SSLC ವಿದ್ಯಾರ್ಥಿಗಳಿಗೆ ವಿನೂತನವಾಗಿ ಆತ್ಮಸ್ಥೈರ್ಯ ತುಂಬುತ್ತಿದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ
ಲಾಕ್ಡೌನ್ನಿಂದಾಗಿ ರಾಜ್ಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾರದೆ ಕಂಗಾಲಾಗಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಲಾಕ್ಡೌನ್ ಆತಂಕವನ್ನುಂಟು ಮಾಡಿತ್ತು. ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬ ಗೊಂದಲದಲ್ಲಿ ಇಂದಿಗೂ ವಿದ್ಯಾರ್ಥಿಗಳು ಚಿಂತಿಸುತ್ತಿದ್ದಾರೆ.
ಪರೀಕ್ಷೆ ಚಿಂತೆಯಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿನ ಭಯವನ್ನು ಹೋಗಲಾಡಿಸಿ ಪರೀಕ್ಷಾ ತಯಾರಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದೆ.
ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಪ್ರಯತ್ನವಾಗಿ ಬೆಳ್ಳಂಬೆಳಗ್ಗೆಯೇ ಅನೌನ್ಸ್ಮೆಂಟ್ ಮಾಡಲಾಗುತ್ತಿದೆ. ಅವಳಿ ನಗರಗಳಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸುವ ಪಾಲಿಕೆಯ ವಾಹನಗಳ ಮೂಲಕ ಪರೀಕ್ಷಾ ಸಿದ್ಧತೆಯ ಸಂದೇಶಗಳನ್ನು ಕೊಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಧ್ವನಿ ಮುದ್ರಿಸಿರುವ ಆಡಿಯೋವನ್ನು ಪ್ರಸಾರ ಮಾಡಿ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಏಳೆಯುವ ಕಾರ್ಯ ಮಾಡಲಾಗುತ್ತಿದೆ.
ಧಾರವಾಡ ಆಕಾಶವಾಣಿ ಕೇಂದ್ರದಿಂದ ಪುನರ್ ಮನನ ತರಗತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಪ್ರತಿದಿನ ಮಧ್ಯಾಹ್ನ 2.30ರಿಂದ 3ರವರೆಗೆ ಆಕಾಶವಾಣಿಯಲ್ಲಿ ನುರಿತ ಶಿಕ್ಷಕರಿಂದ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳ ರೇಡಿಯೊ ಪಾಠ ಮರುಪ್ರಸಾರ ಆಗುತ್ತಿದೆ.
ಚಂದನ ವಾಹಿನಿಯಲ್ಲಿ ಸಂಪನ್ಮೂಲ ಶಿಕ್ಷಕರಿಂದ ಮಧ್ಯಾಹ್ನ 3ರಿಂದ 4.30 ತನಕ ತರಗತಿಗಳನ್ನು ನಡೆಸುತ್ತಿದೆ. ಮೇ 15ರವರೆಗೆ ಗಣಿತ ಮತ್ತು ವಿಜ್ಞಾನ, ನಂತರದ ಆರು ದಿನ ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಕನ್ನಡದ ಪುನರ್ ಮನನದ ತರಗತಿಗಳು ನಡೆಯುತ್ತಿವೆ.
ಎಸ್ಸೆಸ್ಸೆಲ್ಸಿಯ ವಾರ್ಷಿಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಿ ಎಂದು ಪ್ರಚಾರ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ವೃದ್ಧಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಕೈ ಜೋಡಿಸಿರುವುದು ಜನ ಮೆಚ್ಚುಗೆ ಗಳಿಸಿದೆ.

