FACT CHECK | 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಎಂಬುದು ಸುಳ್ಳು
7,800 ಕೆಜಿ ಶುದ್ಧ ಚಿನ್ನ ಮತ್ತು 7,80,000 ವಜ್ರದಿಂದ ಮಾಡಿದ 780 ಕ್ಯಾರೆಟ್‌ನ 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಇದೆ ಎಂಬ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ (ವಾಟ್ಸಾಪ್‌ಗಳಲ್ಲಿ) ಹಂಚಿಕೊಳ್ಳಲಾಗುತ್ತಿದೆ.

“7800 ಕೆಜಿ ಶುದ್ಧ ಚಿನ್ನ, 7,80,000 ವಜ್ರಗಳು ಮತ್ತು 780 ಕ್ಯಾರೆಟ್ ವಜ್ರದಿಂದ ಮಾಡಲಾದ 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ಪ್ರತಿಮೆ ಇದು ಎಂದು ಹೇಳಲಾಗುತ್ತಿದೆ. ಇದರ ಪ್ರಸ್ತುತ ಮೌಲ್ಯ ಹಲವು ಸಾವಿರ ಲಕ್ಷ ಕೋಟಿ ಎಂದು ಹೇಳಲಾಗಿದೆ ಮತ್ತು ಅದರ ಬೆಲೆಯನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ” ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗುತ್ತದೆ.
“ಫ್ರಾನ್ಸ್‌ನಿಂದ ಆಹ್ವಾನಿಸಲಾದ ತಜ್ಞರ ತಂಡವು ಇದನ್ನು ನೋಡಿ ಆಶ್ಚರ್ಯ ಚಕಿತರಾದರು. ಇದನ್ನು ನಮ್ಮ ಕಣ್ಣಾರೆ ನೋಡುವುದೇ ಒಂದು ದೊಡ್ಡ ಸೌಭಾಗ್ಯ. ಖುದ್ದಾಗಿ ಹೋಗಲಾಗದವರು ಈ ವಿಡಿಯೋ ಮೂಲಕ ನೋಡಿ. ನಂದಲ ಸ್ವಾಮಿಯನ್ನು ಕಾಣದಿದ್ದಾಗ ಚಿತ್ರ, ಮೂರ್ತಿ ಇಟ್ಟು ಪೂಜಿಸುವುದು ಹೇಗೆ? ಈ ದೇವಾಲಯದ ಸ್ಥಳ ತಿರುವನಂತರಪುರ, ಕೇರಳ, ಭಾರತ,” ಎಂದು ವಿಡಿಯೋದ ವಿವರಣೆಯಲ್ಲ ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
780 ಕ್ಯಾರೆಟ್‌ನ 7,800 ಕೆಜಿ ಶುದ್ಧ ಚಿನ್ನದಿಂದ ಮಾಡಲಾದ ಅನಂತ ಪದ್ಮನಾಭಸ್ವಾಮಿಯ 3 ಸಾವಿರ ವರ್ಷಗಳಷ್ಟು ಹಳೆಯದಾದ ಪ್ರತಿಮೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಆಗಸ್ಟ್ 6, 2023 ರ ದಿನಾಂಕದಂದು ಕಾರ್ತಿಕ್ ನಾಗರಾಜ್ ಎಂಬವರ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡ ವೀಡಿಯೋ ಲಭ್ಯವಾಗಿದೆ. ಇದರ ವಿವರಣೆಯಲ್ಲಿ, “ಶ್ರೀ ಅನಂತ ಪದ್ಮನಾಭಸ್ವಾಮಿ ರತ್ನ ಖಚಿತ ವಿಗ್ರಹವು 8 ಇಂಚು ಎತ್ತರ ಮತ್ತು 18 ಇಂಚು ಉದ್ದವಿದೆ. 2 ತಿಂಗಳು ಪ್ರತಿ ದಿನ 16 ಗಂಟೆ 32 ಮಂದಿ ಈ ವಿಗ್ರಹದ ನಿರ್ಮಾಣವನ್ನು ಮಾಡಿದ್ದು, 2.8 ಕೆಜಿ ತೂಕ ಹೊಂದಿದೆ.”
View this post on Instagram
“ಸುಮಾರು 75,000 ಉತ್ತಮ ಗುಣಮಟ್ಟದ ವಜ್ರಗಳಿಂದ ಅಲಂಕರಿಸಲ್ಪಟ್ಟಿದ್ದು, ಇದು ಒಟ್ಟು 500 ಕ್ಯಾರೆಟ್ ನದ್ದಾಗಿದೆ. ಶ್ರೀ ಅನಂತಪದ್ಮನಾಭ ಸ್ವಾಮಿಯ ಈ ವಿಗ್ರಹ ಕಣ್ಸೆಳೆಯುತ್ತದೆ. ಪ್ರತಿಯೊಂದು ವಜ್ರವು ಚಿಂತನಶೀಲವಾಗಿ ಇರಲಿಸಲಾಗಿದ್ದು, ಇದನ್ನು ಅದ್ಭುತವಾಗಿ ಪಾಲಿಶ್ ಮಾಡಿ ಕೌಶಲ್ಯಪೂರ್ಣವಾಗಿ ಹೊಂದಿಸಲಾಗಿದೆ. ಇದು ಅತ್ಯುತ್ತಮವಾದ ಜಾಂಬಿಯನ್ ಪಚ್ಚೆಗಳು ಮತ್ತು ನೈಸರ್ಗಿಕ ಬರ್ಮೀಸ್ ಮಾಣಿಕ್ಯಗಳನ್ನು ಹೊಂದಿದೆ, ಅದು ಅದ್ಭುತವಾದ, ಸಮ್ಮೋಹನಗೊಳಿಸುವ ನೋಟವನ್ನು ದೈವಿಕ ಸೊಬಗನ್ನು ಶಾಶ್ವತಗೊಳಿಸುತ್ತದೆ” ಎಂದು ಪೋಸ್ಟ್ ನಲ್ಲಿದೆ.

