FACT CHECK | ಅಸ್ಸಾಂನಲ್ಲಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಶಾಸಕ ಓವೈಸಿಯ AIMIM ಪಕ್ಷದವನಲ್ಲ? ಮತ್ತ್ಯಾವ ಪಕ್ಷದ ಶಾಸಕ?

ವ್ಯಕ್ತಿಯೊಬ್ಬ ಗುಂಪಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ನಂತರ ಪಕ್ಕದಲ್ಲಿಯೇ ಇದ್ದ ಬಾಳೆ ಗಿಡದಲ್ಲಿ ಹೊಡೆಯುವ ವಿಡಿಯೋವೊಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಅಸಾದುದ್ದೀನ್ ಓವೈಸಿ ಅವರ ಪಕ್ಷದ AIMIM ನ ಶಾಸಕರೊಬ್ಬರು ಶಂಕುಸ್ಥಾಪನೆ ಸಮಾರಂಭದಲ್ಲಿ ಕೆಂಪು ರಿಬ್ಬನ್ ಹಾಕದ ಕಾರಣ ಒಬ್ಬ ಕಾರ್ಯಕರ್ತನನ್ನು ಥಳಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರೀತಿ ಸಿಂಗ್ ಎಂಬ ಎಕ್ಸ್‌ ಬಳಕೆದಾರರು, ‘ಅಸ್ಸಾಂನ ಧುಬ್ರಿ ಜಿಲ್ಲೆಯ ಪೂರ್ವ ಬಿಲಾಸಿಪಾರದ AIMIM ಶಾಸಕ ಶಂಸುಲ್ ಹುಡಾ ಅವರು ಶಿಲಾನ್ಯಾಸ ಸಮಾರಂಭದ ಸಮಯದಲ್ಲಿ ಕೆಂಪು ರಿಬ್ಬನ್ ಹಾಕದಿದ್ದಕ್ಕೆ ವ್ಯಕ್ತಿಯನ್ನು ಹೊಡೆದಿದ್ದಾರೆ’ ಎಂದು ಬರೆದಿದ್ದಾರೆ. ಅಂತಹವರನ್ನು ನಾಯಕರು ಎಂದು ಕರೆಯುವುದನ್ನು ನಿಲ್ಲಿಸಿ, ಅಸ್ಸಾಂನ ಜನರು ಅವರಿಗೆ ಅಲ್ಲಿಂದ ಘೇರಾವ್ ಹಾಕಿ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮಾರ್ಚ್ 19, 2025 ರ ಇಂಡಿಯಾ ಟುಡೇ ವರದಿಯೊಂದು ಲಭ್ಯವಾಗಿದೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಅಸ್ಸಾಂನ ಧುಬ್ರಿ ಜಿಲ್ಲೆಯ ಬಿಲಾಸಿಪರಾ ಪೂರ್ವದ ಎಐಯುಡಿಎಫ್ ಶಾಸಕ ಶಂಸುಲ್ ಹುಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತನ ವಿರುದ್ಧ ತಮರ್ಹತ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಲಾಸಿಪರಾ ಉಪವಿಭಾಗದ ಡೈಖೋವಾ ಬಜಾರ್‌ನಲ್ಲಿ ಆರ್‌ಸಿಸಿ ಸೇತುವೆಯ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ಗುತ್ತಿಗೆದಾರರ ಉದ್ಯೋಗಿ ಸಹಿದೂರ್ ರೆಹಮಾನ್ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಲ್ ಕೋಚ್-ರಾಜ್‌ಬೊಂಗ್ಶಿ ಸ್ಟೂಡೆಂಟ್ಸ್ ಯೂನಿಯನ್ ಎಂಬ ಸಂಘಟನೆಯು ಶಾಸಕ ಶಂಸುಲ್ ಹುಡಾ ವಿರುದ್ಧ ಈ ದೂರು ದಾಖಲಿಸಿದೆ. ಶಂಸುಲ್ ಹುದಾ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂಬ ಬೇಡಿಕೆಯೂ ಕೇಳಿ ಬಂದಿದೆ.

ಮಾರ್ಚ್ 21 ರ ಎಬಿಪಿ ನ್ಯೂಸ್ ಮತ್ತು ಫಸ್ಟ್ ಪ್ರೆಸ್ ಜರ್ನಲ್ ವರದಿಗಳಲ್ಲಿ ಆರೋಪಿ ಶಾಸಕರಿಗೆ ಸಂಬಂಧಿಸಿದ ಅದೇ ಸುದ್ದಿಯನ್ನು ನಾವು ಕಂಡುಕೊಂಡಿದ್ದೇವೆ. 

ಒಟ್ಟಾರೆಯಾಗಿ ಹೇಳುವುದಾದರೆ, ಅಸ್ಸಾಂನಲ್ಲಿ ವ್ಯಕ್ತಿಯನ್ನು ಥಳಿಸಿದ ಘಟನೆಯಲ್ಲಿ ಭಾಗಿಯಾಗಿರುವ ಶಾಸಕ ಅಸಾದುದ್ದೀನ್ ಓವೈಸಿ ಅವರ ಪಕ್ಷವಾದ AIMIM ನವರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಶಾಸಕ ಅಸ್ಸಾಂನ ಧುಬ್ರಿ ಜಿಲ್ಲೆಯ ಬಿಲಾಸಿಪರಾ ಪೂರ್ವದ ಎಐಯುಡಿಎಫ್ ಶಾಸಕ ಶಂಸುಲ್ ಹುಡಾ ಎಂದು ಹಲವು ಮಾಧ್ಯಮ ವರದಿಗಳು ದೃಢಪಡಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ  ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಾಡುಹಗಲೆ ಬೈಕ್ ಕಳ್ಳತನದ ವೈರಲ್ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights