ರೈತ ಹೋರಾಟದಲ್ಲಿ ದಲಿತ-ಭೂರಹಿತ ಕಾರ್ಮಿಕರು ಭಾಗಿಯಾಗಿದ್ದಾರೆ? ಅವರಿಗೂ ಹೋರಾಟಕ್ಕೂ ಏನು ಸಂಬಂಧ? ಡೀಟೇಲ್ಸ್‌

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟದಲ್ಲಿ ಹಲವಾರು ಭೂ ರಹಿತರು, ದಲಿತರು, ಕೃಷಿ ಕೂಲಿ ಕಾರ್ಮಿಕರು ಭಾಗಿಯಾಗಿದ್ದಾರೆ. ಅವರೂ ಕೂಡ ಸರ್ಕಾರದ ಮೂರು ಕೃಷಿ ನೀತಿಗಳು ರದ್ದಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪಂಜಾಬಿನ ಹಲವು ದಲಿತ ಕೂಲಿ ಮತ್ತು ಭೂ ಹೀನ ಕಾರ್ಮಿಕ ಕುಟುಂಬಗಳು, ಹೇಗೆ ಮೋದಿ ಸರ್ಕಾರದ ರೈತ ಮಸೂದೆಗಳು ತಮ್ಮ ಬದುಕನ್ನು ಪರೋಕ್ಷ ರೀತಿಯಲ್ಲಿ ಬೀದಿ ಪಾಲು ಮಾಡಿವೆ ಎಂಬುದನ್ನು ವಿವರಿಸಿದ್ದಾರೆ. ಕೃಷಿಯೇ ಬಂದ್ ಆಗಿರುವಾಗ ಅವತ್ತಿನ ಕೂಳನ್ನು ಅವತ್ತಿನ ಕೂಲಿಯಿಂದಲೇ ಪಡೆದುಣ್ಣಬೇಕಾದ  ಕೃಷಿ ಕೂಲಿಗಳ ಬದುಕು ರೈತಾಪಿಗಿಂತ ದುಸ್ತರವಾಗಿಬಿಟ್ಟಿದೆ. ರೈತನ ಆದಾಯ ಕುಸಿದರೆ ಅವನು ಕೊಡುವ ಕೂಲಿಯು ಕಡಿಮೆಯಾಗುತ್ತದೆ. ಜೊತೆಗೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಪಂಜಾಬಿನ ಬಹುಪಾಲು  ದಲಿತ ಸಮುದಾಯಕ್ಕೆ ಒಂದೆಕರೆ ಜಾಮೀನು ಸಿಕ್ಕಿಲ್ಲ. ಹೀಗಾಗಿ ತಮ್ಮ ಅನುದಿನದ ಬದುಕಿನ ಅಗತ್ಯಗಳಿಗೂ ತಾವು ಕೆಲಸ ಮಾಡುವ ರೈತರ ಬಳಿಯೇ ಸಾಲ ಸೋಲ ಮಾಡಬೇಕು. ಹೀಗಾಗಿ ಅವಲಂಬನೆ ಇನ್ನಷ್ಟು ಹೆಚ್ಚುತ್ತದೆ.

“ಖೇತ್ ಹಿ ನಹಿ ಬಚೆಂಗೆ ತೋ ಖೇತ್ ಮಜ್ದೂರ್ ಕರೆಂಗೆ ಕ್ಯಾ (ಹೊಲಗಳು ಅಸ್ತಿತ್ವದಲ್ಲಿಲ್ಲದಿದ್ದರೆ ಕೃಷಿ ಕಾರ್ಮಿಕನು ಏನು ಮಾಡುತ್ತಾನೆ?) ಮತ್ತು ರೈತರೇ ನಷ್ಟಕ್ಕೆ ಸಿಲುಕಿದರೆ, ಅವರು ನಮಗೆ ಹೇಗೆ ಕೂಲಿ ಕೊಡಲು ಸಾಧ್ಯ? ಈ ಹೋರಾಟದಲ್ಲಿ ನಾವು ಭಾಗಿಯಾಗಬೇಕು. ಇದು ರೈತ ಹೋರಾಟಕ್ಕೆ ಬೆಂಬಲ ಮಾತ್ರವಲ್ಲ, ನಮ್ಮ ಉಳಿವಿನ ಪ್ರಶ್ನೆ ಎಂದು ದಲಿತರು ಎಂದು ವರ್ಗೀಕರಿಸಲ್ಪಟ್ಟ ಮುಜಾಬಿ ಸಿಖ್ ಸಮುದಾಯಕ್ಕೆ ಸೇರಿದ ದೇವ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಉಪವಾಸ ಮಾಡಿ ಜೈಲಿನಿಂದಲೇ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಹೋರಾಟಗಾರರು!

ಬಹುಸಂಖ್ಯಾತ ಭೂರಹಿತರ ಪ್ರತಿನಿಧಿಯಾಗಿರುವ ದೇವ್‌ ಸಿಂಗ್‌ ಅವರ ಜೀವನದ ಹಾದಿಯು ವಿವಿಧ ಸ್ಥರಗಳಲ್ಲಿ ಪಂಜಾಬ್‌ನಲ್ಲಿರುವ ಭೂ ರಹಿತ ಕಾರ್ಮಿಕರ ದುಖಃಸ್ಥಿತಿಯನ್ನು ತೋರಿಸುತ್ತದೆ. ಅವರ ಇಡೀ ಬದುಕು ಭೂಮಿಯನ್ನು ಹೊಂದಿರುವ ರೈತ ಸಮುದಾಯವನ್ನು ಅವಲಂಬಿಸಿದೆ. ಈ ಕಾಯ್ದೆಗಳು ಅವರ ಜೀವನವನ್ನೇ ನಾಶಗೊಳಿಸುತ್ತವೆ ಎಂದು ಅವರು ಕೂಲಿ ಕಾರ್ಮಿಕರು ಹೇಳುತ್ತಾರೆ.

“ನಾನು ದುಡಿಮೆಯನ್ನು ಪ್ರಾರಂಭಿಸಿದಾಗ, ನಮಗೆ ಗಂಟೆಗೆ 3 ರೂ ಕೂಲಿ ಸಿಗುತ್ತಿತ್ತು. ಇಂದು, ನಮಗೆ ದಿನಕ್ಕೆ ಸುಮಾರು 300 ರೂ ಸಿಗುತ್ತಿದೆ. ನಾವು ಕನಿಷ್ಟ 12 ಗಂಟೆಗಳ ಕೆಲಸವನ್ನು ಮಾಡುತ್ತೇವೆ” ಎಂದು ಕೃಷಿ ಕಾರ್ಮಿಕ 65 ವರ್ಷದ ವೃದ್ದರೊಬ್ಬರು ಹೇಳಿದ್ದಾರೆ.

ಕೃಷಿಯಲ್ಲಿ ಸಮೃದ್ಧಿಯನ್ನು ಸಾಧಿಸುವವರು, ರೈತರು ಈ ದಲಿತ ಕಾರ್ಮಿಕರ ಕೊಡುಗೆಯನ್ನು ಕಡೆಗಣಿಸುವ ಹಾಗಿಲ್ಲ. ಭತ್ತ ಮತ್ತು ಗೋಧಿ ಬೆಳೆಯ ಹೆಚ್ಚು ಇಳುವರಿ ಪಡೆಯಲು ಈ ಕಾರ್ಮಿಕರ ಶ್ರಮದ ದುಡಿಮೆ ಸಾಕಷ್ಟಿದೆ.

“ಅವರು ಬಿತ್ತನೆ ಮಾಡುತ್ತಾರೆ, ಕೊಯ್ಲು ಮಾಡುತ್ತಾರೆ, ಜಾನುವಾರುಗಳನ್ನು ಸಾಕುತ್ತಾರೆ, ಕೃಷಿಭೂಮಿ ಮತ್ತು ರೈತರ ಕುಟುಂಬಕ್ಕೆ ಅಗತ್ಯ ಇರುವ ಇತರ ಎಲ್ಲ ಚಟುವಟಿಕೆಗಳನ್ನು ಮಾಡುತ್ತಾರೆ. ಭೂಮಿ ಹೊಂದಿರುವ ನಮ್ಮಂತಹ ರೈತರು ಈ ಕಾರ್ಮಿಕರ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ” ಎಂದು 22 ಎಕರೆ ಭೂಮಿ ಹೊಂದಿರುವ ರೈತ ಹರ್ವಿಂದರ್ ಸಿಂಗ್ ಹೇಳಿದ್ದಾರೆ.

ಪಂಜಾಬ್ ವಿಲೇಜ್ ಕಾಮನ್ ಲ್ಯಾಂಡ್ಸ್ ಆಕ್ಟ್, 1961 ರ ಪ್ರಕಾರ, ಸಾಮಾನ್ಯ ಭೂಮಿ ಅಥವಾ ಪಂಚಾಯತ್ ಭೂಮಿಯ ಮೂರನೇ ಒಂದು ಭಾಗದಷ್ಟು ಭೂಮಿಯ ಮೇಲೆ ದಲಿತರಿಗೆ ಮಾಲೀಕತ್ವದ ಹಕ್ಕುಗಳಿವೆ ಎಂದು ಹೇಳುತ್ತದೆ.

“ಆದಾಗ್ಯೂ, ಸಂಗ್ರೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಹೊರತುಪಡಿಸಿ ಪಂಜಾಬ್‌ನ ಹಲವು ಭಾಗಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿಲ್ಲ. ಈ ಕಾಯ್ದೆಗೆ ಸಾಕಷ್ಟು ಪ್ರತಿರೋಧವಿದೆ. ಅನೇಕ ಸಂದರ್ಭಗಳಲ್ಲಿ ಮೇಲ್ಜಾತಿಯ ಭೂಮಾಲೀಕರು ದಲಿತರ ಪರವಾಗಿ ಬಿಡ್‌ ಮಾಡುತ್ತಾರೆ ಮತ್ತು ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ”ಎಂದು ಪಂಜಾಬ್ ಖೇತ್ ಮಜ್ದೂರ್ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಚ್ಮನ್ ಸಿಂಗ್ ಸೆವೆವಾಲಾ ಹೇಳಿದ್ದಾರೆ.

“ನಾವು ರೈತರಿಗೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇವೆ. ನಮ್ಮ ಅಗತ್ಯ ಕಾಲದಲ್ಲಿ ಅವರು ನಮ್ಮೊಂದಿಗೆ ನಿಲ್ಲುತ್ತಾರೆ; ನಮಗೆ ವೈದ್ಯಕೀಯ ತರ್ತು ಪರಿಸ್ಥಿತಿಗಳು ಉಂಟಾದಾಗ ಅಥವಾ ಮದುವೆ ಸಂದರ್ಭದಲ್ಲಿ ಹೆಚ್ಚು ಹಣದ ಅಗತ್ಯವಿದ್ದಾಗ ನಮಗೆ ಭೂಮಿ ಹೊಂದಿರುವ ರೈತರು ನೆರವಾಗುತ್ತಾರೆ. ಅವರ ನೆರವು ಬಿಟ್ಟರೆ ನಮಗೆ ಬೇರಾವುದೇ ಹಣಕಾಸಿನ ಮೂಲವಿಲ್ಲ” ಎಂದು ಕೂಲಿ ಕೆಲಸ ಮಾಡುವ ತೇಜಾ ಬೇಗಂ ಹೇಳಿದ್ದಾರೆ.

“ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೃಷಿ ಕೂಲಿ ಕಾರ್ಮಿಕರು ಒಂದು ದಿನದ ಕೂಲಿಯಿಲ್ಲದೇ ಅಂದಿನ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಜೀವನೋಪಾಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ಭೂಮಿಯ ವಿಚಾರಕ್ಕಾಗಿಯೇ ಹಲವು ಬಾರಿ ದಲಿತರನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಲಾಗುತ್ತದೆ. ಅಂತಹ ದಲಿತರ ಪರವಾಗಿ ಸಂಘಟನೆಗಳು ಕೆಲಸ ಮಾಡುತ್ತಿವೆ. ಅವರಿಗಾಗಿ ನಿಲ್ಲುತ್ತಿವೆ ಎಂದು ಚಲನಚಿತ್ರ ನಿರ್ಮಾಪಕ ರಂದೀಪ್ ಮಡೋಕೆ ವಿವರಿಸಿದ್ದಾರೆ.


ಇದನ್ನೂ ಓದಿ: ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights