FACT CHECK | ತೆಲಂಗಾಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯನ್ನು ತಪ್ಪಾಗಿ ಹಂಚಿಕೆ!

ಮೈದಾನ ಒಂದರಲ್ಲಿ ಸಾವಿರಾರು ಜನರು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಮಹಾರಾಷ್ಟ್ರದ್ದು ಎಂಬ ಹೇಳಿಕೆಯೊಂದಿಗೆ 26 ಸೆಕೆಂಡ್​ಗಳ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಜನವರಿ 5, 2025 ರಂದು  ಫೆಸ್​ಬುಕ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡು, ‘‘ಈ ದೃಶ್ಯ ಬಾಂಗ್ಲಾದೇಶದ್ದೋ ಅಥವಾ ಪಾಕಿಸ್ತಾನದ್ದೋ ಅಲ್ಲ, ಮಹಾರಾಷ್ಟ್ರದಲ್ಲಿ ಕಂಡುಬಂದ ದೃಶ್ಯ. ಸಮಯ ಮೀರಿದ ಮೇಲೆ ನಾವು ಎಚ್ಚೆತ್ತುಕೊಂಡರೂ ಪ್ರಯೋಜನವಿಲ್ಲ ಹಿಂದೂಗಳೇ’’ ಎಂದು ಬರೆದುಕೊಂಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂಧು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ತೆಲಂಗಾಣದ ಡೆಕ್ಕನ್ ನ್ಯೂಸ್ ಡೈಲಿ ಫೇಸ್‌ಬುಕ್ ಅಕೌಂಟ್‌ನಲ್ಲಿ ವಿಡಿಯೋವೊಂದು ಲಭ್ಯವಾಗಿದ್ದು, ಇದು ವೈರಲ್ ವಿಡಿಯೋಗೆ ಹೊಂದಿಕೆಯಾಗುವಂತಿದೆ. ಈ ಪೋಸ್ಟ್ ಅನ್ನು ಜನವರಿ 5, 2025 ರಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು, ತಬ್ಲಿಘಿ ಜಮಾತ್‌ನ ವಿಡಿಯೋ ವೈರಲ್ ಎಂದು ಬರೆದು ತೆಲಂಗಾಣ ಮತ್ತು ಶಂಕರಪಲ್ಲಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಹಂಚಿಕೊಳ್ಳಲಾಗಿದೆ.

ಹಾಗೆಯೆ AHN News ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡ ವೈರಲ್ ವಿಡಿಯೋ ಲಭ್ಯವಾಗಿದ್ದು, ಈ ವೀಡಿಯೊವನ್ನು 4 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿರುವ ಮಾಹಿತಿ ಪ್ರಕಾರ, ‘‘ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ತಬ್ಲಿಘಿ ಇಜ್ತೆಮಾ ಕಾರ್ಯಕ್ರಮದಲ್ಲಿ ಲಕ್ಷಾಂತರ ಮುಸ್ಲಿಮರು ಭಾಗವಹಿಸಿದ್ದರು’’ ಎಂದು ಹೇಳಲಾಗಿದೆ.

ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮ ಎಂದು ಹೈದರಾಬಾದ್​ನ ಕೆಲವು ಸ್ಥಳೀಯ ಮಾಧ್ಯಮ ಹಂಚಿಕೊಂಡಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘ತೆಲಂಗಾಣ, ಶಂಕರಪಲ್ಲಿ, ತಬ್ಲಿಘಿ ಜಮಾತ್‌’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದಗ, siasat.com 2 ಜನವರಿ, 2025 ರಂದು ಪ್ರಕಟಿಸಿರುವ ವರದಿ ಲಭ್ಯವಾಗಿದೆ. ‘‘ಜನವರಿ 3 ರಿಂದ ಜನವರಿ 5 ರವರೆಗೆ ಶಂಕರಪಲ್ಲಿಯ ಅತಿಥಿ ಮೈದಾನದಲ್ಲಿ ಇಜ್ತೆಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಯ ಜವಾಬ್ದಾರಿಯನ್ನು ಚೇವೆಲ್ಲಾ ಪೊಲೀಸ್ ಠಾಣೆಗೆ ನೀಡಲಾಗಿದೆ’’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೈದಾನವೊಂದರಲ್ಲಿ ಸಾವಿರಾರು ಜನರು ಬಹಿರಂಗವಾಗಿ ನಮಾಜ್ ಮಾಡುತ್ತಿರುವ ವೈರಲ್ ವಿಡಿಯೋ ಮಹಾರಾಷ್ಟ್ರದ್ದಲ್ಲ, ತೆಲಂಗಾಣದ ಶಂಕರಪಲ್ಲಿಯದ್ದು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನಟ ಶಾರುಖ್ ದಂಪತಿ ಮೆಕ್ಕಾದಲ್ಲಿ ಎಂದು AI ನಿಂದ ರಚಿಸಲಾದ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights