ಹತ್ರಾಸ್ ಸಂತ್ರಸ್ತೆಯನ್ನು ಆಕೆಯ ತಾಯಿ ಮತ್ತು ಸಹೋದರನೇ ಕೊಂದಿದ್ದಾರೆ: ಪೊಲೀಸರಿಗೆ ಆರೋಪಿ ಪತ್ರ
ಹತ್ರಾಸ್ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿ ಸಂದೀಪ್ ಠಾಕೂರ್, ನಾವು ಅಪರಾಧ ಎಸಗಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾನೆ. ಈ ಪ್ರಕರಣದಲ್ಲಿ ತನ್ನನ್ನೂ ಹಾಗೂ ಇತರ ಮೂವರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಆದರೆ, ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನೇ ಸೇರಿ ಹಲ್ಲೆ ಮಾಡಿದ್ದಾರೆ ಎಂದು ಬರೆದಿದ್ದಾನೆ.
ಆರೋಪಿಗಳಲ್ಲಿ ಒಬ್ಬನು ಸಂತ್ರಸ್ತೆಯ ಕುಟುಂಬಕ್ಕೆ ಈ ಹಿಂದೆಯೆ ಪರಿಚಯವಿದ್ದುದ್ದಕ್ಕೆ ಪುರಾವೆಗಳಿವೆ ಎಂದು ಪೊಲೀಸರು ಹೇಳಿದ್ದ ಬೆನ್ನಲ್ಲೇ ಪತ್ರ ಬರೆದಿರುವ ಆರೋಪಿ. ತಾನು ಮತ್ತು ಸಂತ್ರಸ್ತ ಯುವತಿ “ಸ್ನೇಹಿತರಾಗಿದ್ದೆವು, ಭೇಟಿಯ ಹೊರತಾಗಿ, ನಾವು ಕೆಲವೊಮ್ಮೆ ದೂರವಾಣಿಯಲ್ಲಿ ಮಾತನಾಡುತ್ತಿದ್ದೆವು” ಎಂದು ಬರೆದಿದ್ದಾನೆ.
“ನಮ್ಮಿಬ್ಬರ ಸ್ನೇಹವನ್ನು ಒಪ್ಪದ ಯುವತಿಯ ತಾಯಿ ಮತ್ತು ಸಹೋದರ ಆಕೆಗೆ ಕ್ರೂರವಾಗಿ ಥಳಿಸಿ ಗಾಯಗೊಳಿಸಿದ್ದಾರೆ ಎಂದು ಗ್ರಾಮಸ್ಥರ ಮೂಲಕ ತಿಳಿದುಕೊಂಡೆ. ನಾನು ಯುವತಿಯನ್ನು ಥಳಿಸಿಲ್ಲ ಹಾಗೂ ಎಂದಿಗೂ ತಪ್ಪಾಗಿ ನಡೆದುಕೊಂಡಿಲ್ಲ. ಯುವತಿಯ ತಾಯಿ ಮತ್ತು ಸಹೋದರ ನನ್ನ ಮೇಲೆ ಮತ್ತು ಇತರ ಮೂವರನ್ನು ಸುಳ್ಳು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ. ನಾವೆಲ್ಲರೂ ನಿರಪರಾಧಿಗಳು. ದಯವಿಟ್ಟು ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸುತ್ತೇವೆ” ಎಂದು ಬರೆದಿದ್ದಾನೆ.
ಇದನ್ನೂ ಓದಿ: ಹತ್ರಾಸ್ ಪ್ರಕರಣದಲ್ಲಿ ಟ್ವಿಸ್ಟ್: ಸಂತ್ರಸ್ತೆ ಮತ್ತು ಆರೋಪಿಗಳು ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು ಎಂದ ಪೊಲೀಸರು
ಆರೋಪಿಗಳು ಇರುವ ಅಲಿಗಡ್ ಜೈಲಿನ ಹಿರಿಯ ಅಧಿಕಾರಿಯೊಬ್ಬರು ಆರೋಪಿಗಳು ಹತ್ರಾಸ್ ಪೊಲೀಸರಿಗೆ ಪತ್ರ ಬರೆದಿರುವುದನ್ನು ದೃಢಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. “ಆರೋಪಿಗಳು ನಿನ್ನೆ ಸಂಜೆ ಹತ್ರಾಸ್ ಪೊಲೀಸ್ ಅಧೀಕ್ಷಕರಿಗೆ ತಮ್ಮ ಪತ್ರವನ್ನು ಕಳುಹಿಸಿದ್ದು, ಕಾನೂನಿನ ಪ್ರಕಾರ ನಾವು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದೇವೆ. ಮುಂದಿನದು ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತವೆ” ಎಂದು ಅಲಿಗಡ್ ಜೈಲಿನ ಹಿರಿಯ ಅಧೀಕ್ಷಕ ಅಲೋಕ್ ಸಿಂಗ್ ತಿಳಿಸಿದ್ದಾರೆ.
ಆರೋಪಿ ಸಂದೀಪ್ ಠಾಕೂರ್ ಜೊತೆ ಯುವತಿಯ ಸಹೋದರ ಸಂಪರ್ಕ ಹೊಂದಿರುವುದು ಮೊಬೈಲ್ ಕಾಲ್ ದಾಖಲೆಗಳು ಬಹಿರಂಗಪಡಿಸುತ್ತವೆ ಎಂದಿರುವ ಯುಪಿ ಪೊಲೀಸರು, ಕಳೆದ ವರ್ಷ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಯುವತಿಯ ಸಹೋದರ ಮತ್ತು ಸಂದೀಪ್ ಠಾಕೂರ್ ನಡುವೆ ಸುಮಾರು 104 ಕರೆಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಆರೋಪಿಗಳನ್ನು ಬೆಂಬಲಿಸಲು ಮೇಲ್ಜಾತಿಯವರ ಸಭೆ ಕರೆದ ಬಿಜೆಪಿ!
ಅತ್ಯಾಚಾರ ಆರೋಪಿಗಳು ಮಾಡಿದ ಆರೋಪಗಳನ್ನು ಸಂತ್ರಸ್ತೆಯ ತಂದೆ ನಿರಾಕರಿಸಿದ್ದಾರೆ. “ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಈಗ ಅವರು ನಮ್ಮನ್ನು ಕೆಣಕಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಹೆದರುವುದಿಲ್ಲ. ಅವರ ಆರೋಪಗಳು ಸಂಪೂರ್ಣವಾಗಿ ಸುಳ್ಳಾಗಿದ್ದು, ನಮಗೆ ಯಾವುದೇ ಪರಿಹಾರ ಅಥವಾ ಹಣ ಬೇಕಾಗಿಲ್ಲ. ನಮಗೆ ನ್ಯಾಯ ಬೇಕು” ಎಂದಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಸಂತ್ರಸ್ತೆ ಕೊನೆಯದಾಗಿ ಮಾತನಾಡಿದ ವಿಡಿಯೋ ವೈರಲ್: ಆಕೆ ಹೇಳಿದ್ದೇನು?
ಹತ್ರಾಸ್ ಪ್ರಕರಣದಲ್ಲಿ ನಡೆಯುತ್ತಿರುವ ಹೊಸ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹೆಣ್ಣುಮಗಳ ಚಾರಿತ್ರ್ಯಹರಣ ಮಾಡುವ ನಿರೂಪಣೆಗಳನ್ನು ಹರಿಯಬಿಟ್ಟು, ಅವಳ ವಿರುದ್ಧದ ಅಪರಾಧಕ್ಕೆ ಯಾರೋ ಕಾರಣ ಎಂದು ತಿರುಚಲಾಗುತ್ತಿದೆ. ಅಮಾನುಷ ಅಪರಾಧ ನಡೆದು 20 ವರ್ಷದ ಯುವತಿ ಪ್ರಾಣ ಬಿಟ್ಟಿದ್ದಾಳೆ. ಯುವತಿಯ ದೇಹವನ್ನು ಕುಟುಂಬದ ಉಪಸ್ಥಿತಿಯಿಲ್ಲದೆ ಹಾಗೂ ಒಪ್ಪಿಗೆಯಿಲ್ಲದೆ ಸುಡಲಾಗಿದೆ. ಯುವತಿಗೆ ನ್ಯಾಯ ಬೇಕಾಗಿದೆ, ಅಪನಿಂದನೆಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಸಾವಿಗೀಡಾದ ಯುವತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಮುಖಂಡ

