FACT CHECK | ದಲಿತ ಎಂಬ ಕಾರಣಕ್ಕೆ ಯುವಕನ ಪ್ಯಾಂಟ್ ಬಿಚ್ಚಿ, ಕೈಗಳನ್ನು ಕಟ್ಟಿ, ಖಾಸಗಿ ಭಾಗಕ್ಕೆ ಖಾರದ ಪುಡಿ ಸುರಿಯಲಾಗಿದೆ ಎಂಬುದು ಸುಳ್ಳು! ಹಾಗಿದ್ದರೆ ವಾಸ್ತವವೇನು?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದ್ದು ದಲಿತ ಯುವಕನನ್ನು ಸವರ್ಣೀಯರು ಜಾತಿಯ ಕಾರಣಕ್ಕೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಮೂರರಿಂದ ನಾಲ್ಕು ಜನರಿರುವ ಗುಂಪೊಂದು ವ್ಯಕ್ತಿಯೊಬ್ಬನ ಕೈ ಕಟ್ಟಿ , ಆತನ ಪ್ಯಾಂಟ್ ತೆಗೆಸಿ, ವ್ಯಕ್ತಿಯ ಖಾಸಗಿ ಭಾಗಕ್ಕೆ ಖಾರದ ಪುಡಿಯನ್ನು ತುರುಕುತ್ತಿದ್ದು, ಈ ದೃಶ್ಯಗಳನ್ನು ತಾವೇ ಚಿತ್ರೀಕರಿಸುತ್ತಿರುವ ಅಮಾನವೀಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

“ಬಿಹಾರದಲ್ಲಿ ತಾಲಿಬಾನ್ ಆಡಳಿತ! ಬಿಹಾರದಲ್ಲಿ ಬಿಜೆಪಿ/ಎನ್‌ಡಿಎ ಸುಖಾಸುಮ್ಮನೆ ಅಧಿಕಾರದಲ್ಲಿದೆ, ಹಾಗಾಗಿ ಜಾತಿವಾದಿ ಮಾಧ್ಯಮಗಳು ಮೌನವಾಗಿವೆ. ನಾವು ಮತ್ತು ನಮ್ಮ ಪಕ್ಷ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಂಚಿಕೆಯ ಬಗ್ಗೆ ಮಾತನಾಡುತ್ತೇವೆ, ಆದ್ದರಿಂದ ಜಾತಿವಾದಿಗಳು ಯಾವಾಗಲೂ ನಮ್ಮ ಆಡಳಿತವನ್ನು ಜಂಗಲ್ ರಾಜ್ ಎಂದು ನೋಡುತ್ತಾರೆ.” ಎಂಬ ಹೇಳಿಕೆಯೊಂದಿಗೆ ತೇಜಸ್ವೀ ಯಾದವ್ ತಮ್ಮ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಹಾಗಿದ್ದರೆ ಈ ಘಟನೆ ಹಿನ್ನಲೆ ಏನು? ಈ ಕೃತ್ಯ ನಡೆಸಿದವರು ಮತ್ತು ಹಲ್ಲಗೊಳಗಾದ ವ್ಯಕ್ತಿಗೆ ಇರುವ ಸಂಬಂಧ ಏನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಈ ಘಟನೆ ಜಾತಿ ದೌರ್ಜನ್ಯ ಆಧಾರಿತ ಘಟನೆಯಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಹಾರದ ಅರಾರಿಯಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕಳ್ಳತನದ ಆರೋಪಿಯ ಕೈಗಳನ್ನು ಕಟ್ಟಿಹಾಕಿ ಆತನ ಖಾಸಗಿ ಅಂಗಗಳಿಗೆ ಮೆಣಸಿನ ಪುಡಿಯನ್ನು ಸುರಿಯಲು ಆತನ ಪ್ಯಾಂಟ್ ಅನ್ನು ಕೆಳಕ್ಕೆ ಎಳೆದಿರುವ ದೃಶ್ಯಗಳು ವೈರಲ್ ಆಗಿದೆ. ಚಿತ್ರಹಿಂಸೆಯ ಕೃತ್ಯವನ್ನು ಫೋನ್‌ಗಳಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಯಬಿಡಲಾಗಿದೆ. ಈ ಪ್ರಕರಣದಲ್ಲಿ ಕೃತ್ಯ ಎಸಗಿದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯವನ್ನು “ಅಮಾನವೀಯ” ಎಂದು ಬಣ್ಣಿಸಿದ್ದಾರೆಂದು ಜಾಗರಣ್ ಇಂಗ್ಲಿಷ್ ವರದಿ ಮಾಡಿದೆ.

