FACT CHECK | 2026ಕ್ಕೆ ₹ 500 ಮುಖಬೆಲೆಯ ನೋಟುಗಳು ರದ್ದಾಗಲಿದೆ ಎಂಬ ವಿಡಿಯೋ ವೈರಲ್? ಈ ಬಗ್ಗೆ ಸರ್ಕಾರ ಏನು ಹೇಳುತ್ತದೆ

ರೂ 2000 ಸಾವಿರ ಮುಖಬೆಲೆಯ ನೋಟುಗಳು ಸಧ್ಯ ದೈನಂದಿನ ಚಲಾವಣೆಯಲ್ಲಿ ಕಾಣಸಿಗುತ್ತಿಲ್ಲ. 2000 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಸೋಮವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ, ರಿಸರ್ವ್ ಬ್ಯಾಂಕ್ ಈ ಕರೆನ್ಸಿ ಹಿಂತೆಗೆದುಕೊಂಡು ಎರಡು ವರ್ಷಗಳ ನಂತರವೂ 6,181 ಕೋಟಿ ರೂ. ಮೌಲ್ಯದ 2000 ರೂ. ನೋಟುಗಳು ಇನ್ನೂ ಜನರ ಬಳಿ ಚಲಾವಣೆಯಲ್ಲಿವೆ. ಈ ಮಧ್ಯ ರೂ 500 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಲಾಗುವುದು ಎಂಬ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಕಳೆದ ಒಂದು ವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ 500 ರೂ ನೋಟು ನಿಷೇಧವಾಗುವ ಕುರಿತು ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಮುಂದಿನ ವರ್ಷದೊಳಗೆ (2026) 500 ರೂ ಮುಖಬೆಲೆಯ ನೋಟುಗಳನ್ನು ನಿಲ್ಲಿಸಲಾಗುವುದು ಎಂದು ಈ ವೈರಲ್ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಜೂನ್ 2ರಂದು ಕ್ಯಾಪಿಟಲ್ ಟಿವಿ ಎಂಬ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಈ ವಿಡಿಯೋ ಪ್ರಸಾರವಾಗಿದೆ. 2026ರ ಮಾರ್ಚ್ ತಿಂಗಳ ಬಳಿಕ 500 ರೂ ಬ್ಯಾಂಕ್ ನೋಟುಗಳು ಅಸಿಂಧುಗೊಳ್ಳುತ್ತವೆ ಎಂದು ಹ್ಯಾಂಕರ್ ಹೇಳುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಸರ್ಕಾರ ರೂ 500 ಮುಖಬೆಲೆ ನೋಟುಗಳನ್ನು ಹಿಂಪಡೆಯುವ ಸೂಚನೆಗಳನ್ನು ನೀಡಿದೆಯೇ ಎಂದು ಪರಿಶೀಲಿಸಲು, ಗೂಗಲ್ ಸರ್ಚ್ ಮಾಡಿದಾಗ,500 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಆರ್​​ಬಿಐ ಯಾವ ಪ್ರಕಟಣೆಯನ್ನೂ ನೀಡಿಲ್ಲ. 500 ರೂ ನೋಟುಗಳು ಕಾನೂನು ಪ್ರಕಾರ ಮಾನ್ಯವಾಗಿದೆ. ಅದನ್ನು ಹಿಂಪಡೆಯಲಾಗಿಲ್ಲ.

ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ. ಸುದ್ದಿಯನ್ನು ನಂಬುವ ಮುನ್ನ, ಅದು ಅಧಿಕೃತ ಮೂಲಗಳಿಂದ ಬಂದಿದೆಯಾ ಎಂದು ಪರಿಶೀಲಿಸಿ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಎಕ್ಸ್ ಪೋಸ್ಟ್​​ವೊಂದರಲ್ಲಿ ತಿಳಿಸಿದೆ.

ಮಂಗಳವಾರ, ಜೂನ್ 3, 2025 ರಂದು ಬಿಡುಗಡೆಯಾದ ಅಧಿಕೃತ PIBFactCheck ಪೋಸ್ಟ್ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ  ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ‘ಕ್ಯಾಪಿಟಲ್ ಟಿವಿ’ ಎಂಬ ಯೂಟ್ಯೂಬ್ ಚಾನೆಲ್‌ನ ಸುದ್ದಿ ನಿರೂಪಕರೊಬ್ಬರು ಮಾರ್ಚ್ 2026 ರಿಂದ ಜಾರಿಗೆ ಬರುವಂತೆ ಭಾರತ ₹500 ನೋಟುಗಳ ಚಲಾವಣೆಯನ್ನು ನಿಲ್ಲಿಸಲಿದೆ ಎಂದು ಹೇಳಿಕೊಂಡಿದ್ದಾರೆ.

 ‘ಕ್ಯಾಪಿಟಲ್ ಟಿವಿ’ (capitaltvind) ನಲ್ಲಿ ಎಂಬ #YouTube ವೀಡಿಯೊವೊಂದು ಮಾರ್ಚ್ 2026 ರೊಳಗೆ RBI ₹500 ನೋಟುಗಳ ಚಲಾವಣೆಯನ್ನು ನಿಲ್ಲಿಸಲಿದೆ ಎಂದು ತಪ್ಪಾಗಿ ಹೇಳಿಕೊಂಡಿದೆ” ಎಂದು PIBFactCheck ಪ್ಲಾಟ್‌ಫಾರ್ಮ್ X ನಲ್ಲಿನ ಪ್ರಕಟಣೆಯ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಈ ಸಾಮಾಜಿಕ ಮಾಧ್ಯಮ ಹೇಳಿಕೆಯನ್ನು ಖಂಡಿಸುತ್ತಾ, ಭಾರತ ಸರ್ಕಾರವು ಅಧಿಕೃತ “PIBFactCheck”ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದೆ.  ಇದರಲ್ಲಿ ದೇಶದ ಕೇಂದ್ರ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ (RBI), ಯಾವುದೇ ಸಂಭಾವ್ಯ ಅಥವಾ ಮುಂಬರುವ ನೋಟು ಅಮಾನ್ಯೀಕರಣ ಕ್ರಮದ ಬಗ್ಗೆ ಅಂತಹ ಯಾವುದೇ ಪ್ರಕಟಣೆಗಳನ್ನು ಮಾಡಿಲ್ಲ ಎಂದು ತಿಳಿಸಿದೆ.

₹500 ನೋಟುಗಳನ್ನು “ಸ್ಥಗಿತಗೊಳಿಸಲಾಗಿಲ್ಲ” ಮತ್ತು ಅಧಿಕೃತ ಭಾರತೀಯ ಕರೆನ್ಸಿಯ “ಕಾನೂನುಬದ್ಧ” ರೂಪವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಎಂದು ಸರ್ಕಾರವು ದೇಶದ ಜನರಿಗೆ ಭರವಸೆ ನೀಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ “ನಕಲಿ ಸುದ್ದಿ” ಮತ್ತು ವೀಡಿಯೊಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಮತ್ತು RBI ನಂತಹ ಅಧಿಕೃತ ಮೂಲಗಳಿಂದ ಬಂದಿಲ್ಲದಿದ್ದರೆ ಯಾವುದನ್ನೂ ನಂಬಬೇಡಿ ಎಂದು ಸರ್ಕಾರ ಜನರಿಗೆ ಎಚ್ಚರಿಕೆ ನೀಡಿದೆ.

” ತಪ್ಪು ಮಾಹಿತಿಗೆ ಬಲಿಯಾಗಬೇಡಿ. ಅಂತವುಗಳನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು  ಅಧಿಕೃತ ಮೂಲಗಳಿಂದ ಬಂದ ಸುದ್ದಿಗಳನ್ನು ಪರಿಶೀಲಿಸಿ!” ಎಂದು ಭಾರತ ಸರ್ಕಾರ ಹೇಳಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಇದೇ ರೀತಿಯ ತಪ್ಪು ಮಾಹಿತಿಯ ವಿರುದ್ಧ ಜನರಿಗೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ₹500 ನೋಟುಗಳಲ್ಲಿ ಚಲಾವಣೆಯಲ್ಲಿರುವ ಇತರ ಎಲ್ಲಾ ನೋಟುಗಳಂತೆ 17 ಭಾಷೆಗಳಲ್ಲಿ ಬರೆಯಲಾಗಿದೆ. ಈ ಭಾಷೆಗಳಲ್ಲಿ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಸೇರಿವೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016 ರಂದು ದೂರದರ್ಶನದ ಭಾಷಣದಲ್ಲಿ ₹1000 ನೋಟುಗಳೊಂದಿಗೆ ಹಿಂದಿನ ₹500 ನೋಟುಗಳನ್ನು ಅಮಾನ್ಯಗೊಳಿಸಿದ್ದರು. ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ನಕಲಿ ನೋಟುಗಳ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಇದನ್ನು ಒಂದು ಅಸ್ತ್ರವಾಗಿ ಬಳಸುತ್ತಿದೆ ಎಂದು ಹೇಳಲಾಗಿತ್ತು. (ಆದರೆ ಅದ್ಯಾವುದು ಸಾಧ್ಯವಾಗಿಲ್ಲ)

ಒಟ್ಟಾರೆಯಾಗಿ ಹೇಳುವುದಾದರೆ, 2026ರ ವೇಳೆಗೆ ₹500 ಮುಖಬೆಲೆಯ ನೋಟುಗಳನ್ನು ಸರ್ಕಾರ ಹಿಂಪಡೆಯಲಿದೆ ಎಂಬ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು. ಅಂತಹ ಯಾವುದೇ ಪ್ರಸ್ತಾವನೆಯನ್ನು RBI ಪ್ರಕಟಿಸಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ವೈರಲ್ ಆಗುತ್ತಿರುವ ಸಿಂಹದ ವಿಡಿಯೋದ ಅಸಲೀಯತ್ತೇನು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights