FACT CHECK | ದುರದೃಷ್ಟವಷಾತ್ ನಾನು ಸಂಸದನಾದೆ ಎಂದು ಹೇಳಿದ್ರಾ ರಾಹುಲ್‌ ಗಾಂಧಿ?

ದುರದೃಷ್ಟವಶಾತ್ ನಾನು ಸಂಸದನಾದೆ ಎಂದು ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

 

ಶ್ರೀನಿವಾಸ್ ಆದಿ ಎಂಬ ಫೇಸ್‌ಬುಕ್ ಬಳಕೆದಾರರು ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ದುರಾದೃಷ್ಟವಷಾತ್ ನಾನು ಸಂಸದನಾಗಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2023ರ ಮಾರ್ಚ್ ಹೊತ್ತಿಗೆ ಅದಾನಿ-ಹಿಂಡನ್ ಬರ್ಗ್ ವಿವಾದದ ಬಗ್ಗೆ ಲಂಡನ್ ನಲ್ಲಿ ರಾಹುಲ್ ಗಾಂಧಿಯವರು ಮಾತನಾಡಿದ್ದರ ವಿರುದ್ಧ ಅವರು ಸಂಸತ್ತಿಗೆ ಬಂದ ಬಳಿಕ ಆಡಳಿತಾರೂಢ ಪಕ್ಷದ ಸದಸ್ಯರು ಗದ್ದಲವೆಬ್ಬಿಸಿದ್ದರು. ಈ ವಿಚಾರದಲ್ಲಿ ರಾಹುಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲು ಮುಂದಾಗಿದ್ದು ಅವರು ಈ ವೇಳೆ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ” ಎಂದು ಸರಿಯಾಗಿರದ ವಾಕ್ಯವನ್ನು ಹೇಳಿದ್ದರು ಎಂದು ಗೊತ್ತಾಗಿದೆ. ಈ ಸಂದರ್ಭದ ಮಾಧ್ಯಮ ವರದಿಗಳು ಲಭ್ಯವಾಗಿದ್ದು ಅದರಲ್ಲಿ ರಾಹುಲ್ ಗಾಂಧಿ ಅವರು ಮಾಧ್ಯಮಗೋಷ್ಠಿಯಲ್ಲಿ ಬಾಯ್ತಪ್ಪಿದ್ದು ಮತ್ತು ಆ ಬಳಿಕ ಜೈರಾಂ ರಮೇಶ್ ಅವರ ಸೂಚನೆ ಮೇರೆಗೆ ವಾಕ್ಯ ಸರಿಪಡಿಸಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆಯೇ? ಎರಡು ವರ್ಷಗಳ ಹಿಂದಿನ ವೀಡಿಯೋ ವೈರಲ್

ಮಾರ್ಚ್ 17, 2023ರ ಎನ್ಡಿಟಿವಿ ವರದಿಯಲ್ಲಿ, “ಗುರುವಾರ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು, ವಿವಿಧ ಕೇಂದ್ರ ಸಚಿವರು ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಯ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ, ಅದರಲ್ಲಿ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಅವರನ್ನು ಸರಿಪಡಿಸುತ್ತಿರುವುದು ಕಂಡುಬಂದಿದೆ. 25 ಸೆಕೆಂಡುಗಳ ಈ ವೀಡಿಯೋದಲ್ಲಿ, ರಾಹುಲ್ ಗಾಂಧಿ ವರದಿಗಾರರಿಗೆ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ” ಎಂದು ಹೇಳುವುದನ್ನು ತೋರಿಸಲಾಗಿದೆ, ಅನಂತರ ಜೈ ರಾಂರಮೇಶ್ ಅವರು ಕಾಂಗ್ರೆಸ್ ನಾಯಕನ ಬಳಿ ಬಾಗಿ ಅವರ ಹೇಳಿಕೆಉದ್ದೇಶಿಸಿ “ದುರದೃಷ್ಟವಶಾತ್, ನಾನು ಸಂಸತ್ ಸದಸ್ಯ – ಎಂದರೆ ಅವರು ತಮಾಷೆ ಮಾಡಬಹುದು” ಎಂದು ಹೇಳುತ್ತಾರೆ. ಅನಂತರ ರಾಹುಲ್ ಗಾಂಧಿ ವಾಕ್ಯವನ್ನು ಸರಿಪಡಿಸಿಕೊಳ್ಳುತ್ತಾರೆ: “ನೋಡಿ, ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ದುರದೃಷ್ಟವಶಾತ್ ನಿಮ್ಮ ವಿಷಯದಲ್ಲಿ, ನಾನು ಸಂಸತ್ತಿನ ಸದಸ್ಯ.” ಎನ್ನುತ್ತಾರೆ” ಎಂದು ವರದಿಯಲ್ಲಿದೆ.

ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆಯೇ? ಎರಡು ವರ್ಷಗಳ ಹಿಂದಿನ ವೀಡಿಯೋ ವೈರಲ್

ಮಾರ್ಚ್ 17, 2023ರ ಇಕನಾಮಿಕ್ ಟೈಮ್ಸ್ ವರದಿಯಲ್ಲಿ, ಲಂಡನ್‌ ಹೇಳಿಕೆ ಕುರಿತಂತೆ ರಾಹುಲ್ ಗಾಂಧಿಯವರು “ದುರದೃಷ್ಟವಶಾತ್ ಸಂಸತ್ ಸದಸ್ಯ” ವಾಗಿರುವುದರಿಂದ ಸ್ಪೀಕರ್ ಅವರಿಂದ ಕೇಳಲಾದ ಸಮಯದಲ್ಲಿ ಮಾತ್ರವೇ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಹೇಳಿದ್ದಾಗಿ ಇದೆ. ಅದಾನಿ ಪ್ರಕರಣ- ಸಂಸತ್ ಗೊಂದಲ ವಿಚಾರದಲ್ಲಿ ಮಾಧ್ಯಮ ಗೋಷ್ಠಿಯ ಮಾತಿನ ಮಧ್ಯೆ ರಾಹುಲ್ ಗಾಂಧಿ ಅವರು ಬಾಯ್ತಪ್ಪಿದ್ದರಿಂದ  ಅವರ ಸನಿಹದಲ್ಲಿ ಕುಳಿತಿದ್ದ ಎಐಸಿಸಿ ಸಂವಹನ ಉಸ್ತುವಾರಿಯಾಗಿರುವ ಜೈ ರಾಂ ರಮೇಶ್‌ ಅವರು “ನೀವು ‘ದುರದೃಷ್ಟವಶಾತ್ ನಾನು ಸಂಸತ್ತಿನ ಸದಸ್ಯ’ ಎಂದು ಹೇಳಿದ್ದೀರಿ. ಹೀಗೆಂದರೆ ಅವರು ತಮಾಷೆ ಮಾಡುವ ಸಾಧ್ಯತೆ ಇದ್ದು ಈಗ ನೀವು ‘ದುರದೃಷ್ಟವಶಾತ್ ನಿಮಗೆ (ಮಾಧ್ಯಮಕ್ಕೆ), ನಾನು ಸಂಸತ್ತಿನ ಸದಸ್ಯ’ ಎಂದು ಹೇಳಿ” ಎಂದು ಸರಿಪಡಿಸಿದರು ಎಂದಿದೆ.

ರಾಹುಲ್ ಗಾಂಧಿ ಅವರ “ದುರದೃಷ್ಟವಶಾತ್ ಸಂಸತ್ ಸದಸ್ಯ” ಹೇಳಿಕೆಯ ಬಗ್ಗೆ NDTV ಯೂಟ್ಯೂಬ್ ಚಾನೆಲ್ ನಲ್ಲೂ ಮಾರ್ಷ್ 17, 2023ರಂದು ವೀಡಿಯೋ ಅಪ್‌ ಲೋಡ್ ಮಾಡಲಾಗಿದ್ದು, ಇದರ ಬಗ್ಗೆ ಬಿಜೆಪಿ ನಾಯಕರು ಟೀಕಿಸಿದ್ದಾರೆ ಎಂದಿದೆ. ಈ ವೀಡಿಯೋದಲ್ಲಿ ರಾಹುಲ್ ಬಾಯ್ತಪ್ಪಿ ಹೇಳುವುದು, ಜೈ ರಾಂ ರಮೇಶ್ ಅವರು ಅದನ್ನು ಸರಿಪಡಿಸುವುದು ಕಾಣಿಸುತ್ತದೆ.

ಟೈಮ್ಸ್ ಆಫ್ ಇಂಡಿಯಾ ಕೂಡ ಮಾರ್ಚ್ 17, 2023ರಂದು ರಾಹುಲ್‌ ಗಾಂಧಿ ಅವರ ಮಾಧ್ಯಮಗೋಷ್ಠಿಯ ವೀಡಿಯೋ ಹಾಕಿದೆ. ರಾಹುಲ್ ಅವರ “ದುರದೃಷ್ಟವಶಾತ್ ಸಂಸತ್ ಸದಸ್ಯ” ಹೇಳಿಕೆ ಮತ್ತು ಕೂಡಲೇ ಜೈರಾಂ ರಮೇಶ್ ಅವರು ಅದನ್ನು ಸರಿಪಡಿಸಿದ್ದು ಮತ್ತು ಆ ಬಳಿಕ ಬಿಜೆಪಿ ನಾಯಕರು ಈ ಬಗ್ಗೆ ಟೀಕೆ ಮಾಡಿದ ವಿಚಾರ ಹೇಳಲಾಗಿದೆ.

ಈ ವಿಚಾರದಲ್ಲಿ ಜೈರಾಂ ರಮೇಶ್‌ ಅವರು ನೀಡಿದ ಸ್ಪಷ್ಟನೆಯನ್ನೂ ನಾವು ಗಮನಿಸಿದ್ದೇವೆ. ಮಾರ್ಚ್ 16, 2023ರಂದು ಅವರು ಈ ಕುರಿತು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ ಅವರ ತಪ್ಪಾದ ವಾಕ್ಯವನ್ನು ಕೂಡಲೇ ಸರಿಪಡಿಸಿಕೊಂಡರೂ ಅದಾನಿ ಪ್ರಕರಣದಲ್ಲಿ ಗಮನ ಬೇರೆಡೆ ಸೆಳೆಯಲು ಅವರ ಮಾತುಗಳನ್ನು ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದೌರ್ಭಾಗ್ಯದಿಂದ ನಾನು ಸಂಸದನಾದೆ ಎಂದು ರಾಹುಲ್ ಅವರು ಹೇಳಿದ್ದಲ್ಲ, ಬದಲಾಗಿ “ದುರದೃಷ್ಟವಶಾತ್ ಸಂಸತ್ ಸದಸ್ಯ” ಎಂದು ಬಾಯಿ ತಪ್ಪಿ ಹೇಳಿದ ಎರಡು ವರ್ಷಗಳ ಹಿಂದಿನ ಮಾತನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೇಘಸ್ಫೋಟದ ವಿಡಿಯೋ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights