ನಂಬಿಕೆ ಮಾರಿಕೊಂಡವರನ್ನು ಸೋಲಿಸಿ; ಕ್ಷೇತ್ರದ ಶಾಂತಿಗಾಗಿ ಕಾಂಗ್ರೆಸ್‌ಗೆ ಮತನೀಡಿ: ಡಿಕೆಶಿ

‘ರಾಜರಾಜೇಶ್ವರಿ ನಗರದಲ್ಲಿ ಉಂಟಾಗುತ್ತಿರುವ ಅಶಾಂತಿಗೆ ಅಂತ್ಯ ಹಾಡಿ, ಕ್ಷೇತ್ರವನ್ನು ಎಲ್ಲ ರಂಗದಲ್ಲೂ ಅಭಿವೃದ್ಧಿ ಮಾಡಲು ನಿಮ್ಮ ಸಹೋದರಿ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಾಜಾರಾಜೆಶ್ವರಿ ನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಡಿಕೆಶಿ, ‘ನನ್ನ ಹಾಗೂ ನಿಮ್ಮ ಸೋದರಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ.  ನೀವೆಲ್ಲರೂ ವಿದ್ಯಾವಂತರು, ಬುದ್ಧಿವಂತರಿದ್ದೀರಿ. ಈ ಚುನಾವಣೆ ಯಾಕೆ ಬಂತು ಅಂತಾ ಒಮ್ಮೆ ಆಲೋಚನೆ ಮಾಡಿ. ಐದು ವರ್ಷ ಕೆಲಸ ಮಾಡಲು ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿರಿ. ಆದರೆ ಅವರು ಮಾಡಿದ್ದಾದರೂ ಏನು? ನಿಮ್ಮ ಮತವನ್ನು, ನಿಮ್ಮ ವಿಶ್ವಾಸವನ್ನು, ನಂಬಿಕೆಯನ್ನೇ ಅವರು ಮಾರಿಕೊಂಡರು ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.

ನೀವು ನಮಗೆ ಮತ ನೀಡುತ್ತೀರಿ ಅಂತ ನನಗೆ ವಿಶ್ವಾಸ ಇದೆ. ಅದಷ್ಟೇ ಸಾಲದು. ನೀವು ಬೇರೆ ಹತ್ತು ಜನರಿಂದ ಮತ ಹಾಕಿಸಬೇಕು. ಆ ಶಕ್ತಿ ನಿಮಗೆ ಬರಲಿ. ನೀವು ನಿಮ್ಮ ಕ್ಷೇತ್ರದ ರಕ್ಷಣೆ, ಎಲ್ಲ ರಂಗದ ಅಭಿವೃದ್ಧಿಗೆ, ಈ ಕ್ಷೇತ್ರದಲ್ಲಿ ಮೂಡುತ್ತಿರುವ ಅಶಾಂತಿ ನಿಗ್ರಹಕ್ಕೆ, ನಿಮ್ಮ ಮತದಾರ ಗುರುತಿನ ಚೀಟಿ ಕಿತ್ತುಕೊಂಡು ಚುನಾವಣೆ ಮಾಡುತ್ತಿರುವುದಕ್ಕೆ ಇತೀಶ್ರೀ ಹಾಡಲು ನೀವು ಮತ ಹಾಕಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.

ಇಂತಹ ವ್ಯಕ್ತಿಗೆ ಟಿಕೆಟ್ ಕೊಟ್ಟು, ಬೆಳೆಸಿ ನಾವು ಕೂಡ ತಪ್ಪು ಮಾಡಿದ್ದೇವೆ. ನಮ್ಮದು ಮಹಾಪರಾಧ. ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಚಾರ ಸಂದರ್ಭದಲ್ಲಿ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ, ಉಮಾಶ್ರೀ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ರಾಜಕುಮಾರ್, ಆನೇಕಲ್ ಶಾಸಕ ಶಿವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮತ್ತಿತರರು ಭಾಗವಹಿಸಿದ್ದರು.


ಇದನ್ನೂ ಓದಿ: ಶಿರಾ ಗೆಲ್ಲಲು ಬಿಜೆಪಿಗೆ ಕಷ್ಟ: ಕ್ಷೇತ್ರದಲ್ಲಿ ನಡೆಯುತ್ತಾ ವಿಜಯೇಂದ್ರ ತಂತ್ರಗಾರಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights