ಅರ್ಜುನ ಪ್ರಶಸ್ತಿ ಪಡೆಯಲು ಇನ್ನಾವ ಪದಕ ಗೆಲ್ಲಬೇಕು? ಮೋದಿಗೆ ಕುಸ್ತಿಪಟು ಪತ್ರ

ಖೇಲ್ ರತ್ನ ವಿಜೇತೆ ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಚಾನು ಅವರಿಗೆ ಅರ್ಜುನ ಪ್ರಶಸ್ತಿ ನೀಡದಿರುವ ಕ್ರೀಡಾ ಸಚಿವಾಲಯದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿರುವ ಸಾಕ್ಷಿ ಮಲಿಕ್ ಅವರು, ಪ್ರತಿಷ್ಠಿತ  ಅರ್ಜುನ ಪ್ರಶಸ್ತಿ ಸ್ವೀಕರಿಸಲು ನಾನು ಇನ್ನಾವ ಪದಕವನ್ನು ಜಯಿಸಬೇಕು ಎಂದು ಪ್ರಶ್ನಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಅರ್ಜುನ ಪ್ರಶಸ್ತಿ ಘೋಷಿಸಿದ್ದ ಕ್ರೀಡಾ ಸಚಿವಾಲಯ 29 ಪ್ರಶಸ್ತಿ ಪುರಸ್ಕೃತರ ಹೆಸರನ್ನು ಮೊದಲಿಗೆ ಆಯ್ಕೆ ಮಾಡಿತ್ತು. ನಂತರ  ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಪುರಸ್ಕೃತರ ಸಂಖ್ಯೆಯ್ನು 27ಕ್ಕೆ ಇಳಿಸಿತ್ತು. ಈ ಬಗ್ಗೆ ಸಾಕ್ಷಿ ಮಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದು, ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಕ್ರೀಡಾ ಸಚಿವಾಲಯದ ವಿವರಣೆಯಿಂದ ತೃಪ್ತರಾಗದ ಸಾಕ್ಷಿ, ಪಿಎಂ ಮೋದಿ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಅವರಿಗೆ ಪತ್ರವೊಂದನ್ನು ಬರೆದಿದ್ದು, “ಖೇಲ್ ರತ್ನವನ್ನು ನೀಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬ ಕ್ರೀಡಾಪಟು ಎಲ್ಲಾ ಪ್ರಶಸ್ತಿಗಳನ್ನು ಗೆಲ್ಲುವ ಕನಸು ಕಾಣುತ್ತಾನೆ. ಒಬ್ಬ ಕ್ರೀಡಾಪಟು ತನ್ನ ಜೀವವನ್ನು ಅದಕ್ಕೆಂದೇ ಅಪಾಯಕ್ಕೆ ದೂಡುತ್ತಾನೆ. ಅರ್ಜುನ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡುವ ಕನಸು ನನಗಿದೆ. ನಾನು  ನನ್ನ ವೃತ್ತಿಜೀವನದಲ್ಲಿ ಎಂದಾದರೂ ಪ್ರಶಸ್ತಿ ಗಳಿಸಿಕೊಳ್ಳುತ್ತೇನೆಯೆ?” ಎಂದು ಪ್ರಶ್ನಿಸಿದ್ದಾರೆ.

“ನಾನು ಅರ್ಜುನ ಪ್ರಶಸ್ತಿಗೆ ಪಾತ್ರವಾಗಲು ದೇಶಕ್ಕೆ ಇನ್ನಾವ ಪದಕ ಗಳಿಸಿಕೊಡಬೇಕು? ಅಥವಾ  ಈ ಕುಸ್ತಿ ಕ್ರೀಡಾ ಜೀವನದಲ್ಲಿ, ಈ ಪ್ರಶಸ್ತಿಯನ್ನು ಗೆಲ್ಲುವ ಅದೃಷ್ಟ ನನಗೆ ಎಂದಿಗೂ ಇರುವುದಿಲ್ಲವೇ?” ಎಂದು ಸಾಕ್ಷಿ ಪತ್ರದಲ್ಲಿ ಕೇಳಿದ್ದಾರೆ.

2017 ರಲ್ಲಿ ನಡೆದ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ ಚಿನ್ನ ಗೆದ್ದಿದ್ದರು. ನವದೆಹಲಿಯಲ್ಲಿ ನಡೆದ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.  ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಸಾಕ್ಷಿಯವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು, ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ದರು. ಅಲ್ಲದೆ, ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.


Read Also: ಬಿಜೆಪಿಯಿಂದ ಅಸ್ಸಾಂ ಮುಖ್ಯಮಂತ್ರಿ ಅರ್ಭರ್ಥಿಯಾಗಿ ಸ್ಪರ್ಧಿಸುವುದಿಲ್ಲ: ಮಾಜಿ ಸಿಜೆಐ ರಂಜನ್ ಗೊಗೊಯ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights