FACT CHECK | ಡಿಎಂಕೆ ಪಕ್ಷಕ್ಕೆ ವೋಟ್ ಹಾಕಲಿಲ್ಲ ಎಂದು ಡಿಎಂಕೆ ಸದಸ್ಯರು ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿದ್ದಾರೆಂದು ಸುಳ್ಳು ಹಂಚಿಕೊಂಡ ಅಣ್ಣಾಮಲೈ

ಏಪ್ರಿಲ್ 19ರಂದು ತಮಿಳುನಾಡಿನಲ್ಲಿ ಮೊದಲ ಹಂತದ ಮತದಾನ ನಡೆದಿದ್ದು, ಡಿಎಂಕೆ ಪಕ್ಷಕ್ಕೆ ವೋಟ್ ಹಾಕಲಿಲ್ಲ ಎಂಬ ಕಾರಣಕ್ಕೆ ಡಿಎಂಕೆ ಕಾರ್ಯಕರ್ತರು ಮಹಿಳೆಯನ್ನು ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತಮ್ಮ ಎಕ್ಸ್‌ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. (ತಮಿಳಿನಲ್ಲಿ ಹಂಚಿಕೊಂಡಿರುವ ಪೋಸ್ಟ್‌ಅನ್ನು ಅನುವಾಧಿಸಲಾಗಿದೆ)

“ಕಡಲೂರು ಜಿಲ್ಲೆಯ ಶ್ರೀಮುಷ್ಣಂ ಸಮೀಪದ ಪಕಿರಿಮಣಿಯಂ ಗ್ರಾಮದ ನಿವಾಸಿಯಾಗಿರುವ ಎಂ.ಎಸ್.ಗೋಮತಿ ಅವರನ್ನು ಮತದಾನ ದಿನದಂದು ಚುನಾವಣೆಯಲ್ಲಿ ತಮ್ಮ ಮೈತ್ರಿಗೆ ಮತ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಮ ಕುಟುಂಬದವರ ಎದುರೇ ಮಹಿಳೆಯನ್ನು ಹೊಡೆದು ಕೊಂದಿದ್ದಾರೆ ಎಂಬ ಸುದ್ದಿ ಅತ್ಯಂತ ಆಘಾತಕಾರಿಯಾಗಿದೆ.

ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಅಪರಾಧದಲ್ಲಿ ಭಾಗಿಯಾದ ಡಿಎಂಕೆ ಸದಸ್ಯರನ್ನು ಸ್ಟಾಲಿನ್ ಸರಕಾರ ಬಂಧಿಸಿಲ್ಲ. ಸಂವಿಧಾನವು ಪ್ರಜೆಗಳಿಗೆ ನೀಡಿರುವ ಮತದಾನದ ಮೂಲಭೂತ ಹಕ್ಕನ್ನೂ ಕಸಿದುಕೊಳ್ಳುವ ಡಿಎಂಕೆಯ ಸರ್ವಾಧಿಕಾರಿ ಧೋರಣೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಭಾರತವನ್ನು ಉಳಿಸುವ ಕನಸು ಕಾಣುತ್ತಿರುವ ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಪಕ್ಷದ ಸದಸ್ಯರಿಂದ ತಮಿಳುನಾಡಿನ ಜನರನ್ನು ಉಳಿಸುವ ಕೆಲಸವನ್ನು ಮೊದಲು ಮಾಡಬೇಕು. ಈ ಅಪರಾಧದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Dinamalar, Polimer News (ದಿನಮಲರ್, ಪಾಲಿಮರ್ ನ್ಯೂಸ್‌ನಂತಹ)  ಮಾಧ್ಯಮಗಳು ಈ ಸುದ್ದಿಯನ್ನು ತಮ್ಮ ಪುಟಗಳಲ್ಲಿ ಪ್ರಕಟಿಸಿವೆ. , “ಪಾಣೈ(ಪಾಟ್) ಚಿಹ್ನೆಗೆ ಮತ ನೀಡಲಿಲ್ಲ ಎಂಬ ಕಾರಣಕ್ಕೆ ಡಿಎಂಕೆ ಗ್ಯಾಂಗ್ ಮಹಿಳೆಯ ಪ್ರಾಣ ತೆಗೆದಿದೆ” ಎಂದು ದಿನಮಲರ್  ಮತ್ತು ಪಾಲಿಮರ್ ನ್ಯೂಸ್ ವರದಿ ಮಾಡಿದೆ.

ಹಲವು ಬಿಜೆಪಿ ಸದಸ್ಯರು ಇದೇ ರೀತಿ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯ ಚಿತ್ರದೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ.

https://twitter.com/AmitLeliSlayer/status/1782035583847792703

ಹಾಗಿದ್ದರೆ ತಮಿಳುನಾಡಿನಲ್ಲಿ ನಿಜವಾಗಿಯೂ ಗೋಮತಿ ಎಂಬ ಮಹಿಳೆ ತಮ್ಮ ಪಕ್ಷಕ್ಕೆ (DMK) ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಅಣ್ಣಾಮಲೈ ಸೇರಿದಂತೆ ಬಿಜೆಪಿ ಬೆಂಬಲಿಗರು ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ನಡೆಸಿದಾಗ, ತಮಿಳುನಾಡು ಪೊಲೀಸರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ.

“ಸುಳ್ಳು ಸುದ್ದಿಗಳನ್ನು ಹರಡಬೇಡಿ. ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮಿಳುನಾಡು ಪೊಲೀಸರು ಏಪ್ರಿಲ್ 21 ರಂದು ಸುದ್ದಿ ಪ್ರಕಟಿಸಿದ್ದು  “ಕಳೆದ 19.04.2024 ರಂದು ಸಂಜೆ 06.00 ಗಂಟೆ ಸುಮಾರಿಗೆ ಪಕ್ಕಿರಿಮಣಿಯಂ ಗ್ರಾಮದ ಆಲದ ಮರದ ಮುಂದೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಶ್ರೀಮುಷ್ಣಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲೈಮಣಿ ವಿರುದ್ಧ ದಾಖಲಾದ ಹಳೆಯ ಪ್ರಕರಣವನ್ನು ಹಿಂಪಡೆಯುವ ಬಗ್ಗೆ ಚರ್ಚಿಸುವಾಗ ಒಂದೇ ಸಮುದಾಯದ ಎರಡೂ ಪಕ್ಷಗಳ ಸದಸ್ಯರ ನಡುವೆ ಜಗಳ ಪ್ರಾರಂಭವಾಗಿದೆ.

ಈ ವೇಳೆ ಮೃತಪಟ್ಟ ಗೋಮತಿ (ಜಯಕುಮಾರ್ ಅವರ ಪತ್ನಿ) ಜಗಳ ಬಿಡಿಸಲು ಮುಂದಾದಾಗ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಗೋಮತಿಯನ್ನು ಪ್ರಥಮ ಚಿಕಿತ್ಸೆಗಾಗಿ ಅಂಡಿಮಾಡಂ ಪಿಎಚ್‌ಸಿಗೆ ಕರೆದೊಯ್ದಾಗ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಒಟ್ಟು 10 ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದೆ 1. ಕಲೈಮಣಿ 2. ದೀಪಾ (ಕಲೈಮಣಿಯ ಪತ್ನಿ) 3. ರವಿ 4. ಮೇಘನಾಥನ್ ಮತ್ತು 5. ಇಂದುಮಣಿ ಅವರನ್ನು ಬಂಧಿಸಿ 20.04.2024 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಲೈಮಣಿ ಎಂಬ ಮಹಿಳೆಯ ವಿರುದ್ಧದ ಹಳೆಯ ಪ್ರಕರಣ ಹಿಂಪಡೆಯುವ ವಿಚಾರವಾಗಿ ಎರಡು ಪಕ್ಷಗಳ ಸದಸ್ಯರ ನಡುವೆ ನಡೆದ ಜಗಳದಲ್ಲಿ ಗೋಮತಿ ಎಂಬ ಮಹಿಳೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಬಿಜೆಪಿಗೆ ಮತ ಹಾಕಿದ್ದಕ್ಕೆ ಡಿಎಂಕೆ ಪಕ್ಷ ಗೋಮತಿಯನ್ನು ಹೊಡೆದು ಕೊಂದಿದೆ ಎಂದು ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಮತ್ತು ಮಾಧ್ಯಮಗಳು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಯೂಟರ್ನ್


ಇದನ್ನು ಓದಿರಿ : FACT CHECK | ಮುಸ್ಲಿಂ ದ್ವೇಷದ ಜೊತೆಗೆ ಸುಳ್ಳನ್ನು ಹೇಳಿದ ಮೋದಿ! ಏನದು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights