ಅಧ್ಯಕ್ಷಗಿರಿ ತಿರಸ್ಕರಿಸಿದ ಬಿಜೆಪಿ ಶಾಸಕ: ಮಂತ್ರಿಗಿರಿಗೆ ಶುರುವಾಯ್ತು ಕಸರತ್ತು!

ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎದುರಾಗಬಹುದಾದ ಬಿಜೆಪಿ ಶಾಸಕರ ಬಂಡಾಯವನ್ನು ಶಮನ ಮಾಡುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಒಂದು ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪನವರು 20 ಶಾಸಕರಿಗೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಪ್ರಧಾನ ಮಾಡಿದ್ದರು.

ಆದರೆ, ಯಡಿಯೂರಪ್ಪನವರ ಬುದ್ದಿವಂತ ನಡೆಯನ್ನು ಅರಿತಿದ್ದ ಶಾಸಕರು ನಿಗಮ ಮಂಡಳಿಗಳ ಬೋರ್ಡುಗಳನ್ನು ಹಾಕಿಕೊಳ್ಳಲು ನಿರಾಕರಿಸಿದ್ದರು. ಈ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಮಗೆ ನೀಡಿರುವ ಅಧ್ಯಕ್ಷಗಿರಿಯನ್ನು ಅಲಂಕರಿಸುವುದಿಲ್ಲ ಎಂದು ವಿನಯವಾಗಿ ತಿರಸ್ಕರಿಸಿ ಸಿಎಂ ಬಿಎಸ್‌ವೈಗೆ ಪತ್ರ ಬರೆದಿದ್ದು, ಪರೋಕ್ಷವಾಗಿ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ.

ಸಿಎಂ ಯಡಿಯೂರಪ್ಪರವರಿಗೆ ಪತ್ರ ಬರೆದಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ನೀವು ನನ್ನ ರಾಜಕೀಯ ಜೀವನದಲ್ಲಿ 1999 ರಿಂದ  ಪ್ರೋತ್ಸಾಹ ನೀಡಿದ್ದೀರಿ. ಒಮ್ಮೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ, ಮೂರು ಬಾರಿ ಶಾಸಕರಾಗಿ ಮಾಡಿದ್ದೀರಿ. ಈ ಹಿನ್ನೆಲೆಯಲ್ಲಿ ನನ್ನ ಮೇಲಿನ ಪ್ರೀತಿಯಿಂದಲೇ ಎಂಸಿಎ ಅಧ್ಯಕ್ಷ ಸ್ಥಾನ ನೀಡಿದ್ದು, ನಿಮಗೆ ನಾನು ಯಾವತ್ತು ಚಿರರುಣಿಯಾಗಿದ್ದೇನೆ. ಈವರೆಗೆ ನಾನು ನಿಮ್ಮನ್ನ ಮಂತ್ರಿ ಅಥವಾ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಿ ಎಂದು ಯಾವತ್ತು ಕೇಳಿಲ್ಲ. ಆದರೆ ತಾವು ನನಗೆ ನೀಡಿರುವ ಎಂಸಿಎ ಅಧ್ಯಕ್ಷ ಹುದ್ದೆ ಅಲಂಕರಿಸುವುದಿಲ್ಲ. ಅನ್ಯತಾ ಭಾವಿಸಬೇಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೆ, ರಾಜ್ಯದಲ್ಲಿ ಎಸ್​​ಸಿ ಬಲಗೈ ಸಮುದಾಯದ ಜನಾಂಗವು ಹೆಚ್ಚಿದ್ದು, ಇನ್ನು ಸಾಕಷ್ಟು ಹಿಂದುಳಿದಿದ್ದಾರೆ. ಈ ಸಮುದಾಯದಿಂದ ಮೂವರು ಶಾಸಕರು ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ಯಾರನ್ನಾದರು ಮಂತ್ರಿಗಳನ್ನಾಗಿ ಮಾಡಿ. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್.ಸಿ ಬಲಗೈ ಸಮುದಾಯದವರು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಲು ಪ್ರೋತ್ಸಾಹಿಸುವಂತೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

ಮೈತ್ರಿ ಸರ್ಕಾರ ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಕಾಂಗ್ರೆಸ್‌-ಜೆಡಿಎಸ್‌ನಿಂದ ವಲಸೆ ಬಂದಿರುವ ಶಾಸಕರಿಗೆ ಮಂತ್ರಿಗಿರಿ ಪಟ್ಟಕಟ್ಟುವ ಸವಾಲು ಯಡಿಯೂರಪ್ಪನವರ ಮುಂದಿದ್ದು, ಮೂಲ ಬಿಜೆಪಿಗರಿಗೆ ಮಂತ್ರಿ ಪದವಿ ನೀಡುವುದು ಬಿಎಸ್‌ವೈಗೆ ಕಷ್ಟವಾಗಿ ಪರಿಣಮಿಸಿದೆ. ಹಾಗಾಗಿ ಕೆಲವು ಆಕಾಂಕ್ಷಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ಕೊಟ್ಟು, ಅವರನ್ನು ಸಮಾಧಾನ ಪಡಿಸಿ, ಅರ್ಹರಾಗಿರುವ ಅನರ್ಹರಿಗೆ ಮಂತ್ರಿಗಿರಿ ಕೊಡಲು ಸರಾಗ ಮಾಡಿಕೊಳ್ಳಲು ಬಿಎಸ್‌ವೈ ಮುಂದಾಗಿದ್ದರು.

ಆದರೆ, ಮೂಲ ಬಿಜೆಪಿಗರು ಮಂತ್ರಿಗಿರಿಗಾಗಿ ಹೈಕಮಾಂಡ್‌ ಭೇಟಿ ಮಾಡುವ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆ ಕಘಂಟಾಗಿ ಪರಿಣಮಿಸಿದೆ.


ಇದನ್ನೂ ಓದಿ:  ಸಂಪುಟ ವಿಸ್ತರಣೆಗೆ ಬಿಜೆಪಿಯಲ್ಲಿ ಭಿನ್ನಮತ: ಮಂಡಳಿ ಅಧ್ಯಕ್ಷಗಿರಿಗೆ ಬಿಜೆಪಿ ಶಾಸಕರ ನಕಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights