿಗೆ ಪ್ರತಿಸ್ಪರ್ಧಿಗಳಾಗಿ ಕಣದಲ್ಲಿದ್ದಾರೆ. ಈ ಸಂದರ್ಬದಲ್ಲಿ ಇಂತಹ ವಿಡಿಯೋ ಹಂಚಿಕೆಯಾಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಹಾಗಿದ್ದರೆ ವಿಡಿಯೋದ ಅಸಲೀಯತ್ತೇನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಅಸಲೀಯತ್ತನ್ನು ಪರಿಶೀಲಿಸಲು ಕೀಪ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 3 ಏಪ್ರಿಲ್ 2024ರಂದು ದಿ ಹಿಂದೂ ಪತ್ರಿಕೆ ಪ್ರಕಟಿಸಿದ ವಿಡಿಯೋ ಲಭ್ಯವಾಗಿದೆ.

ವಿಡಿಯೋ ವರದಿಯ ಪ್ರಕಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬ ವಿವರಣೆಯನ್ನು ನೀಡಲಾಗಿದೆ. ವಯನಾಡು ಜಿಲ್ಲಾಧಿಕಾರಿ ರೇಣು ರಾಜ್ ಅವರಿಗೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಮತ್ತಷ್ಟು ಮಾಹಿತಿಗಾಗಿ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್‌ ಚಾನಲ್‌ಅನ್ನು ಸರ್ಚ್ ಮಾಡಿದಾಗ, ಏಪ್ರಿಲ್ 3 ರಂದು ಅಪ್‌ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ. ಇದರಲ್ಲಿ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ವಿವರ ನೀಡಲಾಗಿತ್ತು. ಈ ವಿಡಿಯೋಗೆ ‘ವಯನಾಡ್‌ನಿಂದ ರಾಹುಲ್ ಗಾಂಧಿ ನಾಮಪತ್ರ’ ಎಂದು ಶೀರ್ಷಿಕೆ ನೀಡಲಾಗಿದೆ. ವೈರಲ್ ವಿಡಿಯೋ ಮತ್ತು ಮೂಲ ವಿಡಿಯೋ ಒಂದೇ ತೆರನಾಗಿ ಇರುವುದನ್ನು ಇಲ್ಲಿ ಗಮನಿಸಬಹುದು. ಇದನ್ನು ಬೂಮ್ ಸುದ್ದಿ ತಾಣವು ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲ ವಿಡಿಯೋವನ್ನು ತಿರುಚಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುತ್ತಿರುವಂತೆ ಎಡಿಟ್‌ ಮಾಡಲಾಗಿದೆ ಎಂದು ಬೂಮ್ ವರದಿ ಮಾಡಿದೆ. ಬೂಮ್ ವರದಿಯ ಪ್ರಕಾರ ಮೂಲ ವಿಡಿಯೋವನ್ನು AI ಬಳಸಿ ಎಡಿಟ್ ಮಾಡುವ ಮೂಲಕ ಆಡಿಯೋವನ್ನು ತಿರುಚಲಾಗಿದೆ ಎಂದು ಹೇಳಿದೆ. ರಾಹುಲ್ ಗಾಂಧಿ ಅವರ ಧ್ವನಿಯನ್ನು ಕೃತಕ ಬುದ್ದಿಮತ್ತೆ ಬಳಸಿ ರ್ಧವನಿ ಬದಲಾಯಿಸಲಾಗಿದೆ.

ಮೂಲ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡುತ್ತಾ, ‘ನಾನು ರಾಹುಲ್ ಗಾಂಧಿ. ವಯನಾಡ್‌ನಿಂದ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಭಾರತದ ಸಂವಿಧಾನದ ಮೇಲೆ ನಂಬಿಕೆ ಹೊಂದಿದ್ದು. ಈ ನೆಲದ ಕಾನೂನು ಹಾಗೂ ದೇಶದ ಸಾರ್ವಭೌಮತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತೇನೆ’ ಎಂದು ಹೇಳುವುದನ್ನು ಕೇಳಬಹುದು.

ಒಂದು ವೇಳೆ ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇ ಆಗಿದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗಿ ಪ್ರಸಾರವಾಗುತ್ತಿತ್ತು. ಆದರೆ ಅಂತಹ ಯಾವ ವರದಿಗಳು ನಮಗೆ ಲಭ್ಯವಾಗಿಲ್ಲ. ಹಾಗಾಗಿ ಇದೊಂದು ತಿರುಚಿದ ವಿಡಿಯೋ ಎಂಬುದು ಸ್ಪಷ್ವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ವಯನಾಡ್‌ನಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವ ದೃಶ್ಯಗಳನ್ನು ತಿರುಚಿ, ನಾನು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದ ಮುಸ್ಲಿಂ ವ್ಯಕ್ತಿ ಹಿಂದೂಗಳಿಗೆ ಹಂಚುವ ಹಾಲಿನಲ್ಲಿ ಸ್ನಾನ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights