BJP ಮತ್ತು RSS ಸಿಖ್‌ ಸಮುದಾಯವನ್ನು ಮುಗಿಸಲು ಯತ್ನಿಸುತ್ತಿದೆ: ಅತ್ಮಹತ್ಯಾ ಟಿಪ್ಪಣಿಯಲ್ಲಿ ಧರ್ಮಗುರು

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರು “ರೈತರಿಗಾಗಿ ನಾನು ನನ್ನ ಜೀವವನ್ನು ತ್ಯಾಗ ಮಾಡುತ್ತಿದ್ದೇನೆ” ಎಂದು ಆತ್ಮಹತ್ಯಾ ಟಿಪ್ಪಣಿ ಬರೆದಿಟ್ಟು ಸಿಖ್ ಧರ್ಮಗುರು ಬಾಬಾ ರಾಮ್ ಸಿಂಗ್ ಆತ್ಮಹತ್ಯೆ ಮಾಡಿದ್ದಾರೆ. ಅವರ ಆತ್ಮಹತ್ಯಾ ಟಿಪ್ಪಟಿಯಲ್ಲಿ “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿಖ್ ಜನಾಂಗವನ್ನೇ ಮುಗಿಸಲು ಪ್ರಯತ್ನಿಸುತ್ತಿದೆ” ಎಂದೂ ಕೂಡ ಬರೆದಿದ್ದಾರೆ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಈ ಕುರಿತು ವರದಿ ಮಾಡಿರುವ ದಿ ಪ್ರಿಂಟ್, “ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೇವಲ ರೈತರಿಗೆ ಮಾತ್ರ ಅನ್ಯಾಯ ಮಾಡುತ್ತಿಲ್ಲ. ಸಂಪೂರ್ಣ ಸಿಖ್ ಜನಾಂಗವನ್ನೇ ಮುಗಿಸಲು ಹವಣಿಸುತ್ತಿದೆ. ಇವರಿಂದ ಸಿಖ್ ಸಮುದಾಯವು ಹಲವು ಬಾರಿ ಆಕ್ರಮಣಕ್ಕೊಳಗಾಗಿದೆ ಮತ್ತು ಈಗಲೂ ಅಗುತ್ತಲೆ ಇದೆ. ಕೆಲವು ಸಿಖ್‌ಗಳು ಆರ್‌ಎಸ್‌ಎಸ್‌ನ ಅಂದಾಭಿಮಾನಿಗಳಾಗಿದ್ದಾರೆ. ಆರ್‌ಎಸ್‌ಎಸ್‌ನೊಂದಿಗೆ ಸಿಖ್‌ಗಳು ಸೇರಿಕೊಂಡಿರುವುದು ನಿಜಕ್ಕೂ ನಾಚಿಗೇಡು. ಕೆಲವರು ಅಧಿಕಾರದಾಸೆಯಿಂದ, ಕೆಲವರು ಹಣದಾಸೆಗಾಗಿ ಇನ್ನು ಕೆಲವರು ಬಲಾತ್ಕಾರದಿಂದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಜೊತೆಗಿದ್ದಾರೆ. ಹಾವಿನಂತೆ ಆರ್‌ಎಸ್‌ಎಸ್ ಸಿಖ್ ಸಮುದಾಯದ ಬಳಿ ಸುಳಿಯುತ್ತಲೇ ಇದೆ” ಎಂದು ಬರೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.

ಬಾಬಾ ರಾಮ್ ಸಿಂಗ್ ಒಟ್ಟು 10 ಪುಟಗಳ ಪತ್ರವನ್ನು ಬರೆದಿದ್ದು, ಈ ಪತ್ರದಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಲಾಗಿದೆ. “ಈ ಪತ್ರದಲ್ಲಿರುವ ಕೈಬರಹವು ಬಾಬಾ ರಾಮ್ ಸಿಂಗ್ ಅವರದ್ದೇ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಈ ಕುರಿತು ಯಾರಿಗಾದರೂ ಸಂಶಯಗಳಿದ್ದರೆ ಯಾವುದೇ ರೀತಿಯ ಪರೀಕ್ಷೆಯನ್ನೂ ನಡೆಸಬಹುದು” ಎಂದು ರಾಮ್ ಸಿಂಗ್ ಅವರ ಅನುಯಾಯಿ ಸಂತ್ ಭೋಲಾ ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಸಿಖ್‌ ಧರ್ಮಗುರು ಆತ್ಮಹತ್ಯೆ!

“ರೈತರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಡುತ್ತಿದ್ದಾರೆ. ಆ ನೋವನ್ನು ನಾನೂ ಅನುಭವಿಸುತ್ತಿದ್ದೇನೆ… ಸರ್ಕಾರವು ಅವರಿಗೆ ನ್ಯಾಯ ಒದಗಿಸದ ಕಾರಣ ನಾನೂ ಅವರ ನೋವನ್ನು ಹಂಚಿಕೊಳ್ಳುತ್ತೇನೆ. ಅನ್ಯಾಯವನ್ನು ಮಾಡುವುದು ಪಾಪ, ಆದರೆ ಅನ್ಯಾಯವನ್ನು ಸಹಿಸುವುದು ಕೂಡಾ ಪಾಪವಾಗಿದೆ. ರೈತರನ್ನು ಬೆಂಬಲಿಸಲು, ಕೆಲವರು ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ನಾನು ನನ್ನ ಪ್ರಾಣವನ್ನು ತ್ಯಾಗ ಮಾಡಲು ನಿರ್ಧರಿಸಿದ್ದೇನೆ” ಎಂದು ಬರೆದಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಶಿರೋಮಣಿ ಅಕಾಲಿ ದಳದ ಮುಖಂಡ ಸುಖ್‌ಬೀರ್ ಸಿಂಗ್ “ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿನ ರೈತರ ಸಂಕಟವನ್ನು ನೋಡುತ್ತಿದ್ದ ಸಂತ ಬಾಬಾ ರಾಮ್ ಸಿಂಗ್ ಜಿ ನಾನಕ್ಸರ್ ಸಿಂಗ್ರಾ ವಾಲೆ, ಸ್ವತಃ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸಂತ ಜಿ ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಪರಿಸ್ಥಿತಿ ಹದಗೆಡುವ ಮುನ್ನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಅಲಿಘಡ್ ವಿವಿಗೆ ಪ್ರಧಾನಿ: ಮೋದಿ ಭೇಟಿಗೆ ವಿದ್ಯಾರ್ಥಿಗಳ ವಿರೋಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights