FACT CHECK | ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರವಾದಿಗಳಲ್ಲಿ ಒಬ್ಬನನ್ನು ಜೀವಂತವಾಗಿ ಹಿಡಿಯಲಾಗಿದೆಯೇ?

ಏಪ್ರಿಲ್ 22 ರಂದು  ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಪ್ಪತ್ತಾರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.  ನಡೆದ ಈ ದಾಳಿಯು ಭಯಾನಕವಾಗಿದೆ. ಪ್ರತಿಯೊಬ್ಬ ಭಯೋತ್ಪಾದಕರನ್ನು ಗುರುತಿಸಿ, ಪತ್ತೆ ಹಚ್ಚಿ, ಅವರನ್ನು ಭಾರತ ಶಿಕ್ಷಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಪ್ರಸಾರವಾಗುತ್ತಿದೆ.

ಫೇಸ್​ಬುಕ್ ಬಳಕೆದಾರರು ಏಪ್ರಿಲ್ 23, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಒಬ್ಬ ಉಗ್ರವಾದಿಯನ್ನ ಜೀವಂತ ವಾಗಿ ಹಿಡಿದ ಭಾರತೀಯ ಸೇನೆ ಪಾಕಿಸ್ತಾನ ISI ದಾಳಿ ಮಾಡಲು ಕಳಿಸಿತ್ತಂತೆ. ಇದಕ್ಕೆ ಇನ್ನು ಪ್ರತಿಕಾರ ಬೇಕು.. ಜೈ ಜಾವಾನ್’’ ಎಂದು ಬರೆದುಕೊಂಡಿದ್ದಾರೆ.  (Archive) ಆಸ್ಪತ್ರೆಯ ಬೆಡ್ ಮೇಲೆ ಓರ್ವ ವ್ಯಕ್ತಿ ಮಲಗಿಗೊಂಡಿದ್ದು, ವರದಿಗಾರ ಆತನ ಬಳಿ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 25, 2022 ರಂದು ಆಜ್‌ತಕ್ ತನ್ನ ವೆಬ್​ಸೈಟ್​ನಲ್ಲಿ ಪೂರ್ಣ ವೀಡಿಯೊದ ಜೊತೆಗೆ ಸುದ್ದಿ ಪ್ರಕಟಿಸಿರುವುದು ಲಭ್ಯವಾಗಿದೆ.

‘‘ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಕಳೆದ 48 ಗಂಟೆಗಳಲ್ಲಿ ಭಾರತೀಯ ಸೇನೆ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಈ ಪ್ರಯತ್ನದಲ್ಲಿ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಜೀವಂತವಾಗಿ ಸೆರೆ ಸಿಕ್ಕಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆಗಸ್ಟ್ 21 ರ ಮುಂಜಾನೆ ನೌಶೇರಾದ ಝಾಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು ಎಲ್‌ಒಸಿಯಲ್ಲಿ 2-3 ಭಯೋತ್ಪಾದಕರ ಚಲನವಲನಗಳನ್ನು ಗಮನಿಸಿದರು. ಗಾಯಗೊಂಡ ಭಯೋತ್ಪಾದಕನನ್ನು ಸೈನಿಕರು ಆಸ್ಪತ್ರೆಗೆ ದಾಖಲಿಸಿದರು. ಅವರನ್ನು ಪಾಕಿಸ್ತಾನದಿಂದ ಭಾರತಕ್ಕೆ ಏಕೆ ಕಳುಹಿಸಲಾಯಿತು ಎಂದು ಕೇಳಿದಾಗ? ಬಂಧಿತ ಭಯೋತ್ಪಾದಕ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ’’ ಎಂಬ ಮಾಹಿತಿ ಇದರಲ್ಲಿದೆ.

ವೈರಲ್ ವೀಡಿಯೊದಲ್ಲಿ ಆಜ್ ತಕ್ ಲೋಗೋ ಇರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ವೀಡಿಯೊದ ಮೇಲೆ ‘ಪಾಕಿಸ್ತಾನದ ರಹಸ್ಯಗಳನ್ನು ಬಹಿರಂಗಪಡಿಸಿದ ಭಯೋತ್ಪಾದಕ’ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ನಾವು ಇದೇ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಯೂಟ್ಯೂಬ್​​ನಲ್ಲಿ ಹುಡುಕಿದ್ದೇವೆ. ಆಗ ಆಗಸ್ಟ್ 25, 2022 ರಂದು ಆಜ್ ತಕ್ ಯೂಟ್ಯೂಬ್​ ಚಾನೆಲ್​ನಲ್ಲಿ ಇದೇ ವೈರಲ್ ವೀಡಿಯೊವನ್ನು ಶಾರ್ಟ್ ರೂಪದಲ್ಲಿ ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. ಇದಕ್ಕೆ ‘‘ಪಾಕಿಸ್ತಾನದ ಭಯೋತ್ಪಾದಕನೊಬ್ಬ ಪಾಕಿಸ್ತಾನ ಸೇನೆಯ ರಹಸ್ಯಗಳನ್ನು ಬಹಿರಂಗಪಡಿಸಿದ್ದಾನೆ.’’ ಎಂದು ಕ್ಯಾಪ್ಶನ್ ನೀಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಗೂಗಲ್ ಸರ್ಚ್ ಮಾಡಿದಾಗ, ಆಗಸ್ಟ್ 24, 2022ರ ದಿ ಪ್ರಿಂಟ್ ವರದಿ  ಲಭ್ಯವಾಗಿದೆ. ‘‘ಜಮ್ಮು ಪ್ರದೇಶದ ಬಳಿಯ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಸೆರೆಹಿಡಿದ ಭಯೋತ್ಪಾದಕನೊಬ್ಬ ಭಾರತದ ಭೂಪ್ರದೇಶದೊಳಗೆ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸುವಲ್ಲಿ ಸೇವೆ ಸಲ್ಲಿಸುತ್ತಿರುವ ಪಾಕಿಸ್ತಾನಿ ಸೇನಾ ಕರ್ನಲ್ ಪಾತ್ರದ ಬಗ್ಗೆ ಹೇಳಿದ್ದಾನೆ. ಬಂಧಿತ ಭಯೋತ್ಪಾದಕ, ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಪ್ರಸ್ತುತ ಸೇನಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹುಸೇನ್ ಬುಧವಾರ ಚೇತರಿಸಿಕೊಳ್ಳುತ್ತಿದ್ದಂತೆ, ಎಲ್‌ಒಸಿ ದಾಟಿದ ನಂತರ ಭಾರತೀಯ ಸೈನಿಕರ ಮೇಲೆ ಫಿದಾಯೀನ್ ದಾಳಿ ನಡೆಸಲು ಪಾಕಿಸ್ತಾನದ ಕರ್ನಲ್ ಯೂನಸ್ ಚೌಧರಿ ಹಣ ಪಾವತಿಸಿದ್ದಾರೆ. ಇತರ ಮೂರರಿಂದ ನಾಲ್ಕು ಭಯೋತ್ಪಾದಕರೊಂದಿಗೆ ತನ್ನನ್ನು ಕಳುಹಿಸಲಾಗಿದೆ ಎಂದು ಎಎನ್‌ಐಗೆ ತಿಳಿಸಿದ್ದಾನೆ. ಹುಸೇನ್ ಗುಂಡೇಟಿನಿಂದ ಗಾಯಗೊಂಡಿದ್ದರೆ, ಆತನ ಸಹಚರರು ತಪ್ಪಿಸಿಕೊಂಡಿದ್ದರು’’ ಎಂದು ವರದಿಯಲ್ಲಿದೆ.

ಆಗಸ್ಟ್ 21, 2022 ರಂದು ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನಾ ಠಾಣೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾಗ ಪಾಕಿಸ್ತಾನಿ ಭಯೋತ್ಪಾದಕನೊಬ್ಬನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು ಎಂದು ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯು ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿದಿದೆ ಎಂದು 2022ರ ಹಳೆಯ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | “ತಂದೆಯ ಶವಕ್ಕೆ ಮಗ ಮುತ್ತಿಟ್ಟು ವಿದಾಯ ಹೇಳುತ್ತಿರುವ” ಫೋಟೊ ಉಗ್ರರ ದಾಳಿಗೆ ಬಲಿಯಾದ ಸೈಯದ್ ಆದಿಲ್ ಹುಸೇನ್ ಶಾ ಅವರದ್ದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights