FACT CHECK | ಪಹಲ್ಗಾಮ್‌ನಲ್ಲಿ ಅಮಾಯಕ ಹಿಂದೂಗಳನ್ನು ಕೊಂದ ಭಯೋತ್ಪಾದಕರ ವಿಡಿಯೋ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಜಮ್ಮು ಮತ್ತು ಕಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ಕನಿಷ್ಠ 26 ಪ್ರವಾಸಿಗರು ಸಾವನ್ನಪ್ಪಿದ ದುರಂತ ಘಟನೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ಹರಿದಾಡುತ್ತಿವೆ. ಇದೀಗ ಐದು ಜನ ಯುವಕರು ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಫೇಸ್​ಬುಕ್, ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗುತ್ತಿದೆ. ಈ ಐದು ಜನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಭಯೋತ್ಪಾದಕರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ, ಯುವಕರು ಅಸ್ಸಲಾಂ ಅಲೈಕುಮ್ ಎಂದು ಹೇಳುವುದನ್ನು ಕೇಳಬಹುದು.

ರವಿರಾಜ್‌ ವಿ ಹಿಂದೂ ಎಂಬಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಇವರೇ ನೋಡಿ ನಮ್ಮ ಹಿಂದೂಗಳನ್ನ ಬಲಿ ಪಡೆದ ಸೂ**. ಶಿವನೇ ಇವರ ಬಲಿ ಯಾವಾಗ ಆಗೋದು, ಆದಷ್ಟು ಬೇಗ ಇವರನ್ನ ಮೇಲೆ ಕರ್ಕೋಳಪ್ಪಾ’’ೆಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ವಿಡಿಯೋದೊಂದಿಗೆ ಪತ್ರಕರ್ತ ಸಚಿನ್ ಗುಪ್ತಾ ಅವರ ಟ್ವೀಟ್ ಲಭ್ಯವಾಗಿದೆ. ‘‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿದವರು ಇವರು ಎಂದು ಆರೋಪಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಇವರೆಲ್ಲರೂ ಖಜಾಕಿಸ್ತಾನದ ಸಾಮಾಜಿಕ ಮಾಧ್ಯಮದ ಕಂಟೆಂಟ್ ಕ್ರಿಯೇಟರ್ಸ್. ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ’’ ಎಂದು ಈ ಟ್ವೀಟ್‌ನಲ್ಲಿ ಸಚಿನ್ ಗುಪ್ತಾ ಬರೆದುಕೊಂಡಿದ್ದಾರೆ.

 

ಸಚಿನ್ ಗುಪ್ತಾ ಈ ವಿಡಿಯೋವನ್ನು ಪೊಸ್ಟ್‌ ಮಾಡುವಾಗ, ಸಾದಿಕ್ ಎಂಬ ವ್ಯಕ್ತಿಯ ಇನ್‌ಸ್ಟಾಗ್ರಾಮ್ ಖಾತೆ ಐಡಿಯನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋವನ್ನು ಏಪ್ರಿಲ್ 11 ರಂದು ಪೋಸ್ಟ್ ಮಾಡಿರುವುದನ್ನು ಸಾದಿಕ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಬಹುದು. ಈ ಪೋಸ್ಟ್ ಅನ್ನು ಸಾದಿಕ್ ರಷ್ಯನ್ ಭಾಷೆಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇದಲ್ಲದೆ, ಸಾದಿಕ್ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಈ 4 ಜನ ಸ್ನೇಹಿತರೊಂದಿಗೆ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇವರು ವಿಡಿಯೋ ಕ್ರಿಯೇಟರ್ ಆಗಿದ್ದಾರೆ.

 

View this post on Instagram

 

A post shared by Sq999 (@_sadiq999_)

ಈ ಗುಂಪಿನಲ್ಲಿರುವ ಮತ್ತೋರ್ವನ ಇನ್​ಸ್ಟಾಗ್ರಾಮ್ ಖಾತೆ ಲಭ್ಯವಾಗಿದೆ. ಇವರು ಭಯೋತ್ಪಾದಕರು ಎಂದು ವಿಡಿಯೋ ವೈರಲ್ ಆಗುವುದನ್ನು ಗಮನಿಸಿ ತಮ್ಮ ಇನ್​ಸ್ಟಾದಲ್ಲಿ ಸ್ಟೋರಿ ಹಂಚಿಕೊಂಡು ಸ್ಪಷ್ಟನೆ ಕೊಟ್ಟಿದ್ದಾರೆ. ‘‘ನಾನು ಭಯೋತ್ಪಾದಕನಲ್ಲ. ಖಜಾಕಿಸ್ತಾನದ ಬಾಕ್ಸರ್. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶದ ಜನರನ್ನು ನಾನು ತುಂಬಾ ಪ್ರೀತಿಸುತ್ತೇನೆ’’ ಎಂದು ಬರೆದುಕೊಂಡಿದ್ದಾರೆ. ಇದರ ಸ್ಕ್ರೀನ್ ಶಾಟ್ ಅನ್ನು ಕೆಳಗೆ ನೋಡಬಹುದು.

ಖಜಾಕಿಸ್ತಾನದ ಕಂಟೆಂಟ್ ಕ್ರಿಯೇಟರ್

ಪಹಲ್ಗಾಮ್ ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರ ಬಗ್ಗೆ ಸರ್ಚ್ ಮಾಡಿದಾಗ, ವರದಿಗಳು ಲಭ್ಯವಾಗಿದ್ದು, ದಾಳಿಯಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರು ಮತ್ತು ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ಬಗ್ಗೆ ಮಾಹಿತಿ ಸಿಕ್ಕಿದೆ. ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಬಸ್ರಾನ್ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಗುರುತಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಆಗಿದೆ. ಈ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಕೂಡ ಭಾಗಿಯಾಗಿದ್ದಾರೆ. ಈ ಭಯೋತ್ಪಾದಕರು 15 ರಿಂದ 20 ನಿಮಿಷಗಳ ಕಾಲ ಎಕೆ-47 ನಿಂದ ನಿರಂತರವಾಗಿ ಗುಂಡು ಹಾರಿಸಿದರು. ದಾಳಿ ಮಾಡಿದ ಇಬ್ಬರು ಭಯೋತ್ಪಾದಕರು ಪಶ್ತೂನ್ ಭಾಷೆಯಲ್ಲಿ ಮಾತನಾಡುತ್ತಿದ್ದರು, ಇದು ಅವರು ಪಾಕಿಸ್ತಾನಿ ನಾಗರಿಕರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇಬ್ಬರು ಸ್ಥಳೀಯ ಭಯೋತ್ಪಾದಕರನ್ನು ಸಹ ಗುರುತಿಸಲಾಗಿದೆ. ಅವರ ಹೆಸರುಗಳು ಆದಿಲ್ ಅಹ್ಮದ್ ಠಾಕೂರ್ ಮತ್ತು ಆಸಿಫ್ ಶೇಖ್ ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಭಾಗಿಯಾದ ಉಗ್ರಗಾಮಿಗಳ ವಿಡಿಯೋ ಎಂದು, ಖಜಾಕಿಸ್ತಾನದ ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್​ಗಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪಹಲ್ಗಾಮ್‌ನಲ್ಲಿ ದಾಳಿ ಮಾಡಿದ ಉಗ್ರವಾದಿಗಳಲ್ಲಿ ಒಬ್ಬನನ್ನು ಜೀವಂತವಾಗಿ ಹಿಡಿಯಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights