FACT CHECK | ನಾಗರ ಪಂಚಮಿಯಂದು ಮುಸ್ಲಿಮರಿಗೆ ನಾಗರಬೆತ್ತದ ರುಚಿ ತೋರಿಸಿದ ಪೊಲೀಸರು ಎಂದು ಹಳೆಯ ವಿಡಿಯೋ ಹಂಚಿಕೆ

ಆಗಸ್ಟ್ 9 ರಂದು ನಾಗರಪಂಚಮಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಾಗರಪಂಚಮಿ ಹಬ್ಬದ ದಿನದಂದು ಪೊಲೀಸ್ ಅಧಿಕಾರಿಗಳು ಮುಸ್ಲಿಮರಿಗೆ ಲಾಠಿಯಿಂದ ಹೊಡೆಯುತ್ತಿರುವ ವಿಡಿಯೋವೊಂದು ಪ್ರಸಾರವಾಗುತ್ತಿದೆ. ಮಸೀದಿಯಿಂದ ಮುಸ್ಲಿಮರು ಹೊರಬರುತ್ತಿರುವಾಗ ಪೊಲೀಸರು ಲಾಠಿ ಬೀಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಎಕ್ಸ್​ನಲ್ಲಿ ಹರಿ ಎಂಬ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ನಾಗರ ಪಂಚಮಿ ಪ್ರಯುಕ್ತ ನಾಗರಬೆತ್ತದ ಪೂಜೆಯನ್ನು ಅತಿ ವಿಜೃಂಭಣೆಯಿಂದ ಆಚರಿಸಿದ ನಮ್ಮ ಪೊಲೀಸರು, ಅವರಿಗೆ ನನ್ನದೊಂದು ಜೈ!’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ನಾಗರಪಂಚಮಿ ದಿನದಂದು ಮುಸ್ಲಿಮರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 26, 2020 ರಂದು ಈಟಿವಿ ಭಾರತ್ ಕನ್ನಡ ತನ್ನ ವೆನ್​ಸೈಟ್​ನಲ್ಲಿ ‘ಸರ್ಕಾರದ ‌ಆದೇಶ ಧಿಕ್ಕರಿಸಿ ಮಸೀದಿಯಲ್ಲಿ ಸಾಮೂಹಿಕ ನಮಾಜ್: ಪೊಲೀಸರಿಂದ ಲಾಠಿ ಚಾರ್ಜ್’ ಎಂಬ ಶೀರ್ಷಿಕೆಯೊಂದುಗೆ ಪ್ರಟಿಸಿದ ವರದಿಯೊಂದು ಲಭ್ಯವಾಗಿದ್ದು. ಅದರ ಜೊತೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ವರದಿಯಲ್ಲಿ ಈ ರೀತಿ ಬರೆಯಲಾಗಿದೆ: ”ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಹೊರ ಕರೆತಂದ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ. ಲಾಕ್ ಡೌನ್ ಆದೇಶ ಇದ್ದರೂ ನಗರದ ಎರಡು ಮಸೀದಿಗಳಿಗೆ ನೂರಾರು ಜನರು ನಮಾಜ್ ಮಾಡಲು ಆಗಮಿಸಿದ್ದರು. ಸಾಮೂಹಿಕ ಪ್ರಾರ್ಥನೆ, ಜಾತ್ರೆ, ಹಬ್ಬ, ಸಮಾರಂಭ ನಡೆಸದಂತೆ ಸರ್ಕಾರ ಹೊರಡಿಸಿದ ಆದೇಶ ಉಲ್ಲಂಘಿಸಿ ನಮಾಜ್ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗೋಕಾಕ್ ಶಹರ್ ಠಾಣೆಯ ಪೊಲೀಸರು ಎಲ್ಲರನ್ನೂ ಹೊರಕರೆದು ಲಾಠಿ ರುಚಿ ತೋರಿಸಿದರು. ಬಳಿಕ ಮಸೀದಿಯ ಕೆಲ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ,’ ಎಂದು ವರದಿಯಲ್ಲಿದೆ.

ಹಾಗೆಯೆ 2020 ರ ಮಾರ್ಚ್ 26 ರಂದು ನ್ಯೂಸ್ 18 ಕೂಡ ಈ ಬಗ್ಗೆ ವರದಿ ಮಾಡಿದೆ. ‘ಕರ್ನಾಟಕದ ಬೆಳಗಾವಿಯಲ್ಲಿ ಲಾಕ್‌ಡೌನ್ ಆದೇಶದ ಹೊರತಾಗಿಯೂ ನಮಾಜ್ ಮಾಡಲು ಬಂದ ಒಂದು ಗುಂಪು ಮಸೀದಿಯಲ್ಲಿ ಜಮಾಯಿಸಿದಾಗ ಈ ಘಟನೆ ಸಂಭವಿಸಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.’ ಎಂದು ಬರೆಯಲಾಗಿದೆ.

ದಿ ಎಕನಾಮಿಕ್ ಟೈಮ್ಸ್ ಫೇಸ್‌ಬುಕ್ ಪುಟದಲ್ಲಿಯೂ ಈ ವೀಡಿಯೊವನ್ನು ಹಂಚಿಕೊಂಡಿದೆ. ಹಾಗಾಗಿ ಈ ಘಟನೆ ಇತ್ತೀಚಿನ ಘಟನೆಯಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನಾಗರಪಂಚಮಿ ದಿನ ಪೊಲೀಸರು ಮುಸಲ್ಮಾನರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ನಾಗರಪಂಚಮಿ ಆಚರಿಸಿದ್ದಾರೆ ಎಂಬ ವ್ಯಂಗ್ಯ ಭರಿತ ಪೋಸ್ಟ್‌ ತಪ್ಪಾಗಿದೆ. ವಾಸ್ತವವಾಗಿ ವೈರಲ್ ವಿಡಿಯೋ 2020  ರ ದೃಶ್ಯಗಳಾಗಿವೆ.  ಪೊಲೀಸರು ಕೋವಿಡ್-19 ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿ ಕೇಸರಿ ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights