ಸಚಿವಾಕಾಂಕ್ಷಿ ಎಂ.ಪಿ ರೇಣುಕಾಚಾರ್ಯ ಮತ್ತೆ ದೆಹಲಿಗೆ ಹೋಗಿದ್ಯಾಕೆ…?
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಒಂದೇ ವಾರದಲ್ಲಿ ಎರಡು ಬಾರಿ ದೆಹಲಿಗೆ ಪ್ರಯಾಣ ಮಾಡಿದ್ದು ಭಾರೀ ಕುತೂಹಲ ಮೂಡಿಸಿದೆ.
ಮೊನ್ನೆಯಷ್ಟೆ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಬಿಜೆಪಿ ಆಂತರಿಕ ವಲಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಐದು ಮಂದಿ ವಿಧಾನಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ನೀಡಿದಕ್ಕಾಗಿ ಸಚಿವಾಕಾಂಕ್ಷಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಸಿ.ಪಿ ಯೋಗೇಶ್ವರ್ ವಿರುದ್ಧ ಗುಡುಗಿದ್ದಾರೆ.
ಎರಡನೇ ಬಾರಿಗೆ ದೆಹಲಿಗೆ ತೆರಳಿದ ಎಂಪಿ ರೇಣುಕಾಚಾರ್ಯ ಇಂದು ಬೆಳಿಗ್ಗೆ 9.30ಕ್ಕೆ ವರಿಷ್ಠರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ದೆಹಲಿಯಿಂದ ಮಾತನಾಡಿದ ಅವರು “ಇವತ್ತಿನ ಭೇಟಿ ಉದ್ದೇಶ ನಾನು ಬಹಿರಂಗವಾಗಿ ಹೇಳುವುದಿಲ್ಲ. ಗೌಪ್ಯತೆ ಕಾಪಾಡುತ್ತೇನೆ. ಪಕ್ಷದ ವರಿಷ್ಠರ ಜೊತೆ ನಾನು ನನ್ನ ನೋವನ್ನು ಹೇಳಿಕೊಂಡಿದ್ದೇನೆ. ಸಿಪಿ ಯೋಗೇಶ್ವರ್ ಅವರಿಂದ ಸರ್ಕಾರ ಬಂದಿದೆ ಅಂದರೆ ನನಗೆ ತುಂಬಾ ನೋವಾಯ್ತು. ಹಿಂದುತ್ವದಿಂದ ಪಕ್ಷ ಕಟ್ಟಲಾಗಿದೆ. ಪಕ್ಷ ಕಟ್ಟುವಲ್ಲಿ ಜನರಿಂದ ಆಯ್ಕೆಯಾದ 105 ಶಾಸಕರ ಶ್ರಮವಿದೆ. ಕೇವಲ ಯೋಗೀಶ್ವರಿಂದ ಪಕ್ಷ ಸ್ಥಾಪನೆ ಆಗಿಲ್ಲ. ಸಿಪಿ ಯೋಗೇಶ್ವರ್ ಜನರಿಂದ ಆಯ್ಕೆಯಾಗಿಲ್ಲ. ಜನರ ಬೆಂಬಲ ಇಲ್ಲ. ಆದರೂ ಪಕ್ಷ ಅವರಿಗೆ ಸಚಿವ ಸ್ಥಾನ ನೀಡಿದೆ ” ಎಂದು ಅಸಮಾಧಾನಗೊಂಡರು.
” ನಾನು ಬಾಯಿಗೆ ಬಂದಂತೆ ಮಾತನಾಡುವುದಿಲ್ಲ. ಈ ಹಿಂದೆ ನನ್ನಿಂದಲೂ ತಪ್ಪು ಆಗಿದೆ. ಮತ್ತೆ ಆ ತಪ್ಪು ಮಾಡದಂತೆ ನೋಡಿಕೊಳ್ಳುತ್ತೇನೆ. 105 ಶಾಸಕರಿಂದ ಪಕ್ಷ ನಿಂತಿದೆ. ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗಬಾರದು. ವಲಸೆ ಬಿಜೆಪಿಗರು ಯೋಗೇಶ್ವರ್ ಅವರಿಂದ ಬಂದಿದ್ದೇವೆ ಎಂದು ಹೇಳಿಲ್ಲ. ಆದರೆ ನಮ್ಮ ಪಕ್ಷದ ಸಚಿವರು ಈ ಮಾತನ್ನು ಹೇಳ್ತಾಯಿದ್ದಾರೆ ಇದು ನನಗೆ ನೋವಾಗಿದೆ. ನಮ್ಮ ಶಾಸಕರ ಶ್ರಮ ತುಂಬಾ ಇದೆ. ಇದನ್ನು ಮರೆಯಬಾರದು. ಯೋಗೇಶ್ವರ್ ನಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ವರಿಷ್ಠರನ್ನು ಭೇಟಿಯಾಗಿ ನನ್ನ ನೋವು ತೋಡಿಕೊಂಡಿದ್ದೇನೆ”ಎಂದರು.
ಒಟ್ಟಿನಲ್ಲಿ ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅಸಮಾಧಾನ ಇದ್ದು, ಯಾವ ರೀತಿ ಹೊರಗೆ ಕಾಣಿಸಿಕೊಳ್ಳುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

