‘ಹಳ್ಳಿಹಕ್ಕಿ’ಯ ಮಂತ್ರಿ ಕನಸು ನುಚ್ಚುನೂರು : ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ!
‘ಹಳ್ಳಿಹಕ್ಕಿ’ ಹೆಚ್.ವಿಶ್ವನಾಥ್ ಮಂತ್ರಿ ಕನಸು ನುಚ್ಚುನೂರಾಗಿದ್ದು ಹೈಕೋರ್ಟ್ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಸೇರಿದ ಹೆಚ್ ವಿಶ್ವನಾಥ್ ಸಚಿವರಾಗಬೇಕು ಎನ್ನುವ ಕನಸು ಕಂಡಿದ್ದರು. ಈ ಬಗ್ಗೆ ಯಡಿಯೂರಪ್ಪ ಅವರ ಬಳಿ ಮನವಿ ಕೂಡ ಮಾಡಿದ್ದರು. ಆದರೆ ಸದ್ಯ ಮಂತ್ರಿ ಕನಸು ನುಚ್ಚುನೂರಾಗಿದೆ.
ಈ ಹಿಂದೆ ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗೆ ಹಿನ್ನೆಡೆಯಾಗಿದೆ. ಸಾಹಿತ್ಯ ಕೋಟಾದಡಿ ಹೆಚ್. ವಿಶ್ವನಾಥ್ ಗೆ ವಿಧಾನ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿತ್ತು. ಹೈಕೋರ್ಟ್ ಈ ನಾಮನಿರ್ಧೆಶನದ ಮೇಲೆ ಸಚಿವ ಸ್ಥಾನ ಪಡೆಯೋಹಾಗಿಲ್ಲ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಹಳ್ಳಿಹಕ್ಕಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಹೈಕೋರ್ಟ್ ಹೇಳಿಕೆಯನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನಾಮನಿರ್ದೇಶನದ ಆಧಾರದ ಮೇಲೆ ಸಚಿವ ಸ್ಥಾನ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಶ್ವನಾಥ್ ಸಚಿವಸ್ಥಾನ ಕೈಗೆಟಕದೇ ಇದ್ದದ್ದು ದೇವರ ಶಾಪ ಎಂದು ಹೇಳಿದ್ದ ಜೆಡಿಎಸ್ ಶಾಸಕ ಸಾರಾ ಮಹೇಶ್ ಈ ಬಗ್ಗೆ ಪ್ರತಿಕ್ರಿಯಿಸಿ, “ಮೊದಲೇ ನಾನು ಹೇಳಿದ್ದೆ. ಅವರು ಹಿಂದೆ ಚುನಾವಣೆಯಲ್ಲಿ ಸೋತಿದ್ದಾರೆ. ಅವರನ್ನು ಸಮಾಧಾನ ಮಾಡೋದಕ್ಕೆ ಬಿಜೆಪಿಯವರು ಪರಿಷತ್ ಸದಸ್ಯತ್ವ ಕೊಟ್ಟಿದ್ದಾರೆ. ಈ ಹುದ್ದೆ ಕೊಟ್ಟಿದ್ದು ತಪ್ಪೇ. ಯಾಕೆಂದರೆ ವಿಶ್ವನಾಥ್ ಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿರುವುದೇ ಸರ್ವೋಚ್ಚನ್ಯಾಯಲಾಯದ ತೀರ್ಪುಗೆ ವಿರೋಧವಾಗಿದೆ. ವಿಧಾನ ಪರಿಷತ್ ಸದಸ್ಯತ್ವ ಯಾರಾದರೂ ಪ್ರಶ್ನಿಸಿದರೆ ಆ ಹುದ್ದೆವೂ ಕೈತಪ್ಪಿ ಹೋಗಬಹುದು. ಇವರ ಮೇಲೆ ನಾಡದೇವತೆ ಶಾಪ ಇದು. ಜೆಡಿಎಸ್ ನಿಂದ ಬೇಸತ್ತು ಹೋಗಿಲ್ಲ. ಅಧಿಕಾರದಾಸೆಗೆ ಹೋಗಿದ್ದಾರೆ” ಎಂದು ಗಾಯದ ಮೇಲೆ ತುಪ್ಪ ಸುರಿದಿದ್ದಾರೆ.

