FACT CHECK | ಪಶ್ಚಿಮ ಬಂಗಾಳದಲ್ಲಿ 10ವರ್ಷದ ದಲಿತ ಬಾಲಕನನ್ನು ಕೊಲೆ ಮಾಡಲಾಗಿದೆಯೇ?

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್‌ ತಿದ್ದುಪಡಿ ಕಾನೂನಿನ ವಿರುದ್ಧದ ಪ್ರತಿಭಟನೆಗಳು ಕೋಮು ಹಿಂಸಾಚಾರಕ್ಕೆ ತಿರುಗಿ ಅಶಾಂತಿ ಭುಗಿಲೆದ್ದಿತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದರು ಮತ್ತು ಮುರ್ಷಿದಾಬಾದ್‌ನ ವಿವಿಧ ಭಾಗಗಳಿಂದ ಭಯಭೀತರಾದ ನಿವಾಸಿಗಳು ಪಲಾಯನ ಮಾಡಿದರು. ಇದರ ಮಧ್ಯೆ ಈಗ 1 ನಿಮಿಷ 30 ಸೆಕೆಂಡ್​ಗಳ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಗುಂಪೊಂದು ಬಾಲಕನನ್ನು ಮನಬದಂತೆ ಹೊಡೆದು ಕಾಲಿನಿಂದ ತಿಳಿಯುತ್ತಿರುವುದನ್ನು ಕಾಣಬಹುದು.

ಏಪ್ರಿಲ್ 18, 2025 ರಂದು ಫೇಸ್​ಬುಕ್ ಬಳಕೆದಾರರೊಬ್ಬರು  ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ‌ ಬಂಗಾಳದಲ್ಲಿ 10 ವರ್ಷದ ದಲಿತ ಹಿಂದೂ ಮಗುವನ್ನು ಮನಸೋ ಇಚ್ಚೆ ಹೊಡೆದು ಕೊಲೆ ಮಾಡಿದ ದೇಶದ್ರೋಹಿಗಳು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಮಾರ್ಚ್ 2025 ರಲ್ಲಿ ಕೆಲ ಬಾಂಗ್ಲಾದೇಶಿ ಬಳಕೆದಾರರು ಇದೇ ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದು ಲಭ್ಯವಾಗಿದೆ.

ಇದೇ ವೇಳೆ ಮಾರ್ಚ್ 19, 2025 ರಂದು ಬಾಂಗ್ಲಾದೇಶದ ಮಾಧ್ಯಮ ಸಂಸ್ಥೆ SomoyNews.tvಇದೇ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಈ ಘಟನೆ ಮಾರ್ಚ್ 18 ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ನಡೆದಿದೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹದಿಹರೆಯದವನನ್ನು ಒಂದು ಗುಂಪು ಹೊಡೆದಿದೆ’’ ಎಂದು ಹೇಳಲಾಗಿದೆ.

ಈ ಮಾಹಿತಿಯ ಆಧಾರದ ಮೇಲೆ ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆಗ Prothomalo.com ಮಾರ್ಚ್ 19, 2025 ರಂದು ಈ ಘಟನೆ ಕುರಿತು ಸುದ್ದಿ ಮಾಡಿರುವುದು ಸಿಕ್ಕಿದೆ. ‘‘ರಾಜಧಾನಿಯ ಖಿಲ್ಖೇತ್ ಪ್ರದೇಶದಲ್ಲಿ ಅತ್ಯಾಚಾರದ ಆರೋಪಿಯ ಮೇಲೆ ಕೋಪಗೊಂಡ ಸ್ಥಳೀಯ ಗುಂಪೊಂದು ಥಳಿಸಿ ಗಾಯಗೊಳಿಸಿದೆ. ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಲಾಯಿತು. ಪೊಲೀಸ್ ಠಾಣೆಯ OC (ತನಿಖೆ) ಆಶಿಕುರ್ ರೆಹಮಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಹದಿಹರೆಯದವರನ್ನು ಸಹ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ’’ ಎಂದು ಬರೆಯಲಾಗಿದೆ.

ಮಾರ್ಚ್ 18, 2025 ರಂದು Ekushey TV ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟವಾದ ಘಟನೆಯ ವೀಡಿಯೊ ವರದಿಯು ವೈರಲ್ ವೀಡಿಯೊಗೆ ಹೋಲುವ ದೃಶ್ಯಗಳನ್ನು ತೋರಿಸುತ್ತದೆ. ವೀಡಿಯೊದ ಡಿಸ್ಕ್ರಿಪ್ಷನ್​ನಲ್ಲಿ ಈ ಘಟನೆ ಕುರಿತು ಮಾಹಿತಿ ನೀಡಲಾಗಿದ್ದು, ‘‘ರಾಜಧಾನಿಯ ಖಿಲ್ಖೇತ್ ಮಧ್ಯಪಾರ ಪ್ರದೇಶದಲ್ಲಿ ಅತ್ಯಾಚಾರದ ಆರೋಪದ ಮೇಲೆ ಕೋಪಗೊಂಡ ಸ್ಥಳೀಯ ಗುಂಪೊಂದು ಯುವಕನೊಬ್ಬನನ್ನು ಥಳಿಸಿ ತೀವ್ರವಾಗಿ ಗಾಯಗೊಳಿಸಿದೆ. ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದರು’’ ಎಂದು ಬರೆಯಲಾಗಿದೆ.

ಒಟ್ಟಾರೆಯಗಿ ಹೇಳುವುದಾದರೆ, ಪಶ್ಚಿಮ‌ ಬಂಗಾಳದಲ್ಲಿ ಹಿಂದೂ ಮಗುವನ್ನು ಮನಸೋ ಇಚ್ಚೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು. ಈ ವಿಡಿಯೋ ಘಟನೆ ಬಾಂಗ್ಲಾದೇಶದಲ್ಲಿ ನಡೆದಿರುವುದು ಸ್ಪಷ್ಟವಾಗಿದೆ.

ಕೃಪೆ : ನ್ಯೂಸ್‌ ಮೀಟರ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮಧ್ಯರಾತ್ರಿಯಲ್ಲಿ ಅಯೋಧ್ಯೆ ಬೀದಿಗಳಲ್ಲಿ ಹನುಮಂತ ಕಾಣಿಸಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights