FACT CHECK | April 1 ರಿಂದ ಫೋನ್ ಪೇ, ಗೂಗಲ್ ಪೇ ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ನಿಜವೇ?

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶೇಷವಾಗಿ 2016 ರಲ್ಲಿ ಜಾರಿ ಮಾಡಿದ ರೂ 500 ಮತ್ತು ರೂ 1000 ಹಳೆಯ ನೋಟು ರದ್ದತಿಯ ನಂತರ ಆನ್‌ಲೈನ್ ಪಾವತಿಗಳು ಮತ್ತು ಡಿಜಿಟಲ್ ಪಾವತಿಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಎಷ್ಟರಮಟ್ಟಿಗೆಂದರೆ, ಹಣ್ಣು ಮತ್ತು ತರಕಾರಿ ಮಾರಾಟಗಾರರು ಸಹ ಈಗ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಹಣ ಸ್ವೀಕರಿಸುತ್ತಿದ್ದಾರೆ. ಆದರೆ ಈಗ ಅದಕ್ಕೂ ಕುತ್ತು ತರಲಾಗಿದೆ ಎಂದು ಹೇಳಲಾಗುತ್ತಿದೆ.

April 1, 2025 ರಿಂದ ಅಂದರೆ ಮುಂದಿನ ಹಣಕಾಸು ವರ್ಷದ ಆರಂಭದಿಂದ ಎಲ್ಲಾ ಬ್ಯಾಂಕ್‌ಗಳು ಯುಪಿಐ ಸೇವೆಯನ್ನು ನಿಲ್ಲಿಸಲಿವೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದೆ. ಅಂದರೆ ಏಪ್ರಿಲ್ 1, 2025 ರಿಂದ ಗ್ರಾಹಕರು ಯುಪಿಐ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಫೋನ್ ಪೇ, ಗೂಗಲ್ ಪೇ ಯಾವುದೇ ಯುಪಿಐ ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ‘‘April 1, 2025 ರಿಂದ ಎಲ್ಲಾ ಬ್ಯಾಂಕ್‌ಗಳು ಯುಪಿಐ ಅನ್ನು ಸ್ಥಗಿತಗೊಳಿಸಲಿವೆ’’ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ UPI ಅನ್ನು ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಿ ಯಾವುದಾದರು ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿಯನ್ನು ಮಾಡಿವೆಯೇ ಎಂದು ಕೀವರ್ಡ್ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ,ಈ ಬಗ್ಗೆ ಯಾವುದೇ ಅಧಿಕೃತ ವರದಿಗಳು ಲಭ್ಯವಾಗಿಲ್ಲ.

April 1, 2025 ರಿಂದ UPI ವಹಿವಾಟುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಗ್ರಾಹಕರು ಈ ಸೇವೆಯನ್ನು ಮೊದಲಿನಂತೆಯೇ ಬಳಸುವುದನ್ನು ಮುಂದುವರಿಸುತ್ತಾರೆ. ಆದಾಗ್ಯೂ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ, ಅದರ ಪ್ರಕಾರ ಬ್ಯಾಂಕುಗಳು ಈಗ ಮುಚ್ಚಲ್ಪಟ್ಟ ಅಥವಾ ಹೊಸ ಬಳಕೆದಾರರಿಗೆ ಹಂಚಿಕೆಯಾದ ಮೊಬೈಲ್ ಸಂಖ್ಯೆಗಳನ್ನು ನಿಯಮಿತವಾಗಿ ಅಳಿಸಬೇಕಾಗುತ್ತದೆ. ಯುಪಿಐ ವಹಿವಾಟುಗಳಲ್ಲಿ ದೋಷಗಳನ್ನು ತಡೆಗಟ್ಟುವಲ್ಲಿ ಎನ್‌ಪಿಸಿಐನ ಈ ಮಾರ್ಗಸೂಚಿ ಸಹಾಯಕವಾಗಿದೆ.

ಫೆಬ್ರವರಿ 25 ರಂದು, UPI ಮೂಲಕ 22 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ವಹಿವಾಟುಗಳು ನಡೆದಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ( NPCI ) UPI (ಏಕೀಕೃತ ಪಾವತಿ ಇಂಟರ್ಫೇಸ್) ಅನ್ನು ನಿರ್ವಹಿಸುತ್ತದೆ ಮತ್ತು ಫೆಬ್ರವರಿ 2025 ರ ದತ್ತಾಂಶದ ಪ್ರಕಾರ, ಒಟ್ಟು 652 ಬ್ಯಾಂಕುಗಳು ಈ ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಸೇವೆಯನ್ನು ಸ್ಥಗಿತಗೊಳಿಸುವುದಾದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು, ಆದರೆ ಹೊಸ ಹಣಕಾಸು ವರ್ಷದ ಆರಂಭದಿಂದ UPI ಅನ್ನು ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಲಾದ ಸುದ್ದಿ ವರದಿಗಳಲ್ಲಿ ನಮಗೆ ಕಂಡುಬಂದಿಲ್ಲ. ಈ ಸೇವೆಯನ್ನು ಸ್ಥಗಿತಗೊಳಿಸುವ ಕುರಿತು NPCI ವೆಬ್‌ಸೈಟ್‌ನಲ್ಲಿ ನಮಗೆ ಯಾವುದೇ ಮಾಹಿತಿ ಸಿಗಲಿಲ್ಲ.

ಈ ಸುತ್ತೋಲೆಯು NPCI ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದರ ಪ್ರಕಾರ, ಈ ಮಾರ್ಗಸೂಚಿಯನ್ನು ಮಾರ್ಚ್ 31, 2025 ರೊಳಗೆ ಜಾರಿಗೆ ತರಲು ಕೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ April 1 ರಿಂದ UPI ಸೇವೆ ರದ್ದಾಗಲಿದೆ ಎಂಬುದು ಸುಳ್ಳು. UPI ಅನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು NPCI ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಹಲವರು ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ April 1 ರಿಂದ ಫೋನ್ ಪೇ, ಗೂಗಲ್ ಪೇ ಯಾವುದೇ ಯುಪಿಐ ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮದುವೆ ತಯಾರಿಯಲ್ಲಿದ ಹಿಂದೂ ಮನೆಯ ಮೇಲೆ ಮುಸ್ಲಿಮರ ಗುಂಪು ದಾಳಿ ನಡೆಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights