ಸಾಲಬಾಧೆಯಿಂದ ಈ ವರ್ಷ ರಾಜ್ಯದಲ್ಲಿ ಎಷ್ಟು ಅನ್ನದಾತರು ಪ್ರಾಣಬಿಟ್ಟಿದ್ದಾರೆ ಗೊತ್ತಾ..? ಇಲ್ಲಿದೆ ಮಾಹಿತಿ
ಸರಕಾರ ಏನೇ ಹೇಳಿದರೂ, ಸಾಲಮನ್ನಾದ ಹೆಸರಲ್ಲಿ ಎಷ್ಟೇ ಕ್ರೆಡಿಟ್ ತೆಗೆದುಕೊಂಡರೂ ರಾಜ್ಯದಲ್ಲಿ ಅನ್ನದಾತರ ಆತ್ಮಹತ್ಯೆ ಅವ್ಯಾಹತವಾಗಿ ಸಾಗಿದೆ. ಸಾಲಬಾಧೆಯೂ ಸೇರಿದಂತೆ ನಾನಾ ಆರ್ಥಿಕ ಸಂಕಷ್ಟಗಳಿಂದಾಗಿ ಸಾವಿಗೆ ಶರಣಾಗುತ್ತಿರುವ ರೈತರ ಸಂಖ್ಯೆ ಇಳಿಮುಖವಾಗಿಲ್ಲ. ರಾಜ್ಯದಲ್ಲಿ ನಿಲ್ಲದ ಅನ್ನದಾತರ ಸಂಕಟ, ಉ.ಕದಲ್ಲಿ ಹೆಚ್ಚಿನ ರೈತರು ಸಾವಿಗೆ ಶರಣಾಗಿದ್ದಾರೆ.
ಗತಿಸುತ್ತಿರುವ 2019ರ ಕಳೆದ ಎಂಟು ತಿಂಗಳಲ್ಲಿ ರಾಜ್ಯದ 453 ರೈತರು ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಕಳೆದ ಏಪ್ರಿಲ್ ಮತ್ತು ನವೆಂಬರ್ ಅವಧಿಯಲ್ಲಿ ಈ ಆತ್ಮಹತ್ಯೆಗಳು ಸಂಭವಿಸಿವೆ.
ಪ್ರತಿ 12 ತಾಸಿಗೆ ಒಬ್ಬರಂತೆ ರೈತರು ತಮ್ಮ ಬದುಕಿಗೆ ಅಂತ್ಯ ಹಾಡಿದ್ದು, ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಆತ್ಮಹತ್ಯೆ ದಾಖಲಾಗಿದೆ. ಬೆಳಗಾವಿ (35), ವಿಜಯಪುರ (29), ಬಾಗಲಕೋಟ (17), ಹಾವೇರಿ (31), ಗದಗ (18) ಮತ್ತು ಧಾರವಾಡದಲ್ಲಿ 43 ರೈತರು ಸಾವಿಗೆ ಶರಣಾಗಿದ್ದಾರೆ.
ಇದೂ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ 4500 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 2015ನೇ ಇಸವಿಯೊಂದರಲ್ಲಿಯೇ 1062 ರೈತರು ಸಾವಿಗೆ ಕೊರಳೊಡ್ಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರ್ಷ ಮೈತಪಟ್ಟ ರೈತರ ಪೈಕಿ 269 ಮಂದಿಗೆ ಕೃಷಿ ಇಲಾಖೆ ಪರಿಹಾರ ಮಂಜೂರು ಮಾಡಿದೆ.

