ವಿಧಾನ ಪರಿಷತ್ ಚುನಾವಣೆ: ಗದ್ದಲದ ನಡುವೆ ಸಭಾಪತಿಯಾಗಿ ಹೊರಟ್ಟಿ ಆಯ್ಕೆ!
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿಯ ನಡುವೆಯೂ ಜೆಡಿಎಸ್‌ನ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ಪರಿಷತ್‌ನ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಲ್ಲಿ ಹೊರಟ್ಟಿ ಅವರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಉಭಯ ಪಕ್ಷಗಳ ಸದಸ್ಯರು ಆಯ್ಕೆ ಮಾಡಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಸತತ 41 ವರ್ಷಗಳಿಂದ ಪರಿಷತ್ ಸದಸ್ಯರಾಗಿರುವ ಹಿರಿಯ ಸದಸ್ಯರೂ ಆದ ಹೊರಟ್ಟಿ ಅವರು ಎರಡನೇ ಬಾರಿಗೆ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೇಶದಲ್ಲಿಯೇ ಸುಧೀರ್ಘ ಅವಧಿಗೆ ಸದಸ್ಯರಾಗುವ ಮೂಲಕ ಹೊರಟ್ಟಿ ದಾಖಲೆ ಬರೆದಿದ್ದಾರೆ.
ಮಂಗಳವಾರ ಬೆಳಿಗ್ಗೆ ಪರಿಷತ್ ಆಧಿವೇಶನ ಆರಂಭವಾದ ಸಮಯದಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ, ಗೋಹತ್ಯೆ ನಿಷೇಧ ಕಾನೂನಿಗೆ ನಿನ್ನೆ ಪರಿಷತ್‌ನಲ್ಲಿ ಅಂಗೀಕರಿಸಿದ್ದನ್ನು ವಿರೋಧಿಸಿ, ಮಸೂದೆಯನ್ನು ವಿಭಜನೆ ಮತಕ್ಕೆ ಹಾಕದೆ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಮಸೂದೆಯನ್ನು ಮತ್ತೊತ್ತೆ ಚರ್ಚೆಗೆ ತಂದು ಮತಕ್ಕೆ ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದರು.

ಆದರೂ, ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆಯೂ ಸಭಾಪತಿಗಳನ್ನು ಆಯ್ಕೆ ಮಾಡಲಾಗಿದೆ.
ಹೊರಟ್ಟಿ ಅವರು ಈ ಮೊದಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು ಒಂದು ವರ್ಷ ಕಾಲ ಸಭಾಪತಿ ಹುದ್ದೆಯನ್ನೂ ಅಲಂಕರಿಸಿದ್ದರು.
ಇದನ್ನೂ ಓದಿ: BJP ಮುಖಂಡನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ಬಹುಮಾನ: ಕಾಂಗ್ರೆಸ್ ನಾಯಕಿ ಘೋಷಣೆ!