“ಈ ಅದ್ಭುತ ಸೃಷ್ಟಿಯ ಶ್ರೀ ಅನಂತ ಪದ್ಮನಾಭಸ್ವಾಮಿ ವಿಗ್ರಹ 9 ಗಿನ್ನಿಸ್ ವಿಶ್ವ ದಾಖಲೆಗಳ ಸಾಧಿಸಲು ಸಿದ್ಧವಾಗಿದೆ” ಎಂದೂ ವಿವರಣೆಯಲ್ಲಿದೆ.ಈ ಬಗ್ಗೆ ನ್ಯೂಸ್‌ಚೆಕರ್ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದ್ದು, ವರದಿ ಪ್ರಕಾರ ಈ ಪ್ರತಿಮೆಯನ್ನು ಹೈದರಾಬಾದ್‌ನ ಶಿವ ನಾರಾಯಣ್ ಜ್ಯುವೆಲ್ಲರಿ, ಕೇರಳ ಭೀಮಾ ಜ್ಯುವೆಲರಿಯ ಅಧ್ಯಕ್ಷ ಬಿ ಗೋವಿಂದನ್ ಅವರ ಗೌರವಾರ್ಥ ತಯಾರಿಸಲಾಗಿದೆ ಎಂದ ವರದಿಗಳು ಹೇಳಿದೆ.

ಈ ವಿಗ್ರಹವನ್ನು 2023 ರಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಜ್ಯುವೆಲ್ಲರಿ ಶೋನಲ್ಲಿ ಪ್ರದರ್ಶಿಸಿದ ಸಂದರ್ಭ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಇದೇ ವೀಡಿಯೋ ಶಿವನಾರಾಯಣ ಜ್ಯುವೆಲರಿಯ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಶಿವನಾರಾಯಣ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಅಗರ್ವಾಲ್ ನೀಡಿದ ಸಂದರ್ಶನದಲ್ಲಿ ಈ ವೀಡಿಯೋ ಕೂಡ ಇದೆ. ಅದೇ ವಿನ್ಯಾಸದ ವಿಗ್ರಹವನ್ನು IIJS 2023 ರಲ್ಲಿ ಅನಾವರಣಗೊಳಿಸಲಾಗಿದೆ ಎಂದೂ ಸಂದರ್ಶನದಲ್ಲಿದೆ. ವಿಗ್ರಹದ ಕುರಿತ ವಿವಿಧ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋದಲ್ಲಿ ತೋರಿಸಿರುವ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆಯು 3000 ವರ್ಷಗಳಷ್ಟು ಹಳೆಯದಲ್ಲ. ಮತ್ತು ಕೇರಳದ ಭೀಮಾ ಜ್ಯುವೆಲ್ಲರಿಯ ಅಧ್ಯಕ್ಷ ಬಿ ಗೋವಿಂದನ್ ಅವರ ಗೌರವಾರ್ಥವಾಗಿ ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲ್ಲರಿಯವರು ಇದನ್ನು ತಯಾರಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕ್ರೈಸ್ತ ಪಾದ್ರಿಯೊಬ್ಬರು ಪ್ರಧಾನಿ ಮೋದಿ ಹತ್ಯೆಗೆ ಪ್ರಾರ್ಥನೆ ಸಲ್ಲಿಸಿದ್ದು ನಿಜವೇ?