ಘಟನೆಯ ವಿವರ :

ಕಾರು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಜನರ ಗುಂಪೊಂದು ಸೆರೆಹಿಡಿದು, ಕೈಕಟ್ಟಿ ಖಾಸಗೀ ಭಾಗಗಳಿಗೆ ಖಾರದ ಪುಡಿ ಹಾಕಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆ ನಡೆದ ಬೆನ್ನಲ್ಲೆ ಹಲವು ರಾಜಕೀಯ ನಾಯಕರು ಆಡಳಿತ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಘಟನೆಗೆ ಜಾತಿ ಹಿನ್ನಲೆಯನ್ನು ಸೇರಿಸಿದ್ದಾರೆ. ಆದರೆ ಇದೆಲ್ಲವನ್ನು ಪರಿಶೀಲಿಸಿ ಅರಾರಿಯಾ ಜಿಲ್ಲಾ ಪೊಲೀಸರು ಘಟನೆ ಬಗ್ಗೆ ತಮ್ಮ ಎಕ್ಸ್‌ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದು ಘಟನೆಯು ಜಾತಿ ಕಾರಣಕ್ಕೆ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಚಿತ್ರ ಹಿಂಸೆ ನೀಡುವ ವಿಡಿಯೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಅರಾರಿಯಾ ಪೊಲೀಸರು “ಕ್ಯಾಮೆರಾದಲ್ಲಿ ಸೆರೆಯಾದ ಯುವಕನೊಂದಿಗೆ ಅಮಾನವೀಯವಾಗಿ (ಖಾಸಗಿ ಭಾಗಗಳಲ್ಲಿ ಮೆಣಸಿನ ಪುಡಿ ಸುರಿಯುವುದು) ನಡೆದುಕೊಂಡ ಆರೋಪಿಯನ್ನು  ಬಂಧಿಸಿದ್ದಾರೆ. ಇತರರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಿನ್ನೆ, ಅರಾರಿಯಾ ಜಿಲ್ಲೆಗೆ ಸಂಬಂಧಿಸಿದ ಅಮಾನವೀಯ ಕೃತ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವೈರಲ್ ವಿಡಿಯೋದಲ್ಲಿ ಕಳ್ಳತನದ ಆರೋಪದ ಮೇಲೆ ಯುವಕನೊಬ್ಬನನ್ನು ಕೆಲವರು ಹಗ್ಗದಿಂದ ಕಟ್ಟಿ ಹಾಕಿ ಆತನ ಖಾಸಗಿ ಅಂಗಗಳಲ್ಲಿ ಮೆಣಸಿನಕಾಯಿಯಂತಹ ಪದಾರ್ಥವನ್ನು ಹಾಕುವ ಅಮಾನವೀಯ ಕೃತ್ಯ ಎಸಗಿದ್ದಾರೆ.  ವೈರಲ್ ವೀಡಿಯೊವನ್ನು ತಾಂತ್ರಿಕ ಶಾಖೆಯಿಂದ ಪರಿಶೀಲಿಸಿದಾಗ, ವಿಡಿಯೋ ಅರಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಲಾಂನಗರದ್ದು ಎಂದು ಕಂಡುಬಂದಿದೆ.

ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಅರಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಒಬ್ಬರಾದ ಮೊ. ಸಿಫತ್ ನನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಬಂಧಿಸಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಾರಿಯಾ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾರು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿ, ಖಾಸಗಿ ಭಾಗಕ್ಕೆ ಖಾರದ ಪುಡಿ ಸುರಿದಿರುವ ಘಟನೆ ಬಿಹಾರದ ಅರಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಲಾಂನಗರದ್ದಾಗಿದ್ದು, ಕೃತ್ಯ ಎಸಗಿದ್ದ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು ಉಳಿದವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಸಿಸಿದ್ದಾರೆ ಅಲ್ಲದೆ, ಘಟನೆಗೆ ಜಾತಿ ತಾರತಮ್ಯದ ಹಿನ್ನಲೆಯಾಗಲಿ, ಜಾತಿ ದೌರ್ಜನ್ಯವಾಗಲಿ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | KPSC ಪರೀಕ್ಷೆ ಬಗ್ಗೆ ಸುಳ್ಳು ಪೋಸ್ಟ್‌ ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights