FACT CHECK | ನೇಪಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆಯೇ?

ನೇಪಾಳದಲ್ಲಿ ನಡೆದ ಹಿಂಸಾತ್ಮಕ ಚಳವಳಿಯ ನಂತರ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲಾಗಿದೆ. ಕರ್ಕಿ ನೇಪಾಳದ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ನೇಪಾಳದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ನೇಪಾಳದ್ದು ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಜನರು ತಮ್ಮ ಕೈಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆ ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲದೆ ಮೆರವಣಿಗೆಯಲ್ಲಿ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ನಮ್ಮ ದೇಶದ ಗುಲಾಮರಿಗಿಂತ ನೇಪಾಳದವರು ಎಷ್ಟೋ ವಾಸಿ ಪ್ರತಿಭಟನೆಯಲ್ಲಿ ಭಾರತದ ಧ್ವಜ ಬಳಸಸಲಾಗುತ್ತಿದೆ.. ಭಾರತವನ್ನ ಕೊಂಡಾಡುತ್ತಿದ್ದಾರೆ.. ಭಾರತ್ ಮಾತಾಕಿ ಜೈ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ತೆಗದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಆಗಸ್ಟ್ 12, 2025 ರಂದು ಹಲವು  ಮಾಧ್ಯಮಗಳು ಮಾಡಿದ ವರದಿಗಳು ಲಭ್ಯವಾಗಿದೆ. ಈ ವರದಿಗಳು ವಿಭಿನ್ನ ಕೋನಗಳಿಂದ ಒಂದೇ ರೀತಿಯ ದೃಶ್ಯಗಳನ್ನು ಹೊಂದಿದ್ದು, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಜನರನ್ನು ಕಾಣಬಹುದು. ಇದು ಸೆಪ್ಟೆಂಬರ್ 2025 ರ ನೇಪಾಳ ಪ್ರತಿಭಟನೆಗಿಂತ ಹಿಂದಿನದು ಎಂದು ದೃಢಪಡಿಸುತ್ತದೆ.

ವರದಿಗಳ ಪ್ರಕಾರ, ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿ ಆಗಸ್ಟ್ 12, 2025 ರಂದು ‘ಹರ್ ಘರ್ ತಿರಂಗ’ ರ‍್ಯಾಲಿಯೊಂದಿಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಆರಂಭವನ್ನು ಶುರುಮಾಡಲಾಯಿತು. ರಾಜ್ಯಪಾಲ ಓಂ ಪ್ರಕಾಶ್ ಮಾಥುರ್, ಮುಖ್ಯಮಂತ್ರಿ ಪ್ರೇಮ್ ಸಿಂಗ್ ಗೋಲೆ, ಕ್ಯಾಬಿನೆಟ್ ಮಂತ್ರಿಗಳು, ಶಾಸಕರು, ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರ್ಯಾಮೆರವಣಿಗೆಯು ಎಂ.ಜಿ ಮಾರ್ಗದಿಂದ ಪ್ರಾರಂಭವಾಗಿ ಮನನ್ ಕೇಂದ್ರದಲ್ಲಿ ಸುಮಾರು ಒಂದು ಕಿಲೋಮೀಟರ್ ಕ್ರಮಿಸಿ ಕೊನೆಗೊಂಡಿತು.

ಮತ್ತಷ್ಟು ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಸರ್ಚ್ ನಡೆಸಿದಾಗ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಆಗಸ್ಟ್ 12, 2025 ರ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ಅವರು ರ‍್ಯಾಲಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಕಾರ್ಯಕ್ರಮದ ಹಲವಾರು ಫೋಟೋಗಳು ಸಹ ಇದ್ದವು. ಈ ಚಿತ್ರಗಳಲ್ಲಿ ಪ್ರೇಮ್ ಸಿಂಗ್ ತಮಾಂಗ್ ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ವೈರಲ್ ವೀಡಿಯೊದಲ್ಲಿ ಅವರು ಅದೇ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯಲ್ಲಿ ಸಿಕ್ಕಿಂ ರಾಜ್ಯಪಾಲ ಒ.ಪಿ. ಮಾಥುರ್ ಕೂಡ ಅವರೊಂದಿಗೆ ಇದ್ದರು, ಅವರನ್ನು ಕೂಡ ವೈರಲ್ ವೀಡಿಯೊದಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಆಗಸ್ಟ್ 2025 ರಲ್ಲಿ ಗ್ಯಾಂಗ್ಟಾಕ್‌ನಲ್ಲಿ ನಡೆದ ಹರ್ ಘರ್ ತಿರಂಗ ರ‍್ಯಾಲಿಯ ವಿಡಿಯೋವನ್ನು ನೇಪಾಳದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ನೇಪಾಳದಲ್ಲಿ ನಡೆದ ಪ್ರತಿಭಟನೆ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಫೋಟೊವನ್ನು ಪ್ರದರ್ಶಿಸಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights