ಬಿಹಾರ ಚುನಾವಣೆ: ಯುವನಾಯಕರಿಗೆ ಅಗ್ನಿ ಪರೀಕ್ಷೆ; ಬಿಜೆಪಿ-ಕಾಂಗ್ರೆಸ್ ಕತೆ ಏನು?
ಕೊರೊನಾ ವೈರಸ್ ಭೀತಿ, ಕೃಷಿ ಮಸೂದೆಗಳ ವಿರುದ್ಧದ ರೈತರ ಪ್ರತಿಭಟನೆಯ ನಡುವೆಯೂ ದೇಶದ ಚಿತ್ತ ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ನೆಟ್ಟಿದೆ. ಒಂದು ವೇಳೆ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ, ಜನರು ಕೃಷಿ ಮಸೂದೆಗಳ ಪರವಾಗಿದ್ದಾರೆ ಎಂದು ಹೇಳಿಕೊಳ್ಳಲು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದ್ದು, ಬಿಜೆಪಿ ರಾಷ್ಟ್ರ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಇಳಿಸಿದೆ.
ಇತರ ಪಕ್ಷಗಳು ಪ್ರಚಾರ ಆರಂಭಿಸುವುದಕ್ಕೂ ಮುನ್ನವೇ ಬಿಜೆಪಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ಪ್ರಚಾರಕ್ಕೆ ಕರೆತಂದಿದೆ.
ಬಿಹಾರದಲ್ಲಿ ಎನ್‌ಡಿಎ ಮೈತ್ರಿಯನ್ನು ಮುನ್ನಡೆಸುತ್ತಿರುವ ಜಿಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರೆ, ಪ್ರಚಾರದ ವೇಳೆ ಹಲವು ಕ್ಷೇತ್ರಗಳಲ್ಲಿ ಅವರಿಗೆ ಧಿಕ್ಕಾರದ ಮೂಲಕ ಸ್ವಾಗತವನ್ನು ಕೋರಲಾಗುತ್ತಿದ್ದು, ನಿತೀಶ್ ಕುಮಾರ್‌ರನ್ನು ವಿಚಲಿತಗೊಳಿಸಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿಗಳ ಮುಖಾಮುಖಿ ಚರ್ಚೆಗೆ ತೇಜಸ್ವಿ ಯಾದವ್ ಸವಾಲು
ಈ ಮಧ್ಯೆ. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಪಣತೊಟ್ಟು, ಎನ್‌ಡಿಎ ಮೈತ್ರಿ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಲು ಲೋಕ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ನಿರ್ಧರಿಸಿದ್ದು, ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಹೊಣೆಯನ್ನು ಯುವನಾಯಕ ಚಿರಾಗ್ ಪಾಸ್ವಾನ್ ಹೊತ್ತಿದ್ದಾರೆ.
ಅಲ್ಲದೆ, ಎನ್‌ಡಿಎಯನ್ನು ಚುನಾವಣೆಯಲ್ಲಿ ಅಣಿಯಲು ಕಾಂಗ್ರೆಸ್-ಆರ್‌ಜೆಡಿ ನೇತೃತ್ವದಲ್ಲಿ ಮಹಾಘಟಬಂಧನ್ ಮೈತ್ರಿಕೂಟ ಸಿದ್ದತೆ ನಡೆಸುತ್ತಿದೆ. ಆದರೆ, ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಯಾವುದೇ ರಾಷ್ಟ್ರ ನಾಯಕರೂ ಇನ್ನೂ ಬಿಹಾರ ಚುನಾವಣಾ ಅಖಾಡ ಪ್ರವೇಶಿಸಿಲ್ಲ. ಮಹಾಘಟಬಂಧನ್ ಕೂಟದ ಹೊಣೆ ಹೊತ್ತಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಗೂ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬುಂತಹ ಸಂಧಿಗ್ಧತೆಯನ್ನು ಮುಂದಿಟ್ಟಿದೆ.
ಎನ್‌ಡಿಎ ತೊರೆದು ಸ್ವತಂತ್ರ್ಯವಾಗಿ ಸ್ಪರ್ಧಿಸಲು ಮುಂದಾಗಿರುವ ಎಲ್‌ಜೆಪಿಗೆ ತೇಜಸ್ವಿ ಯಾದವ್ ಸಾಥ್ ನೀಡಿದ್ದು, “ಚಿರಾಗ್ ಪಾಸ್ವಾನ್ ಅವರೊಂದಿಗೆ ನಿತೀಶ್ ಕುಮಾರ್ ವರ್ತಿಸಿರುವ ರೀತಿ ಸರಿಯಲ್ಲ. ಚಿರಾಗ್ ಪಾಸ್ವಾನ್ ಅವರಿಗೆ ಹಿಂದೆಂದಿಗಿಂತಲೂ ಈ ಸಮಯದಲ್ಲಿ ಅವರ ತಂದೆಯ ಅಗತ್ಯವಿದೆ. ಆದರೆ ರಾಮ್ ವಿಲಾಸ್ ಪಾಸ್ವಾನ್ ನಮ್ಮ ನಡುವೆ ಇಲ್ಲ. ಈ ಬಗ್ಗೆ ನಾವು ದುಃಖಿತರಾಗಿದ್ದೇವೆ. ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್‌ಗೆ ಅನ್ಯಾಯ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ: ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆ; ಕೃಷಿ ನೀತಿ ರದ್ದತಿ, ಉದ್ಯೋಗ ಸೃಷ್ಟಿಯ ಗುರಿ
ಎರಡು ವಾರಗಳ ಹಿಂದಷ್ಟೇ ಎಲ್‌ಜೆಪಿ ಸಂಸ್ಥಾಪಕ, ಚಿರಾಗ್ ಪಾಸ್ವನ್ ಅವರ ತಂದೆ ಸಾವನ್ನಪ್ಪಿದ್ದಾರೆ. ಅವರ ಸಾವಿನ ನಂತರ ದುಖಃದ ಸಮಯದಲ್ಲೂ ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮಗಾಗಲಿ, ತಮ್ಮ ತಾಯಿಗಾಗಲಿ ಸಮಾಧಾನದ ಮಾತು ಕೂಡ ಆಡಲಿಲ್ಲ ಎಂದು ಚಿರಾಗ್ ಪಾಸ್ವಾನ್ ದೂಷಿಸಿದ್ದು, ತಮ್ಮ ತಂದೆಯ ಮರಣಾ ನಂತರ ನಿತೀಶ್ ಕುಮಾರ್ ಅವರ ವರಸೆ ಬದಲಾಗಿದೆ ಎಂದು ಆರೋಪಿಸಿ, ಎನ್‌ಡಿಎ ತೊರೆದು ಜೆಡಿಯು ವಿರುದ್ಧ ತೊಡೆತಟ್ಟಿದ್ದಾರೆ.
ಇನ್ನು, ತೇಜಸ್ವಿ ಯಾಧವ್ ಅವರ ತಂದೆ, ಎಲ್‌ಜೆಪಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಮೇವು ಹಗರಣದಲ್ಲಿ ರಾಂಚಿ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಹೀಗಾಗಿ ಬಿಹಾರ ಚುನಾವಣೆಯಲ್ಲಿ ಯುವ ನಾಯಕರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದ್ದು, ಚುನಾವಣೆಯು ಯುವನಾಯಕರಿಗೆ ಪರೀಕ್ಷೆಯಾಗಿದೆ.
ಬಿಹಾರಕ್ಕೆ ಯುವ ನಾಯಕತ್ವದ ಅವಶ್ಯಕತೆಯಿದೆ. ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರದ ಪಾಲಿಗೆ ದೊಡ್ಡ ದುರಂತವಾಗಿ ಪರಿಣಮಿಸಲಿದೆ ಎಂದು ನಿತೀಶ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಚಿರಾಗ್ ಪಾಸ್ವಾನ್, ಬಿಜೆಪಿ ವೈರತ್ವ ಕಟ್ಟಿಕೊಳ್ಳದೇ ಎನ್‌ಡಿಎಯಿಂದ ಹೊರಬಂದಿರುವುದರ ಹಿಂದೆ ರಾಜಕೀಯ ತಂತ್ರವಿದೆ ಎಂದು ಹೇಳಲಾಗುತ್ತಿದೆ. ಚುನಾವಣಾ ನಂತರ ಚಿರಾಗ್‌ಗೆ ಬಿಜೆಪಿ ನಾಯಕತ್ವ ಮನ್ನಣೆ ನೀಡಲಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ. ಸಣ್ಣ ಪಕ್ಷವಾದರೂ ಜಾತಿಯ ಬೆಂಬಲದೊಂದಿಗೆ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿ ರಾಜ್ಯ ರಾಜಕೀಯದಲ್ಲಿ ಪ್ರಸ್ತುತವಾಗಿರಲು, ತಮ್ಮ ವರ್ಷಸ್ಸನ್ನು ಸ್ವತಂತ್ರವಾಗಿ ಪ್ರದರ್ಶಿಸಲು ಸೆಣಸಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬಿಹಾರ: ಬಿಜೆಪಿಯನ್ನು ಟ್ರೋಲ್ ಮಾಡುತ್ತಿವೆ ಈ ಹಾಡುಗಳು: ಹಾಡುಗಳನ್ನು ನೋಡಿ!
ತೇಜಸ್ವಿ ಯಾದವ್ ಅವರು ಚಿರಾಗ್ ಪಾಸ್ವಾನ್ ಗಿಂತಲೂ ತುಲನಾತ್ಮಕವಾಗಿ ಹೆಚ್ಚು ಪ್ರಬಲ ಮತ್ತು ದೃಢ ಮಾರ್ಗದಲ್ಲಿದ್ದಾರೆ ಎಂದು ವಿಶ್ಲೇಷಕರ ಅಭಿಪ್ರಾಯಪಟ್ಟುದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಏಕೈಕ ಅತಿದೊಡ್ಡ ಯಾದವ ಸಮುದಾಯದ ಪ್ರಾಮುಖ್ಯತೆಯ ಕಾರಣದಿಂದ ತೇಜಸ್ವಿ ಪ್ರಬಲರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಯಾದವ ಅಭ್ಯರ್ಥಿಗಳು ಮೊದಲ ಮತ್ತು ನಂತರದ ಸ್ಥಾನದಲ್ಲಿರುವುದು ತೇಜಸ್ವಿಗೆ ಇನ್ನಷ್ಟು ಬಲ ನೀಡಿದೆ.
ಇವರಷ್ಟೇ ಅಲ್ಲದೆ, ಯುವ ನಾಯಕರೇ ಪಕ್ಷಗಳನ್ನು ಮುನ್ನಡೆಸುತ್ತಿರುವ ಬಿಹಾರ ಚುನಾವಣೆಯಲ್ಲಿ ಯುವ ನಾಯಕರು, ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಆರ್‌ಜೆಡಿ, ಕಾಂಗ್ರೆಸ್, ಬಿಜೆಪಿ, ಜೆಡಿಯು, ಎಲ್‌ಜೆಪಿ ಪಕ್ಷಗಳಿಂದ ಹಲವಾರು ಯುವ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಿಹಾರ ಚುನಾವಣೆ ಯುವ ರಾಜಕಾರಣಿಗಳ ಅಖಾಡವಾಗಿ ಮಾರ್ಪಟ್ಟಿದೆ. ಇದೆಲ್ಲದ ನಡುವೆಯೂ ಕಾಂಗ್ರೆಸ್‌ನ ಅಬ್ಬರ ಕ್ಷೀಣಿಸಿದೆ.
ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 03 ಮತ್ತು 07 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ. ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂಬುದು ನ.10ರಂದು ತಿಳಿಯಲಿದೆ.
ಇದನ್ನೂ ಓದಿ: Fact Check: ಬಿಹಾರ ಚುನಾವಣೆಗೆ ಬಿಜೆಪಿ-ಜೆಡಿಯು ಮೈತ್ರಿ ಮತದಾರರನ್ನು ಸೆಳೆಯಲು ಮದ್ಯ ಹಂಚಿತೇ..?
ಇದನ್ನೂ ಓದಿ: ಬಿಹಾರ ಚುನಾವಣೆ: ಫಲಕೊಡುತ್ತಾ ಮೋದಿ ಇಮೇಜ್? ಬಿಜೆಪಿ ರೂಪಿಸಿದೆ ಮಾಸ್ಟರ್‌ಪ್ಲಾನ್!

