FACT CHECK | ಮದುವೆ ತಯಾರಿಯಲ್ಲಿದ ಹಿಂದೂ ಮನೆಯ ಮೇಲೆ ಮುಸ್ಲಿಮರ ಗುಂಪು ದಾಳಿ ನಡೆಸಿದ್ದು ನಿಜವೇ?
ಮದುವೆ ತಯಾರಿಯಲ್ಲಿದ್ದ ಹಿಂದೂ ಕುಟುಂಬದ ಮೇಲೆ ಮುಸ್ಲಿಂ ಗುಂಪುಗಳು ಹಲ್ಲೆ ನಡೆಸಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ಸನಾತನ ನಾಶ ಹಿಂದುತ್ವ ಅಂತ್ಯ ಎಂಬ ಫೇಸ್ಬುಕ್ ಪೇಜ್ವೊಂದರಲ್ಲಿ ಮಾರ್ಚ್ 5, 2025 ರಂದು ಈ ವಿಡಿಯೋವನ್ನು ಹಂಚಿಕೊಂಡು, ‘‘ಸಬ್ಕಾ ನಂಬರ್ ಆಯೇಗಾ! ಮೋದಿ ನಗರ, ಗಾಜಿಯಾಬಾದ್: ಮದುವೆ ತಯಾರಿಯಲ್ಲಿ ನಿರತರಾಗಿದ್ದ ಹಿಂದೂ ಕುಟುಂಬದ ಮೇಲೆ ನೂರಾರು ಮುಸ್ಲಿಮರ ಗುಂಪು ಹಲ್ಲೆ ನಡೆಸಿದೆ. ಒಂದು ಸಣ್ಣ ಅಪಘಾತದ ಬಗ್ಗೆ ವಾದದ ನಂತರ, ಮುಸ್ಲಿಂ ಗುಂಪು ಬಂದು ಕುಟುಂಬದ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿತು. ದಾಳಿಯು ಎಷ್ಟು ಕ್ರೂರವಾಗಿತ್ತು ಎಂದರೆ ಹಲವರು ಗಂಭೀರವಾಗಿ ಗಾಯಗೊಂಡರು’’ ಎಂದು ಬರೆದುಕೊಂಡಿದ್ದಾರೆ.
ವೈರಲ್ ವೀಡಿಯೊದಲ್ಲಿ ಕೆಲವರು ಒಂದು ಮನೆಯವರ ಮೇಲೆ ದಾಳಿ ಮಾಡಿ, ಆ ಮನೆಯವರನ್ನು ಹೊರಗೆ ಹಾಕಿ ಅವರಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಬಳಿಕ ಮನೆಯೊಳಗಿದ್ದ ಮಹಿಳೆಯನ್ನೂ ಹೊರಗೆ ಎಳೆದುಕೊಂಡು ಬರುತ್ತಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶಿಲಿಸೋಣ
ಫ್ಯಾಕ್ಟ್ಚೆಕ್ :
ಮದುವೆ ತಯಾರಿಯಲ್ಲಿದ್ದ ಹಿಂದೂ ಕುಟುಂಬದ ಮೇಲೆ ಮುಸ್ಲಿಂ ಗುಂಪುಗಳು ಹಲ್ಲೆ ನಡೆಸಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 28 ಫೆಬ್ರವರಿ 2025 ರಂದು ನ್ಯೂಸ್ 24 ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ‘‘ಹಣದ ವಿಚಾರಕ್ಕೆ ಗಾಜಿಯಾಬಾದ್ನಲ್ಲಿ ಕುಟುಂಬದ ಮಧ್ಯೆ ಹಲ್ಲೆ, ಮನೆಯಿಂದ ಎಳೆದೊಯ್ದ ಘಟನೆ; ನಾಲ್ವರ ಬಂಧನ’’ ಎಂದು ಟೈಟಲ್ ನೀಡಲಾಗಿದೆ.

ವರದಿಯ ಪ್ರಕಾರ, ಈ ಘಟನೆ 25 ಫೆಬ್ರವರಿ 2025ನ ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿ ಗಲ ಲೋನಿ ಬಾರ್ಡರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷ್ಮೀ ನಗರ್ ಸ್ಟ್ರೀಟ್ ನಂಬರ್ 14 ರಲ್ಲಿ ಸಂಭವಿಸಿದೆ. ಘಜಿಯಾಬಾದ್ನ ಲೋನಿ ಬೋರ್ಡರ್ ಪ್ರದೇಶದಲ್ಲಿ, ಬುಲೆಟ್ ಮೋಟಾರ್ಸೈಕಲ್ ಅನ್ನು ಓರ್ವ ವ್ಯಕ್ತಿ ಮೋಡಿಫೈಡ್ ಮಾಡಿ ಸೈಲೆನ್ಸರ್ ನಿಂದ ದೊಡ್ಡ ಶಬ್ದ ಬರುವಂತೆ ಓಡಿಸಿಕೊಂಡು ಬರುತ್ತಿದ್ದ. ಆಗ ಆತನನ್ನು ಓರ್ವ ವ್ಯಕ್ತಿ ಅಡ್ಡಗಟ್ಟುತ್ತಾನೆ. ಇದಕ್ಕೆ ಬೈಕರ್ ತನ್ನ ಕುಟುಂಬದ ಕೆಲವು ವ್ಯಕ್ತಿಗಳನ್ನು ಒಟ್ಟಿಗೆ ಕರೆತಂದು ದಾಳಿ ಮಾಡಿದ್ದಾನೆ. ಆದರೆ ನಂತರ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಇದು ಕೌಟುಂಬಿಕ ಕಲಹ ಆಗಿದೆ. ಇರ್ಷಾದ್ ಎಂಬ ವ್ಯಕ್ತಿ ತನ್ನ ಸೋದರಸಂಬಂಧಿ ಸಾದ್ ಅವರನ್ನು ರಿಜ್ವಾನ್, ಅರ್ಮಾನ್ ಅಯೂಬ್ ಪೆಹ್ಲ್ವಾನ್ ಮತ್ತು ಇತರರು ಹಳೆಯ ಹಣದ ವ್ಯವಹಾರಕ್ಕಾಗಿ ಥಳಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ’’ ಎಂದು ಬರೆಯಲಾಗಿದೆ.
IBC 24 ಕೂಡ ಫೆಬ್ರವರಿ 27, 2025 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಮಾಧ್ಯಮ ವರದಿಗಳ ಪ್ರಕಾರ, ಬುಲೆಟ್ ಬೈಕ್ನ ಸೈಲೆನ್ಸರ್ನಿಂದ ಬರುತ್ತಿದ್ದ ಶಬ್ದವನ್ನು ವಿರೋಧಿಸಿ ಈ ಜಗಳ ನಡೆದಿದೆ. ಆದರೆ ಪೊಲೀಸರು ಹೇಳಿರುವ ಪ್ರಕಾರ, ಇದು ಕೌಟುಂಬಿಕ ಕಲಹದ ಪ್ರಕರಣವಾಗಿದೆ. ಬೈಕ್ನಿಂದ ಬರುತ್ತಿದ್ದ ಸೌಂಡ್ನ ಬಗ್ಗೆ ಪೊಲೀಸರು ಯಾವುದೇ ಉಲ್ಲೇಖ ಮಾಡಿಲ್ಲ. ಪೊಲೀಸರ ಪ್ರಕಾರ, ಈ ಘಟನೆ ಲೋನಿ ಗಡಿಯ ಲಕ್ಷ್ಮಿ ನಗರದ 14 ನೇ ಲೇನ್ನಲ್ಲಿ ನಡೆದಿದೆ. ಹಳೆಯ ಹಣದ ವಿವಾದಕ್ಕೆ ಸಂಬಂಧಿಸಿದಂತೆ ಇರ್ಷಾದ್ ಅವರ ಸೋದರಸಂಬಂಧಿ ಸಾದ್ ಮತ್ತು ಕೆಲವರು ಮನೆಗೆ ನುಗ್ಗಿ ಅವರನ್ನು ಥಳಿಸಿದ್ದಾರೆ. ಮೊದಲು ಅವರು ಸಾದ್ನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ನಂತರ ಕೋಲುಗಳಿಂದ ಕ್ರೂರವಾಗಿ ಹೊಡೆದರು. ಈ ಸಂಬಂಧ, ಸಾದ್ ಕಡೆಯ ಜನರು ಸಹ ಗಾಯಗೊಂಡರು. ಈ ವಿಷಯದಲ್ಲಿ ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
‘‘ಇರ್ಷಾದ್ ಎಂಬ ವ್ಯಕ್ತಿ ತನ್ನ ಸೋದರಸಂಬಂಧಿ ಸಾದ್ ಅವರನ್ನು ಅಯೂಬ್ ಪೈಲ್ವಾನ್ ಕುಟುಂಬದ ಸದಸ್ಯರು ಅವರ ಮನೆಯಲ್ಲಿ ಬಂಧಿಸಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿಕೊಂಡು ಲೋನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಎರಡು ಕುಟುಂಬಗಳ ನಡುವಿನ ಆರ್ಥಿಕ ವಿವಾದದ ಕಾರಣ ಈ ದಾಳಿ ಸಂಭವಿಸಿದೆ, ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಸಂಬಂಧಿತ BNS ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದೇವೆ’’ ಎಂದು ಎಸಿಪಿ ಅಜಯ್ ಕುಮಾರ್ ಸಿಂಗ್ ಈ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ವಿಡಿಯೋವನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ಹಿಂದೂ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂಬ ಹೇಳಿಕೆ ಸುಳ್ಳು. ಎರಡು ಮುಸ್ಲಿಂ ಕುಟುಂಬದ ನಡುವೆ ನಡೆದ ಘಟನೆಯನ್ನು ಸುಳ್ಳು ಮತ್ತು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
NEWS METER
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದಲಿತ ಯುವಕ ಕುದುರೆ ಮೇಲೆ ಮೆರವಣಿಗೆ ಬರುತ್ತಿದ್ದ ಕಾರಣಕ್ಕೆ ವರನ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದು ನಿಜವೇ?

