ಯುಪಿಎ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಸೋನಿಯಾ ಗಾಂಧಿ? ತೆರವಾಗುವ ಸ್ಥಾನಕ್ಕೆ ಶರದ್‌ ಪವಾರ್?

ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ)ಯ ಅಧ್ಯಕ್ಷರಾಗಿರುವ ಸೊನಿಯಾ ಗಾಂಧಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಅವರು ಅಧ್ಯಕ್ಷ ಸ್ಥಾನವನ್ನು ತೊರೆಯುವ ಸಾಧ್ಯತೆ ಇದೆ. ಹೀಗಾಗಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಅವರು ಯುಪಿಎ ಅಧ್ಯಕ್ಷರಾಗಿ ನೇಮಕಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಯುಪಿಎ ಮಿತ್ರಪಕ್ಷಗಳಲ್ಲಿರುವವರಲ್ಲಿ ಶರದ್ ಪವಾರ್ ಅತ್ಯಂತ ಹಿರಿಯ ನಾಯಕರಾಗಿದ್ದು, ಅವರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೂ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ತೀವ್ರ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿರುವ ಸೋನಿಯಾ ಗಾಂಧಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಲು ಬಯಸುತ್ತಿದ್ದಾರೆ. ಆದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೋರಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧೀ ಹಂಗಾಮಿ ಅಧ್ಯಕ್ಷರಾಗಲು ಒಪ್ಪಿದರು. ಆದರೂ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ದೆಹಲಿ ಗಲಬೆಗೆ ಅಮಿತ್‌ ಶಾ ನೇರ ಹೊಣೆ: ಸತ್ಯಶೋಧನಾ ವರದಿ

“ಯುಪಿಎ ಒಕ್ಕೂಟದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ. ಆದ್ದರಿಂದ, ಅಧ್ಯಕ್ಷರು ಕಾಂಗ್ರೆಸ್‌ನವರೇ ಆಗಿರಬೇಕು. ಆದರೆ ಸೋನಿಯಾ ಗಾಂಧಿ ನಿವೃತ್ತರಾದರೆ ಯುಪಿಎ ಮಿತ್ರ ಪಕ್ಷಗಳಲ್ಲಿ ಶರದ್ ಪವಾರ್ ಹಿರಿಯರಾಗಿರುವುದರಿಂದ, ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಮತ್ತು ಮೋದಿ ಆಡಳಿತದ ವಿರುದ್ಧ ಬಲವಾದ ಹೋರಾಟವನ್ನು ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು” ಎಂದು ಮೂಲಗಳು ತಿಳಿಸಿವೆ.

ಆದರೆ, ವಿದೇಶಿ ಮೂಲದವರಾಗಿದ್ದ ಸೋನಿಯಾ ಗಾಂಧಿಯವರನ್ನು ಪಕ್ಷಕ್ಕೆ ಕರೆತಂದದ್ದಕ್ಕೆ ಶರದ್ ಪವಾರ್ 1991 ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಆಗಿನಿಂದಲೂ ಪವಾರ್ ಮತ್ತು ಸೋನಿಯಾ ನಡುವೆ ವಿಶ್ವಾಸಾರ್ಹ ಕೊರತೆ ಮುಂದುವರೆದಿದೆ.

ಆದಾಗ್ಯೂ, ಎನ್‌ಸಿಪಿ ಮತ್ತು ಕಾಂಗ್ರೆಸ್ ಎರಡೂ ಯುಪಿಎನಲ್ಲಿ ಯಾವುದೇ ನಾಯಕತ್ವ ಬದಲಾವಣೆಯ ಕುರಿತ ವಿಷಯವನ್ನು ಅಲ್ಲಗಳೆದಿದ್ದು, “ಅಂತಹ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯುಪಿಎ ಒಳಗೆ ಯಾವುದೇ ಚರ್ಚೆ ನಡೆದಿಲ್ಲ” ಎಂದು ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಪಾಸೆ ಹೇಳಿದ್ದಾರೆ.

ರೈತರ ಆಂದೋಲನದಿಂದ ಗಮನವನ್ನು ಬೇರೆಡೆ ಸೆಳೆಯಲು ಪಟ್ಟಭದ್ರ ಹಿತಾಸಕ್ತಿಗಳಿಂದ ಈ ಸುದ್ದಿ ಹರಡಿದೆ ಎಂದು ಕಾಂಗ್ರೆಸ್ ಹೇಳಿದೆ.


ಇದನ್ನೂ ಓದಿ: ಭೂಸುಧಾರಣಾ ಮಸೂದೆಗೆ ಸಹಿ ಹಾಕಲ್ಲ; ರೈತರೊಂದಿಗೆ ಚರ್ಚಿಸಲು ಸರ್ಕಾರಕ್ಕೆ ಸೂಚಿಸುತ್ತೇನೆ: ರಾಜ್ಯಪಾಲರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights