ಫೆ.26ರಂದು ಆರಂಭವಾಗಬೇಕಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ!
ಫೆ.26ರಂದು ಹಾವೇರಿಯಲ್ಲಿ ಆರಂಭವಾಗಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ತಿಳಿಸಿದ್ದಾರೆ.
ಸಮ್ಮೇಳನಲ್ಲಿ ಹೆಚ್ಚು ಜನ ಸೇರುವುದರಿಂದ ಕೊರೊನಾ ನಿಯಮಗಳ ಪಾಲನೆ ಕಷ್ಟವಾಗುತ್ತದೆ. ಹೀಗಾಗಿ ಫೆಬ್ರವರಿ ಅಂತ್ಯಕ್ಕೆ ಹೊಸ ಮಾರ್ಗಸೂಚಿ ಪ್ರಕಟವಾಗಲಿದ್ದು, ಮಾರ್ಗಸೂಚಿಗೆ ಅನುಗುಣವಾಗಿ ರೂಪುರೇಷೆ ರೂಪಿಸವು ಉದ್ದೇಶದಿಂದ ಸಮ್ಮೇಳನವನ್ನು ಮುಂದೂಡಲಾಗಿದೆ. ಹೊಸ ಮಾರ್ಗಸೂಚಿ ಬಂದ ನಂತರ ಮಾರ್ಚ್ 9ರಂದು ಮತ್ತೊಮ್ಮೆ ಸಭೆ ನಡೆಸಿ, ಸಮ್ಮೇಳನ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಲಿಂಬಾವಳಿ ತಿಳಿಸಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನ ಮುಂದೂಡಲು ನಿರ್ಧರಿಸಲಾಗಿದೆ.
ಈ ಹಿಂದೆ ಫೆ.26ರಿಂದ 28ರವರೆಗೆ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಅದಕ್ಕೆ ಅನುಗುಣವಾಗಿ ಸಿದ್ದತೆಗಳು ನಡೆದಿದ್ದವು. ವೇದಿಕೆಗಳ ಸ್ಥಳ ನಿಗದಿ, ಗೋಷ್ಠಿಗಳ ಸ್ವರೂಪ ಮತ್ತು ವಿಷಯ ಆಯ್ಕೆಗೆ ಸಮಿತಿ ರಚನೆ ಸೇರಿದಂತೆ ಹಲವು ಪ್ರಕ್ರಿಯೆ ನಡೆದಿತ್ತು.
ಈ ಬಾರಿಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕವಿ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿತ್ತು.
ರಾಜಕೀಯ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆಗ ಇಲ್ಲದ ನಿಯಮ, ಸಮ್ಮೇಳನಕ್ಕೆ ಅಡ್ಡ ಬರುತ್ತಾ? ರಾಜಕೀಯ ಸಮಾವೇಶಗಳಿಗೆ ಇಲ್ಲದ ರೂಲ್ಸ್ ಸಾಹಿತ್ಯ ಸಮ್ಮೇಳನಕ್ಕೆ ಏಕೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅನಿಲ್ ಕುಂಬ್ಳೆಗೆ ನಾಚಿಕೆಯಾಗಬೇಕು ಎಂದ ಕನ್ನಡಿಗರು; ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದಿದ್ದೇಕೆ?

