FACT CHECK | ಜೂನಿಯರ್ NTR ಕಟೌಟ್‌ಗೆ ಅವರ ಅಭಿಮಾನಿಗಳೇ ಬೆಂಕಿ ಹಚ್ಚಿದ್ದು ನಿಜವೇ?
ಜೂನಿಯರ್ NTR ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಜ್ಯೂನಿಯರ್ NTR ಅಭಿನಯದ ದೇವರ ಚಿತ್ರ ತೆರೆಕಂಡಿದ್ದು, ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತೊಂದು ಕಡೆ ದೇವರ ಚಿತ್ರ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಕೊಪಗೊಂಡ ಅಭಿಮಾನಿಗಳ ಗುಂಪೊಂದು ಚಿತ್ರಮಂದಿರದ ಬಳಿ ನಿಲ್ಲಿಸಿದ್ದ ಜೂನಿಯರ್ NTR ಕಟೌಟ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್ 2ಲಕ್ಷ ವೀವ್ಸ್ ಪಡೆದುಕೊಂಡಿದೆ. (ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಹಂಚಿಕೊಂಡ ಪೋಸ್ಟ್‌ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.) ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನಿಯರ್ NTR ಅವರ ಕಟೌಟ್‌ಗೆ ಬೆಂಕಿ ಹೊತ್ತಿಕೊಂಡ ಹಲವು ಸುದ್ದಿ ವರದಿಗಳು ಲಭ್ಯವಾಗಿವೆ. ಆದರೆ ಕಟೌಟ್‌ಗೆ ಬೆಂಕಿಯನ್ನು ಅಭಿಮಾನಿಗಳು ಹಚ್ಚಿದ್ದಾರೆ ಎಂಬುದು ಸುಳ್ಳು.
ತಮ್ಮ ನೆಚ್ಚಿನ ನಟನ ಸಿನಿಮಾ ರಿಲೀಸ್ ಆದ ಕಾರಣ ಅಭಿಮಾನಿಗಳು ಪಟಾಕಿ ಸಿಡಿಸಿ ಮೆಚ್ಚಿನ ನಟನ ಸಿನಿಮಾವನ್ನು ಬರ ಮಾಡಿಕೊಂಡಿದ್ದಾರೆ. ಆದರೆ ಪಟಾಕಿ ಸಿಡಿಸುವ ಬರದಲ್ಲಿ ಜ್ಯೂ ಎನ್‌ಟಿಆರ್ ಬೃಹತ್ ಕಟೌಟ್ ಹೊತ್ತಿ ಉರಿದಿದೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ನಗರದ ಸುದರ್ಶನ್ ಚಿತ್ರಮಂದಿರದ ಬಳಿ ಎನ್‌ಟಿಆರ್ ದೊಡ್ಡ ಕಟೌಟ್ ಅಳವಡಿಸಲಾಗಿತ್ತು. ದೇವರ ಚಿತ್ರದ ಜ್ಯೂನಿಯರ್ NTR ಕಟೌಟ್‌ಗೆ ಹೂವಿನ ಹಾರಗಳನ್ನು ಹಾಕಲಾಗಿತ್ತು. ಸಿನಿಮಾ ಬಿಡುಗಡೆ ಆಗುತ್ತಿರುವ ಖುಷಿಗೆ ಬೆಳಗ್ಗೆಯೇ ಅಭಿಮಾನಿಗಳು ಉದ್ದದ ಪಟಾಕಿ ಸರ ಸಿಡಿಸಿದ್ದಾರೆ. ಈ ಸಮಯದಲ್ಲಿ ಬೆಂಕಿ, ಹತ್ತಿರದಲ್ಲೇ ಇದ್ದ ಜ್ಯೂನಿಯರ್ NTR ಕಟೌಟ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೈದರಾಬಾದ್ ಪೊಲೀಸರು ದಿ ಕ್ವಿಂಟ್‌ಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 27 ರಂದು ನೆಲ್ಲೂರು ಎನ್‌ಟಿಆರ್ ಫ್ಯಾನ್ಸ್ ಎಂಬ ಎಕ್ಸ್ ಖಾತೆಯಿಂದ ಹಂಚಿಕೊಂಡ ಪೋಸ್ಟ್ ಲಭ್ಯವಾಗಿದ್ದು, ವೈರಲ್ ಪೋಸ್ಟ್‌ನಲ್ಲಿ ಕಂಡು ಬಂದ ವಿಡಿಯೋದಂತೆಯೇ ಹೋಲಿಕೆಯಾಗಿತ್ತು. ಅಭಿಮಾನಿಗಳು ತನ್ನ ನೆಚ್ಚಿನ ನಟನ ಚಿತ್ರ ತೆರೆಕಂಡ ಖುಷಿಗೆ ಪಟಾಕಿ ಹಚ್ಚಿದ್ದರಿಂದ ಈ ಘಟನೆ ನಡೆದಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಸರ್ಚ್ ಮಾಡಿದಾಗ, ಸಿಸಾಸತ್ ಡೈಲಿ ವರದಿ ಲಭ್ಯವಾಗಿದ್ದು, ಅದರಲ್ಲಿ ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ, ಉತ್ಸಾಹಿ ಅಭಿಮಾನಿಗಳು ಹಾರಿಸಿದ ಪಟಾಕಿಗಳಿಂದಾಗಿ ಜೂನಿಯರ್ NTR ಅವರ ದೊಡ್ಡ ಕಟೌಟ್ಗೆ ಬೆಂಕಿ ಹೊತ್ತಿಕೊಂಡಿತು. ನಟನ ಚಿತ್ರ ದೇವರ: ಪಾರ್ಟ್ 1 ರ ಬಿಡುಗಡೆಯನ್ನು ಆಚರಿಸಲು ಅಭಿಮಾನಿಗಳು ಆರ್‌ಟಿಸಿ ಎಕ್ಸ್ ರಸ್ತೆಗಳಲ್ಲಿ ಜಮಾಯಿಸಿದಾಗ ಇದು ಸಂಭವಿಸಿದೆ. ಎಂದು ಉಲ್ಲೇಖಿಸಲಾಗಿದೆ
ಅಂತೆಯೇ, ಡೆಕ್ಕನ್ ಕ್ರಾನಿಕಲ್ ಕೂಡ ಈ ಘಟನೆಯನ್ನು ವರದಿ ಮಾಡಿದೆ. ಚಿತ್ರಮಂದಿರದ ಹೊರಗೆ ಜಮಾಯಿಸಿದ ಭಾರಿ ಜನಸಮೂಹವು ಚಿತ್ರದ ಬಿಡುಗಡೆಯನ್ನು ಆಚರಿಸಿತು ಮತ್ತು ಪಟಾಕಿಗಳನ್ನು ಸುಟ್ಟಿತು, ಇದರಿಂದಾಗಿ ಪೋಸ್ಟರ್ ಬೆಂಕಿಗೆ ಆಹುತಿಯಾಯಿತು ಎಂದು ಅದು ಹೇಳಿದೆ.
ಹೈದರಾಬಾದ್‌ನ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಕ್ಷಾಂಶ್ ಯಾದವ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದು, ಅವರು ಪಟಾಕಿಗಳಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಜೂನಿಯರ್ NTR ಅಭಿನಯದ ದೇವರ ಚಿತ್ರ ತೆರೆಕಂಡಿದ್ದು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ಬರದಲ್ಲಿ ಕಟೌಟ್‌ಗೆ ಬೆಂಕಿ ತಗುಲಿದ ಘಟನೆಯನ್ನು, ದೇವರ ಸಿನಿಮಾ ಕಳಪೆಯಾಗಿದೆ ಎಂದು ಜೂನಿಯರ್ NTR ಅಭಿಮಾನಿಗಳು ಅವರ ಕಟೌಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ದನ ಮುಖಕ್ಕೆ ನೊರೆಯನ್ನು ಸ್ಪ್ರೇ ಮಾಡಿದ ವ್ಯಕ್ತಿ ಮುಸ್ಲಿಂ ಎಂದು ಸುಳ್ಳು ಪೋಸ್ಟ್ ಹಂಚಿಕೆ