FACT CHECK | ಹಿಜ್ಬುಲ್ಲಾ ಭಯೋತ್ಪಾದಕರ ಮೇಲೆ ಇಸ್ರೇಲ್ ನಡೆಸಿದ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ವಿಶೇಷವಾಗಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯ ನಂತರ, ಇರಾನ್ ಯಹೂದಿ ರಾಷ್ಟ್ರದ ಮೇಲೆ ಸೇಡು ತೀರಿಸಿಕೊಳ್ಳಲು ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಇದೆಲ್ಲದರ ನಡುವೆ ಇಸ್ರೇಲ್‌ನ ವಾಯುಪಡೆಯ ವೈಮಾನಿಕ ದಾಳಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಮಲ್ಲಿಕಾರ್ಜುನ ಎಂಬ ಎಕ್ಸ್ ಬಳಕೆದಾರರೊಬ್ಬರು ಸೆಪ್ಟೆಂಬರ್ 27, 2024 ರಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ‘‘ಇಸ್ರೇಲ್‌ನ ವಾಯುಪಡೆಯ ವೈಮಾನಿಕ ದಾಳಿಯಿಂದಾಗಿ, ವಸತಿ ಪ್ರದೇಶದಲ್ಲಿ ಹಿಜ್ಬುಲ್ಲಾ ಭಯೋತ್ಪಾದಕರು ಮರೆಮಾಡಿದ ಸಂಪೂರ್ಣ ಶಸ್ತ್ರಾಸ್ತ್ರಗಳು ಕಟ್ಟಡಗಳ ಜೊತೆಗೆ ಜ್ವಾಲೆಯಾಗಿವೆ. ಅದೊಂದು ಭಯಾನಕ ದೃಶ್ಯ. ಈ ಕೋಮುವಾದಿ ಭಯೋತ್ಪಾದಕರು ತನ್ನ ರಕ್ತಸಿಕ್ತ ಇತಿಹಾಸದಿಂದ ಎಂದಿಗೂ ಕಲಿಯುವುದಿಲ್ಲ,’’ ಎಂದು ಬರೆದುಕೊಂಡಿದ್ದಾರೆ.
ಲೆಬನಾನ್‌ನಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಮತ್ತು 195 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ಇಸ್ರೇಲಿ ದಾಳಿಯ ಪರಿಣಾಮವಾಗಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಮತ್ತು ಸುಮಾರು ಒಂದು ಮಿಲಿಯನ್ ಲೆಬನಾನ್ ಜನರು ಸ್ಥಳಾಂತರಗೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋಗಳಿಗೂ ಹಿಜ್ಬುಲ್ಲಾ -ಇಸ್ರೇಲ್ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಎರಡು ಬೇರೆ ಬೇರೆ ವಿಡಿಯೋಗಳನ್ನು ಸೇರಿಸಿ ಹಂಚಿಕೊಳ್ಳಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಆಗ ಇದರಲ್ಲಿ ಎರಡು ವೀಡಿಯೊಗಳನ್ನು ಒಟ್ಟಿಗೆ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಮೊದಲ ಎರಡು ಸೆಕೆಂಡ್ ಇರುವ ವೀಡಿಯೊ ನೋಡಲು ಪಟಾಕಿ ಸಿಡಿಯುತ್ತಿರುವಂತೆ ಕಾಣುತ್ತದೆ. ನಂತರ ಇರುವ ಎರಡನೇ ವೀಡಿಯೊದಲ್ಲಿ ಬೆಂಕಿ ಇರಿಯುವುದು ಕಾಣುತ್ತದೆ. ಈ ಅನುಮಾನದ ಮೇರೆಗೆ ನಾವು ಎರಡನ್ನೂ ಪ್ರತ್ಯೇಕ ಫೋಟೋಗಳನ್ನಾಗಿ ಪರಿವರ್ತಿಸಿ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆ ಸಮಯದಲ್ಲಿ, ಈ ವೀಡಿಯೊ ಲೆಬನಾನ್‌ನದ್ದಲ್ಲ ಎಂಬುದು ಸ್ಪಷ್ಟವಾಯಿತು.
ಮೊದಲ ವೀಡಿಯೊ:
ಮೊದಲ ವಿಡಿಯೋ 2ಸೆಕೆಂಡುಗಳಿದ್ದು, ಇದರ ಪೂರ್ನ ವಿಡಿಯೋವನ್ನು 9 ಆಗಸ್ಟ್ 2024 ರಂದು Abd Ellah Arabdji ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ‘‘ಅಲ್ಜೀರಿಯಾದ ಬೆಂಬಲಿಗರು 103 ನೇ ವಾರ್ಷಿಕೋತ್ಸವವನ್ನು ಆಚರಿಸಿದರು’’ ಎಂಬ ಶೀರ್ಷಿಕೆ ನೀಡಲಾಗಿದೆ. ಲೆಬನಾನ್ ಮೇಲಿನ ದಾಳಿಯ ಸುಮಾರು ಒಂದು ತಿಂಗಳ ಮೊದಲೇ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಹಾಗಾಗಿ ಈ ವಿಡಿಯೋಗೂ ದಾಳಿಗೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಹಾಗೆಯೆ GeoMundo ಎಂಬ ಯೂಟ್ಯೂಬ್ ಖಾತೆಯಲ್ಲಿ ಕೂಡ ಆಗಸ್ಟ್ 7, 2024 ರಂದು ಪಟಾಕಿ ಸಿಡಿಸುವ ಈ ವೀಡಿಯೊ ಹಂಚಿಕೊಳ್ಳಲಾಗಿದ್ದು, “ಅಲ್ಜೀರಿಯನ್ ಫುಟ್ಬಾಲ್ ಕ್ಲಬ್ ಮೌಲೌಡಿಯಾ ಕ್ಲಬ್ ಆಫ್ ಅಲ್ಜೀರ್ಸ್‌ನ ಬೆಂಬಲಿಗರು ತಮ್ಮ ಕ್ಲಬ್‌ನ 103 ನೇ ವಾರ್ಷಿಕೋತ್ಸವವನ್ನು ಮೂಲಕ ಆಚರಿಸಿದರು” ಎಂಬ ಮಾಹಿತಿ ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾಯಿತು. ಆದರೆ, ಈ ಎರಡೂ ವಿಡಿಯೋಗಳು ಆಗಸ್ಟ್ 2024 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹೀಗಾಗಿ ಲೆಬನಾನ್- ಇಸ್ರೇಲ್ ದಾಳಿಗೆ ಈ ವೈರಲ್ ವೀಡಿಯೊ ಸಂಬಂಧಿಸಿಲ್ಲ, ಸುಳ್ಳು ಮಾಹಿತಿಯೊಂದಿಗೆ ಎರಡು ವಿಭಿನ್ನ ಸ್ಥಳಗಳಲ್ಲಿ ನಡೆದ ಘಟನೆಗಳ ವೀಡಿಯೊಗಳನ್ನು ಒಟ್ಟಿಗೆ ಸೇರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಜೂನಿಯರ್ NTR ಕಟೌಟ್‌ಗೆ ಅವರ ಅಭಿಮಾನಿಗಳೇ ಬೆಂಕಿ ಹಚ್ಚಿದ್ದು ನಿಜವೇ?