FACT CHECK | ಸೌಜನ್ಯ ಕೊಲೆ ಕೇಸ್‌ಗೆ ನ್ಯಾಯ ಸಿಗಲಿ ಎಂದು ಹೇಳಿದ್ರಾ ನಟ ದರ್ಶನ್?
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಯೂಟ್ಯೂಬರ್ ಸಮೀರ್ ಯೂಟ್ಯೂಬ್‌ನಲ್ಲಿ ವಿಡಿಯೋ ಹರಿಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಜಾರಿ ಮಾಡಿದ್ದ ನೋಟಿಸ್‌ಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದ ಬೆನ್ನಲ್ಲೆ ನಟ ದರ್ಶನ್ ಸೌಜನ್ಯ ಕೊಲೆಗೆ ನ್ಯಾಯ ಸಿಗಬೇಕು ಎಂದಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ನಟ ದರ್ಶನ್ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದು, ಸೌಜನ್ಯ ಪರ ನ್ಯಾಯ ಕೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ವೆಬ್‌ಸೈಟ್‌ಗಳು ಈ ಬಗ್ಗೆ ಸುದ್ದಿ ಪೋಸ್ಟ್ ಮಾಡಿವೆ.
![]()
2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಮೇಲೆ ನಡದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ 13 ವರ್ಷಗಳ ನಂತರವೂ ಸೌಜನ್ಯಳ ಕೊಲೆಗೆ ನ್ಯಾಯ ಸಿಗಬೇಕೆಂಬ ಕೂಗು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರೋಪಿ ಬಂಧಿಸಲು ಆಗ್ರಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಗೆ ಕೋಟ್ಯಾಂತರ ಜನರು ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ನಟ ದರ್ಶನ್ ಅವರು ಸೌಜನ್ಯ ಪರ ಧ್ವನಿ ಎತ್ತಿದ್ದಾರೆ ಎಂದು ಫೇಸ್‌ಬುಕ್, ಟ್ವೀಟರ್, ಕೆಲ ವೆಬ್‌ಸೈಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಟೈಮ್ಸ್ ಕನ್ನಡ ಎಂಬ ಫೇಸ್‌ಬುಕ್ ಪುಟದಲ್ಲಿ ದರ್ಶನ್ ಅವರು ಸೌಜನ್ಯ ಕೇಸ್ ಬಗ್ಗೆ ಮಾತನಾಡಿದ್ದಾರೆ ಎಂಬ ಪೋಸ್ಟ್ ಹಾಕಲಾಗಿದೆ. ದರ್ಶನ್ ಹಾಗೂ ಸೌಜನ್ಯ ಪೋಟೋ ಬಳಸಲಾಗಿದೆ. ಜತೆಗೆ ” ಸೌಜನ್ಯ ಬಗ್ಗೆ ಮೊಟ್ಟಮೊದಲ ಬಾರಿಗೆ ನ್ಯಾಯ ಕೇಳಲು ಬಂದ ದರ್ಶನ್, ಕನ್ನಡಿಗರು ಫಿದಾ ” ಎಂದು ಬರೆಯಲಾಗಿದೆ. ಜತೆಗೆ ಪವರ್‌ಫುಲ್ ಕನ್ನಡ ಮತ್ತು ಪವರ್‌ಫುಲ್ ಮೀಡಿಯಾ ಎಂಬ ವೆಬ್‌ಸೈಟ್‌ಗಳಲ್ಲಿ ಈ ಬಗ್ಗೆ ಸುದ್ದಿ ಪೋಸ್ಟ್ ಮಾಡಲಾಗಿದೆ. ಎರಡೂ ವೆಬ್‌ಸೈಟ್‌ನಲ್ಲಿಯೂ ಸೌಜನ್ಯ ಬಗ್ಗೆ ಮೊಟ್ಟಮೊದಲ ಬಾರಿಗೆ ನ್ಯಾಯ ಕೇಳಲು ಬಂದ ದರ್ಶನ್, ಕನ್ನಡಿಗರು ಫಿದಾ ಎಂಬ ಶೀರ್ಷಿಕೆ ಹಾಕಿದ್ದಾರೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ನಟ ದರ್ಶನ್ ಸೌಜನ್ಯ ಕೊಲೆಗೆ ನ್ಯಾಯ ಕೇಳಿದ್ದಾರೆಯೇ ಎಂದು ಪರಿಶೀಲಿಸಲು ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ, ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಈ ಬಗ್ಗೆ ಮಾಡಿದ ವರದಿಗಳು ಲಭ್ಯವಾಗಿಲ್ಲ. ಆದರೆ ಈಬಗ್ಗೆ ವಿಜಯ ಕರ್ನಾಟಕ ವೆಬ್‌ಸೈಟ್ ನಲ್ಲಿ ಪ್ರಕಟವಾದ ಫ್ಯಾಕ್ಟ್‌ಚೆಕ್ ಸ್ಟೋರಿಯೊಂದು ಲಭ್ಯವಾಗಿದೆ.
