FACT CHECK | 2ನೇ ಮತ್ತು 4ನೇ ಶನಿವಾರ ಸರ್ಕಾರಿ ನೌಕರರಿಗೆ ರಜೆಗಳು ರದ್ದಾಗಿವೆಯೇ?

ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇನ್ನು ಮುಂದೆ 2ನೇ ಮತ್ತು 4ನೇ ಶನಿವಾರ ಸರ್ಕಾರಿ ನೌಕರರಿಗೆ ರಜಾದಿನದ ಬದಲಿಗೆ ಕೆಲಸದ ದಿನವನ್ನಾಗಿ ಸುಪ್ರಿಂ ಕೋರ್ಟ್‌ ಆದೇಶಿಸಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.

ಸರ್ಕಾರಿ ನೌಕರರಿಗೆ ಬಿಗ್‌ ಶಾಕ್‌ | ಇನ್ಮುಂದೆ 2ನೇ ಮತ್ತು ನಾಲ್ಕನೇ ಶನಿವಾರ ರಜೆಗಳು ರದ್ದು| 2ನೇ ಮತ್ತು 4ನೇ ಶನಿವಾರ ರಜೆ ಇಲ್ಲ- ಎಲ್ಲಾ ದಿನವೂ ಕಛೇರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಎಂಬ ಬರಹದೊಂದಿಗೆ ಶ್ರೀ ಕನ್ನಡ ಎಂಬ ಸುದ್ದಿವಾಹಿನಿಯೊಂದು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದೆ.

ನ್ಯೂಸ್‌18 ಸುದ್ದಿ ವಾಹಿನಿಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ 2ನೇ ಮತ್ತು ನಾಲ್ಕನೇ ಶನಿವಾರ ರಜೆಗಳು ರದ್ದು , ಭಾರತದ ಕೇಂದ್ರ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳನ್ನು ರದ್ದುಗೊಳಿಸಿರುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಈ ಆದೇಶವು ಜೂನ್ 14, 2025ರ ಎರಡನೇ ಶನಿವಾರದಿಂದಲೇ ಅನ್ವಯವಾಗಲಿದ್ದು, ಜುಲೈ 14, 2025ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಆದೇಶದ ಆಧಾರದ ಮೇಲೆ ರಾಷ್ಟ್ರಪತಿಗಳ ಅನುಮತಿಯೊಂದಿಗೆ ಜಾರಿಗೊಳಿಸಲಾಗಿದೆ. ಸಂವಿಧಾನದ 145ನೇ ವಿಧಿಯಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಿ, 2013ರ ಆದೇಶದ ಕ್ಲಾಸ್ 2ರ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಎಂದು ವಿವರಿಸಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸುದ್ದಿವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ಭಾರತದ ಕೇಂದ್ರ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳನ್ನು ರದ್ದುಗೊಳಿಸಿರುವ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ ಎಂಬುದು ನಿಜವೇ ತಿಳಿಸಿ ಎಂದು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂಗೆ ವಾಟ್ಸಪ್‌ ಸಂದೇಶಗಳ ಮೂಲಕ ವಿನಂತಿಸಿದ್ದಾರೆ.

ಸರ್ಕಾರಿ ನೌಕರರ 2ನೇ ಮತ್ತು ನಾಲ್ಕನೇ ಶನಿವಾರ ರಜೆಗಳು ರದ್ದು ಎಂಬ ಬಗ್ಗೆ ವಾಸ್ತವವೇನೆಂದು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂಡಿಯಾTV ನ್ಯೂಸ್‌.ಕಾಂ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ.

ವರದಿಯ ಪ್ರಕಾರ, ಇನ್ನು ಮುಂದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸುಪ್ರೀಂ ಕೋರ್ಟ್ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಆದೇಶದ ಪ್ರಕಾರ ಬದಲಾವಣೆಗಳೇನು?

2025 ರ ಜುಲೈ 14 ರಿಂದ ಭಾರತದ ಸುಪ್ರೀಂ ಕೋರ್ಟ್(Supreme Court) ತನ್ನ ಕಚೇರಿ ಕಾರ್ಯವಿಧಾನದಲ್ಲಿ ಹೊಸ ಪರಿವರ್ತನೆಗಳನ್ನು ಜಾರಿಗೆ ತರುತ್ತಿದ್ದು, ಇವು “ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು, 2025” ಅಡಿಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. ಈ ತಿದ್ದುಪಡಿ ಭಾರತೀಯ ಸಂವಿಧಾನದ ವಿಧಿ 145 ಅಡಿಯಲ್ಲಿ ರಾಷ್ಟ್ರಪತಿಗಳ(President) ಅನುಮೋದನೆ ಪಡೆಯಲಾಗಿದೆ. ಹೊಸ ನಿಯಮಗಳು(New rules) ಕೇವಲ ಸಮಯ ಬದಲಾವಣೆಗಳಷ್ಟೇ ಅಲ್ಲ, ನ್ಯಾಯಾಂಗ ವ್ಯವಸ್ಥೆಯ ಕಾರ್ಯದಕ್ಷತೆ, ಶಿಸ್ತಿನ ಹತ್ತಿರಕ್ಕೆ ಒಂದು ಹೆಜ್ಜೆ ಮುಂದಾಗಿದೆ ಎನ್ನಬಹುದು.

4:30ರ ನಂತರ ಕೆಲಸ ನಿಷೇಧ :

ಈಗಿನಿಂದ ಇನ್ನು ಮುಂದೆ ಸುಪ್ರೀಂ ಕೋರ್ಟ್ ಕಚೇರಿಗಳಲ್ಲಿ ಕೆಲಸದ ಸಮಯ ಸಂಜೆ 4:30ಕ್ಕೆ ಮುಕ್ತಾಯ ಆಗುತ್ತದೆ. ಹಳೆಯ ಕ್ರಮದಂತೆ ಸಂಜೆ 5:00ರವರೆಗೆ ಕಾರ್ಯ ನಿರ್ವಹಣೆ ಇಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಈ ಗಡಿ ಮೀರಿ ಕೆಲಸಕ್ಕೆ ಅವಕಾಶ ಇದೆ.

ತಿಂಗಳ ನಾಲ್ಕು ಶನಿವಾರಗಳೂ ಕೆಲಸದ ದಿನ :

ಇದುವರೆಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ರಜೆ ದಿನಗಳಾಗಿ ಕಾಯ್ದಿರಿಸಲಾಗಿತ್ತು. ಆದರೆ ಹೊಸ ನಿಯಮದಂತೆ, ಎಲ್ಲಾ ಶನಿವಾರಗಳು ಕಚೇರಿ ಕಾರ್ಯಾಚರಣೆಯೊಳಗೆ ಬರುವಂತಾಗಿದೆ. ಈ ದಿನಗಳಲ್ಲಿ ಕಚೇರಿ ಸಮಯ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00ರವರೆಗೆ ನಿರ್ಧರಿಸಲಾಗಿದೆ.

ತುರ್ತು ಅರ್ಜಿಗಳಿಗೆ ನಿಗದಿತ ಗಡುವು :

ಶನಿವಾರದಂದು ಅಥವಾ ದಿನಬಳಕೆಯ ನಂತರ ತುರ್ತು ಅರ್ಜಿಗಳನ್ನು ಸಲ್ಲಿಸಲು ಸಮಯವನ್ನು ಮಧ್ಯಾಹ್ನ 12:00ಗಿಂತ ಮುಂಚೆ ಅಂತಿಮ ಗಡುವು ಎಂದು ನಿಗದಿಪಡಿಸಲಾಗಿದೆ.

ವಿಶೇಷ ರಜೆ ದಿನಗಳ ನಿರ್ಧಾರ ಮುಖ್ಯ ನ್ಯಾಯಮೂರ್ತಿಗಳ ಕೈಯಲ್ಲಿ

ಕ್ರಿಸ್‌ಮಸ್, ಹೊಸ ವರ್ಷ ಹೀಗೆ ವಿಶೇಷ ದಿನಗಳ ಕಾರ್ಮಿಕ ಸಮಯವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು( Chief Justice) ನಿರ್ಧರಿಸುತ್ತಾರೆ. ಇದು ಸಂದರ್ಭಾನುಸಾರ ಪರಿವರ್ತನೆಗೆ ಅವಕಾಶ ನೀಡುತ್ತದೆ.

ಪೂರ್ವದ ನಿಯಮಗಳಿಗೆ ಎಸೆದ ಹೊಸ ಛಾಯೆ

ಈ ತಿದ್ದುಪಡಿ “ಸುಪ್ರೀಂ ಕೋರ್ಟ್ ನಿಯಮಗಳು, 2013” ರ ಆಧೇಶ II, ನಿಯಮಗಳು 1 ರಿಂದ 3 ಅನ್ನು ಸಂಪೂರ್ಣವಾಗಿ ಬದಲಾಯಿಸಿವೆ. ಈ ಮೊದಲು ಅನೇಕರಿಂದ ಅನುಸರಿಸಲಾಗಿದ್ದ ಮೇ 29, 2014ರ GSR 368(E) ಹಾಗೂ ಇತರ ಹಲವು ತಿದ್ದುಪಡಿ ಅಧಿಸೂಚನೆಗಳ ಸ್ಥಳದಲ್ಲಿ ಈಗ 2025ರ GSR 385(E) ನಿಂತಿದೆ.

ಇದು ಎಲ್ಲಾ ಸರ್ಕಾರಿ ಕಚೇರಿಗಳ ನೌಕರರಿಗೆ ಅನ್ವಯವಾಗಲಿದೆಯೇ ? ಎಂದು ಪರಿಶೀಲಿಸಲು KSRTC ಕೇಂದ್ರ ಕಚೇರಿಯ ನೌಕರರೊಬ್ಬರನ್ನು ಸಂಪರ್ಕಿಸಿ ಈ ಬಗ್ಗೆ ವಿಚಾರಿಸಿದಾಗ, ಈಗಿರುವ  ಆದೇಶದ ಪ್ರಕಾರ ಸರ್ಕಾರಿ ನೌಕರರಿಗೆ ಇದು ಅನ್ವಯವಾಗುವುದಿಲ್ಲ, ಸುಪ್ರಿಂ ಕೋರ್ಟ್‌ಗಳಲ್ಲಿ ಕೆಲಸ ನಿರ್ವಹಿಸುವ ಮತ್ತು ಕೋರ್ಟ್‌ನ ಕಾರ್ಯವಿಧಾನಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಸುದ್ದಿಯಲ್ಲಿ ತಿಳಿಸಿರುವಂತೆ ಇದು ಎಲ್ಲಾ ಸರ್ಕಾರಿ ನೌಕರರಿಗೂ ಅನ್ವಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.

ವರದಿ: ನ್ಯೂಸ್‌ ಆಫ್‌ ಪಬ್ಲಿಕ್‌

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಉಚಿತ ಸ್ಕೂಟಿ ನೀಡಲಿದೆಯೇ ಕೇಂದ್ರ ಸರ್ಕಾರ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights