ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ; ಸರ್ಕಾರ ರಚನೆಗೆ BJP ಹಿಂದೇಟು; ರಾಷ್ಟ್ರಪತಿ ಆಡಳಿತ ಸಾಧ್ಯತೆ!

ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್‌ ಸರ್ಕಾರ ಪತನಗೊಂಡಿದ್ದು ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಹಿಂದೇಟು ಹಾಕುತ್ತಿದ್ದು, ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪುದುಚೇರಿ ವಿಧಾನಸಭೆಯಲ್ಲಿ 30 ಶಾಸಕರ ಸಂಖ್ಯಾಬಲವಿದ್ದು, ಕಾಂಗ್ರೆಸ್ 15 ಸದಸ್ಯರನ್ನು ಹೊಂದಿತ್ತು, ಡಿಎಂಕೆ ಪಕ್ಷದ ಮೂವರು ಮತ್ತು ಒಬ್ಬ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಅಗತ್ಯ ಬಹುಮತ 16 ಕ್ಕಿಂತ ಹೆಚ್ಚು ಸಂಖ್ಯಾಬಲವನ್ನು ಕಾಂಗ್ರೆಸ್‌ ಸರ್ಕಾರ ರಚಿಸಿತ್ತು. ಆದರೆ, ಕಾಂಗ್ರೆಸ್‌ನ ನಾಲ್ವರು ಶಾಸಕರ ರಾಜೀನಾಮೆ ನೀಡಿದ್ದರಿಂದಾಗಿ ಸರ್ಕಾರ ಮತ್ತು ಪ್ರತಿಪಕ್ಷ ಇಬ್ಬರೂ ಕೂಡ 14 ನೇ ಸ್ಥಾನಗಳನ್ನು ಹೊಂದಿದ್ದು, ಸಮಬಲದಲ್ಲಿದ್ದರು. ಬಹುಮತ ಸಾಬೀತಿಗೆ ಅಗತ್ಯ ಸ್ಥಾನಗಳ ಸಂಖ್ಯೆ 15 ಆಗಿದ್ದು, ಕಾಂಗ್ರೆಸ್‌ ಸರ್ಕಾರ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಸಿಎಂ ರಾಜೀನಾಮೆ ನೀಡಿದ್ದು, ಸರ್ಕಾರ ಪತನಗೊಂಡಿದೆ.

ಚುನಾವಣೆ ವಸ್ತಿಲಿನಲ್ಲಿರುವ ಸಂದರ್ಭದಲ್ಲಿ ನಾವು ಸರ್ಕಾರವನ್ನು ರಚಿಸಲು ಪ್ರಯತ್ನ ಮಾಡುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿ ಮತ್ತು ಮಿತ್ರ ಪಕ್ಷಗಳು ರಚಿಸುವ ಸರ್ಕಾರವು ಪುದುಚೇರಿಯಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಮಾಡಲಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸ್ವಾಮಿನಾಥನ್ ಹೇಳಿದ್ದಾರೆ.

ಪುದುಚೇರಿಯಲ್ಲಿ ಕಾಂಗ್ರೆಸ್‌-ಡಿಎಂಕೆ ಸರ್ಕಾರ ಪತನಗೊಳ್ಳಲು ಬಿಜೆಪಿಯೇ ಕಾರಣ. ರಾಜ್ಯದಲ್ಲಿ ಬಿಜೆಪಿ ಆಪರೇಷನ್‌ ಕಮಲ ನಡೆಸಿದ್ದು, ಕಾಂಗ್ರೆಸ್‌ ಶಾಸಕರಿಂದ ರಾಜೀನಾಮೆ ಕೊಡಿಸಿದೆ ಎಂದು ವಿ ನಾರಾಯಣಸ್ವಾಮಿ ಕಳೆದ ಮೂರು ದಿನಗಳ ಹಿಂದೆ ಆರೋಪಿಸಿದ್ದರು.

ಇದನ್ನೂ ಓದಿ: ರಾಹುಲ್‌ಗಾಂಧಿ‌ ಬಳಿ ಸರ್ಕಾರದ ವಿರುದ್ದ ಮಹಿಳೆ ಆರೋಪ; ನಮ್ಮನ್ನು ಹೊಗಳಿದ್ದಾರೆಂದು ಅನುವಾದಿಸಿದ ಪುದುಚೇರಿ ಸಿಎಂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights