ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲ : ರಾತ್ರೋರಾತ್ರಿ ಶಾಸಕರು ಶಿಫ್ಟ್!
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡದಿದ್ದು ಆಪರೇಷನ್ ಕಮಲದಿಂದ. ಇದೇ ರೀತಿ ಮಧ್ಯಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೇರಲು ನಿರ್ಧರಿಸಿದೆ.
ಎಸ್… ಮಧ್ಯಪ್ರದೇಶದ 12 ಜನ ಶಾಸಕರು ಪಕ್ಷ ತೊರೆಯಲು ಪಟ್ಟು ಹಿಡಿದು ನಿಂತಿದ್ದಾರೆ. ಈಗಾಗಲೇ 8 ಮಂದಿ ದೆಹಲಿಗೆ ಪ್ರಯಾಣ ಬೆಳಸಿದ್ದು, ಇನ್ನೂ ನಾಲ್ಕು ಶಾಸಕರನ್ನು ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದೆ ಎನ್ನುವ ವಿಚಾರ ವಿಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ರಾತ್ರೋರಾತ್ರಿ 4 ಶಾಸಕರನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದು ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ನ ನಾಲ್ವರು ಶಾಸಕರು ಹರಿಯಾಣದ ಬಳಿ ಇರುವ ಐಟಿಸಿ ಮೌರ್ಯ ಹೋಟೆಲ್ನಲ್ಲಿದ್ದಾರೆ. ಒಬ್ಬ ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಶಾಸಕರನ್ನು ಕರ್ನಾಟಕದ ರೆಸಾರ್ಟ್ನಲ್ಲಿ ಇರಿಸಲಾಗಿದೆ. ಕರ್ನಾಟಕಕ್ಕೆ ಕರೆತಂದಿರುವ ಮೂವರು ಶಾಸಕರನ್ನು ಚಿಕ್ಕಮಗಳೂರಿನ ಬಳಿ ಇರುವ ರೆಸಾರ್ಟ್ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿವೆ. ಆದರೆ, ಈ ಕುರಿತು ಇನ್ನೂ ಖಚಿತತೆ ಇಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಿಎಂ ಕಮಲನಾಥ್, “ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ. ನಮ್ಮ ಪಕ್ಷದ ಶಾಸಕರು ಎಂದಿಗೂ ನಮಗೆ ನಂಬಿಕೆದ್ರೋಹ ಮಾಡುವುದಿಲ್ಲ. ಅವರು ಕಾಂಗ್ರೆಸ್ಗೆ ಮರಳುತ್ತಾರೆಂಬ ನಂಬಿಕೆಯಿದೆ” ಎಂದಿದ್ದಾರೆ.

ಮಧ್ಯಪ್ರದೇಶ ಸಿಎಂ ಕಮಲನಾಥ್ ಅಧಿಕಾರಕ್ಕೆ ಬರುವ ಮುನ್ನ ಅತ್ಯಂತ ಕಡಿಮೆ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಕಾಂಗ್ರೆಸ್ ಮತ್ತು ಇತರೆ ಪಕ್ಷದ ಶಾಸಕರನ್ನು ರೆಸಾರ್ಟ್ ರಾಜಕಾರಣದ ಮೂಲಕ ತನ್ನತ್ತ ಸೆಳೆದು, ಸರ್ಕಾರ ರಚಿಸಲು ತಂತ್ರ ರೂಪಿಸಿತ್ತು. ಆದರೆ, ರೆಸಾರ್ಟ್ ರಾಜಕೀಯದ ಪ್ಲಾನ್ ಯಶಸ್ಸು ಕಂಡಿರಲಿಲ್ಲ. ಸದ್ಯ ಅದೇ ದಾರಿಯನ್ನ ಹಿಡಿದಿದ್ದು 12 ಶಾಸಕರು ಪಕ್ಷಾಂತರಗೊಳ್ಳಲು ಬಿಜೆಪಿ ಯಾವೆಲ್ಲಾ ತಂತ್ರಗಳನ್ನ ಹೂಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

