ಮಾಸ್ಕ್ ಧರಿಸದವರಿಂದ ಒಂದೇ ದಿನದಲ್ಲಿ 51 ಸಾವಿರ ರೂ ದಂಡ ವಸೂಲಿ ಮಾಡಿದ ಬಿಬಿಎಂಪಿ
ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿ. ಶುಕ್ರವಾರ ದಂಡ ವಸೂಲಿ ಕಾರ್ಯಾಚರಣೆಗೆ ಚಾಲನೆ ನೀಡಿದ್ದ ಬಿಬಿಎಂಪಿ ಶನಿವಾರ ಒಂದೇ ದಿನದಲ್ಲಿ 51 ರೂ ಮೊತ್ತದ ದಂಡವನ್ನು ಸಾರ್ವಜನಿಕರಿಂದ ವಸೂಲಿ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಓಡಾಡಬೇಕು ಎಂದು ಬಿಬಿಎಂಪಿ ಆದೇಶಿಸಿದ್ದು, ಮೊದಲ ದಿನವಾದ ಶುಕ್ರವಾರ ಕೇವಲ ನಾಲ್ಕು ಮಂದಿಯಿಂದ ರೂ.2,600 ದಂಡ ವಸೂಲಿ ಮಾಡಲಾಗಿತ್ತು. 2ನೇ ದಿನವಾದ ಶನಿವಾರ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬಿಬಿಎಂಪಿ ಮಾರ್ಷಲ್ ಗಳು ಎಂಟು ವಲಯದಲ್ಲಿ 86 ಮಂದಿಗೆ ರೂ.51,700 ದಂಡ ವಿಧಿಸಲಾಗಿದೆ. ಯಲಹಂಕ ವಲಯದಲ್ಲಿ ಯಾವುದೇ ದಂಡ ವಿಧಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ದಂಡ ಸಂಗ್ರಹಿಸುವ ಉದ್ದೇಶದಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲ್ಲ. ಕೊರೋನಾ ಸೋಂಕು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವಂತಾಗಬೇಕು. ಈ ನಿಯಮ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ. ಬಿಬಿಎಂಪಿ ಹಿರಿಯ, ಕಿರಿಯ ಆರೋಗ್ಯಾಧಿಕಾರಿಗಳು ಹಾಗೂ ಮಾರ್ಷಲ್ ಗಳು ಮಾಸ್ಕ್ ಬಳಿಕ ಮಾಡದವರಿಗೆ ದಂಡ ವಿಧಿಸುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