ವಿಜಯ ಕರ್ನಾಟಕ ಪಕಟಿಸಿರುವ ಫ್ಯಾಕ್ಟ್‌ಚೆಕ್‌ನಲ್ಲಿ, ನಟ ದರ್ಶನ್ ಸೌಜನ್ಯ ಕೊಲೆಗೆ ನ್ಯಾಯ ಕೇಳಿದ್ದಾರೆಯೇ ಎಂದು ಅದರ ಎಂಟರ್‌ಟೈನ್ಮೆಂಟ್ ವಿಭಾಗದ ಮುಖ್ಯಸ್ಥರಾದ ಅವಿನಾಶ್ ಜಿ ರಾಮ್ ಅವರನ್ನು ವಿಚಾರಿಸಿದಾಗ ಇದೊಂದು ಸುಳ್ಳು ಪೋಸ್ಟ್ ಎಂದು ಮಾಹಿತಿ ನೀಡಿದ್ದಾರೆಂದು ವರದಿ ಮಾಡಿದೆ. ಮುಂದುವರೆದು, ಸೌಜನ್ಯ ಬಗ್ಗೆ ನಟ ದರ್ಶನ್ ಮಾತನಾಡಿಲ್ಲ. ಕಳೆದ ವರ್ಷ ನಟ ದುನಿಯಾ ವಿಜಯ್ ಮಾತನಾಡಿದ್ದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆಂದು ಉಲ್ಲೇಖಿಸಿದೆ.
ಈ ಬಗ್ಗೆ ನಟ ದರ್ಶನ್ ಅವರ ಅಧಿಕೃತ ಟ್ವೀಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಪುಟಗಳನ್ನುಸರ್ಚ್ ಮಾಡಿದಾಗ ಎಲ್ಲಿಯೂ ದರ್ಶನ್ ಸೌಜನ್ಯ ಪರ ಮಾತನಾಡಿರುವುದು ಲಭ್ಯವಾಗಿಲ್ಲ. ಸುದ್ದಿ ವಾಹಿನಿಗಳು, ಅಧಿಕೃತ ನ್ಯೂಸ್ ವೆಬ್‌ಸೈಟ್ ಹುಡುಕಿದಾಗಲೂ ಎಲ್ಲಿಯೂ ಮಾಹಿತಿ ಸಿಕ್ಕಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ನಟ ದರ್ಶನ್ ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ ಅವರು ಸೌಜನ್ಯ ಪರ ನ್ಯಾಯ ಕೇಳಿದ್ದಾರೆ ಎಂಬ ಮಾಹಿತಿ ಸಂಪೂರ್ಣ ಸುಳ್ಳು. ಕೆಲ ವೆಬ್‌ಸೈಟ್‌ಗಳು ಈ ಬಗ್ಗೆ ನಕಲಿ ಸುದ್ದಿ ಹರಡಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಜಯ ಕರ್ನಾಟಕ ವೆಬ್‌ಸೈಟ್ ಸ್ಟೋರಿ ಪ್ರಕಟಿಸಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | April 1 ರಿಂದ ಫೋನ್ ಪೇ, ಗೂಗಲ್ ಪೇ ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ನಿಜವೇ?

